ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಡೀ ವಿಶ್ವದ ಗಮನ ಸೆಳೆದಿರುವ ಕರಾವಳಿಯ ಸಾಂಸ್ಕೃತಿಕ ಹಾಗೂ ಜಾನಪದ ಕ್ರೀಡೆ ರಾಜ್ಯ ರಾಜಧಾನಿಗೂ ಸಹ ಪಸರಿಸಿದ ಬೆನ್ನಲ್ಲೇ ಮಲೆನಾಡಿನ ಶಿವಮೊಗ್ಗಕ್ಕೂ ಸಹ ಲಗ್ಗೆ ಹಾಕಲಿದ್ದು, ಇದಕ್ಕಾಗಿ ಯೋಜನೆಗಳು ನಡೆದಿವೆ.
ಹೌದು… ರಾಜ್ಯ ರಾಜಧಾನಿಯಲ್ಲಿ ಯಶಸ್ವಿಯಾಗಿ ನಡೆದು, ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಂಬಳ ಮಲೆನಾಡಿನಲ್ಲೂ ಸಹ ಅಬ್ಬರಿಸಲು ಸಜ್ಜಾಗಿದ್ದು, ಇದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಯಾವಾಗ, ಎಲ್ಲಿ ನಡೆಯಲಿದೆ?
ಯೋಜನೆಯಂತೆ 2025ರ ಏಪ್ರಿಲ್ 19ರ ಶನಿವಾರ ಹಾಗೂ 20 ಭಾನುವಾರ ಮಾಚೇನಹಳ್ಳಿ ಬಳಿಯ ಬೃಹತ್ ಮೈದಾನದಲ್ಲಿ ನಡೆಯಲಿದೆ.
ಯಾರ ನೇತೃತ್ವದಲ್ಲಿ ಆಯೋಜನೆ?
ಕರಾವಳಿಯ ಕಂಬಳವನ್ನು #Kambala ಮಲೆನಾಡಿನಲ್ಲಿ ಆಯೋಜಿಸುವ ನೇತೃತ್ವವನ್ನು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ವಹಿಸಿಕೊಂಡಿದ್ದಾರೆ.
ತಮ್ಮ ಸಾರ್ವಜನಿಕ ಜೀವನದಾದ್ಯಂತ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ನಿರಂತರವಾಗಿ ಪೋಷಿಸಿಕೊಂಡು ಬರುತ್ತಿರುವ ಕೆ.ಎಸ್. ಈಶ್ವರಪ್ಪನವರು ಮಲೆನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಇಂತಹ ನಾಯಕ ಈಗ ಮಲೆನಾಡ ಕಂಬಳದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.
ಶಿವಮೊಗ್ಗ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಎಸ್. ಈಶ್ವರಪ್ಪ, #K S Eshwarappa ಅಧ್ಯಕ್ಷರಾಗಿ ಲೋಕೇಶ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಕೆ.ಈ. ಕಾಂತೇಶ್, ಕಾರ್ಯದರ್ಶಿಯಾಗಿ ಇಲಿಯಾಸ್ ಸೇರಿದಂತೆ ಹಲವರು ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಇನ್ನು, ತೀರ್ಥಹಳ್ಳಿ ಹೆಗಲತ್ತಿ ನಾಗಯಕ್ಷೆ ದೇವಾಲಯದ ಕೆ.ಎಸ್. ನಾಗಪಾತ್ರಿ, ಕಲ್ಪನ ಸಂತೋಷ್ ಸೇರಿದಂತೆ ಹಲವರು ಈ ಚಿಂತನೆಯನ್ನು ಹೊರಹಾಕಿದ್ದು, ಇದಕ್ಕೊಂದು ಅಧಿಕೃತ ರೂಪ ಈಗ ಹೊರಬಿದ್ದಿದೆ.
ಈ ಕುರಿತಂತೆ ಮಾತನಾಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕರಾವಳಿಯ ಕಂಬಳ ಎಂದರೆ ಕೇವಲ ಒಂದು ಕ್ರೀಡೆಯಲ್ಲ, ಬದಲಾಗಿ ಅದೊಂದು ಪರಾಕ್ರಮದ ಸಂಕೇತ. ಇಂತಹ ಕಂಬಳವನ್ನು ಮಲೆನಾಡಿನಲ್ಲಿ ಇದೇ ಮೊದಲ ಬಾರಿಗೆ ಆಯೋಜನೆ ಮಾಡುತ್ತಿರುವುದು ಸಂತೋಷದ ಸಂಗತಿ. ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.
ಶಿವಮೊಗ್ಗದಲ್ಲಿ ನಡೆಯಲಿರುವ ಈ ಕಂಬಳವನ್ನು ಎಲ್ಲ ಜಿಲ್ಲೆಗಳ ಜನರೂ ಸಹ ನೋಡಿ ಆನಂದಿಸಬೇಕು. ಕಂಬಳ ಕೇವಲ ಒಂದು ಆಟವಲ್ಲ, ಅದೊಂದು ಪರಾಕ್ರಮ, ಒಂದು ಸ್ಪೂರ್ತಿಯಾಗಿದೆ. ಒಂದೊಂದು ಕೋಣದ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತಹ ಕೋಣಗಳು ಓಡುವುದನ್ನು ನೋಡುವುದೇ ಒಂದು ಚೆಂದ. ಇದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದರು.
ಕೆ.ಈ. ಕಾಂತೇಶ್ ಮಾತನಾಡಿ, ಕೋಣಗಳ ಆರ್ಭಟ ನೋಡುವುದೇ ಒಂದು ಸೊಗಸು. ಈ ಬಾರಿ ಶಿವಮೊಗ್ಗದಲ್ಲಿ ಕಂಬಳ ಇದೇ ಮೊದಲ ಬಾರಿಗೆ ನಡೆಯುತ್ತಿರುವುದು ಸಂತೋಷದ ವಿಚಾರವಾಗಿದ್ದು, 10 ಲಕ್ಷಕ್ಕೂ ಅಧಿಕ ಮಂದಿ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಜಾತಿ, ಧರ್ಮ, ಪಕ್ಷ ಬೇಧ ಮರೆತು ಇದರಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಎಲ್ಲರೂ ಸೇರಿ ಹಬ್ಬದಂತೆ ಸ್ವಾಗತಿಸಿ, ಸಂಭ್ರಮಿಸೋಣ ಎಂದು ಮನವಿ ಮಾಡಿದರು.
ಯಾವೆಲ್ಲಾ ಜಿಲ್ಲೆಗಳ ಸಹಭಾಗಿತ್ವ?
ಶಿವಮೊಗ್ಗ ಕಂಬಳಕ್ಕೆ ಹಾಸನ, ಚಿಕ್ಕಮಗಳೂರು, ಮಡಿಕೇರಿ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬೈಂದೂರು, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಾಗೂ ದಕ್ಷಿಣ ಕನ್ನಡ ಕಂಬಳ ಸಮಿತಿ, ರೋಟರಿ ಜಿಲ್ಲಾ ಘಟಕಗಳು ಹಾಗೂ ಶಿವಮೊಗ್ಗ ಕಂಬಳ ಸಮಿತಿ ಸಹಭಾಗಿತ್ವದಲ್ಲಿ ನಡೆಯಲಿದೆ.
ಶಿವಮೊಗ್ಗದಲ್ಲಿ ಮೊದಲ ಬಾರಿಗೆ ನಡೆಯಲಿರುವ ಕಂಬಳ ಯಶಸ್ವಿಯಾಗಲಿ ಎಂದು ಕೆ.ಎಸ್. ಈಶ್ವರಪ್ಪ ಅವರು ತಮ್ಮ ಕುಟುಂಬ ಸದಸ್ಯರು ಹಾಗೂ ಕಂಬಳ ಸಮಿತಿಯವರೊಂದಿಗೆ ಪೊಳಲಿ ಶ್ರೀ ರಾಜರಾಜೇಶ್ವರಿ ಹಾಗೂ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post