ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ದಸರಾ #Shivamogga Dasara ವರ್ಷದಿಂದ ವರ್ಷಕ್ಕೆ ಮಹತ್ವ ಪಡೆಯುತ್ತಿದ್ದು, ಕರ್ನಾಟಕದ ಭೂಪಟದಲ್ಲಿ ತನ್ನದೇ ಆದ ಖ್ಯಾತಿಯನ್ನು ಗಳಿಸುತ್ತಿದೆ. ಈಗಾಗಲೇ ಮಹಾನಗರ ಪಾಲಿಕೆವತಿಯಿಂದ ಒಂದು ವಾರದವರೆಗೆ ಹಲವು ಕಾರ್ಯಕ್ರಮಗಳು ಗಮನಸೆಳೆದಿವೆ. ರಸಮಂಜರಿ, ರೈತ ದಸರಾ, ಪತ್ರಿಕಾ ದಸರಾ, ಆಹಾರ ದಸರಾ, ರಂಗ ದಸರಾ, ಮಕ್ಕಳ ದಸರಾ ಮುಂತಾದ ವಿಭಾಗಗಳಿಂದ ಪ್ರತಿದಿನವೂ ಮೂಡಿಬಂದ ಕಾರ್ಯಕ್ರಮಗಳು ಕಣ್ಮನೆ ಸೆಳೆದಿವೆ.
ಕಳೆದ ಹತ್ತು ದಿನಗಳಿಂದ ಸಂಭ್ರಮ ಸಡಗರ, ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಿರುವ ನಾಡ ಹಬ್ಬ ದಸರಾದ ವಿಜಯದಶಮಿ ಆಚರಣೆ ಆರಂಭವಾಗಿದ್ದು, ಬನ್ನಿ ಮುಡಿಯುವ ಕಾರ್ಯಕ್ಕೆ ಜನರು ಕಾತರದಿಂದ ಕಾಯುತ್ತಿದ್ದಾರೆ.
ನಗರ, ಪಟ್ಟಣಗಳು ಮಾತ್ರವಲ್ಲದೇ ಸಂಪ್ರದಾಯದಂತೆ ಅನೇಕ ಹಳ್ಳಿಗಳಲ್ಲೂ ಬನ್ನಿ ಮುಡಿಯುವ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ ಪಾಲಿಕೆಯಿಂದ ಆಯೋಜಿಸಿರುವ ದಸರಾ ಮಹೋತ್ಸವದಲ್ಲಿ ಬನ್ನಿ ಮುಡಿಯುವ ಉತ್ಸವದ ಜಂಬೂ ಸವಾರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಸಕ್ರೆಬೈಲು ಆನೆಬಿಡಾರದಿಂದ ಮೂರು ಆನೆಗಳನ್ನು ಕರೆತರಲಾಗಿದ್ದು, ಅವುಗಳಿಗೆ ಪ್ರತಿ ದಿನ ತಾಲೀಮು ಮಾಡಿಸಲಾಗುತ್ತಿದೆ. ಅ.2ರ ಮಧ್ಯಾಹ್ನ 2.30ಕ್ಕೆ ಶಿವಪ್ಪನಾಯಕ ಅರಮನೆ ಆವರಣದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ಆರಂಭವಾಗಲಿದೆ.
ಎಸ್‍ಪಿಎಂ ರಸ್ತೆ, ಗಾಂಧಿ ಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಲಕ್ಷ್ಮೀ ಟಾಕೀಸ್ ವೃತ್ತದ ಮೂಲಕ ಮೆರವಣಿಗೆ ಫ್ರೀಡಂ ಪಾರ್ಕ್ ತಲುಪಲಿದೆ. ಅಲ್ಲಿ ಸಂಜೆ 6ಕ್ಕೆ ತಹಸೀಲ್ದಾರ್ ವಿ.ಎಸ್.ರಾಜೀವ್ ಬನ್ನಿ ಮುಡಿಯುವ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್. ಎನ್.ಚನ್ನಬಸಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ರಾವಣ ಪ್ರತಿಕೃತಿ ದಹನದ ಸಂದರ್ಭದಲ್ಲಿ ಅತ್ಯಾಕರ್ಷಕ ಸಿಡಿಮದ್ದುಗಳ ಪ್ರದರ್ಶನವಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















