ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೇವಾನಿರತ ಸರ್ಕಾರಿ ಇಲಾಖೆಗಳ ಅಧಿಕಾರಿ, ಸಿಬ್ಬಂಧಿಗಳ ಮೇಲೆ ಹಲ್ಲೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರು ಯಾವುದೇ ಆತಂಕಗಳಿಲ್ಲದೇ ನಿರ್ಭೀತಿಯಿಂದ ಪ್ರಮಾಣಿಕವಾಗಿ ಜನಸಾಮಾನ್ಯರ ಸೇವೆಗೆ ಸಮರ್ಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ #DC Gurudatta Hegade ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರಿ ನೌಕರರ ಕುಂದು-ಕೊರತೆ, ಸಮಸ್ಯೆ, ಸೇವಾ ಸೌಲಭ್ಯಗಳ ತ್ವರಿತ ಸ್ಪಂದನೆಗಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಆರ್.ಟಿ.ಐ. ಅರ್ಜಿಗಳನ್ನು ಸಲ್ಲಿಸಿ, ಅಧಿಕಾರಿಗಳಿಗೆ ಇನ್ನಿಲ್ಲದಂತೆ ಕಾಡುವುದು, ಬೇಡಿಕೆ ಸಲ್ಲಿಸುವುದು, ಸೇವಾ ಕ್ಷೇತ್ರದಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಪತ್ರಿಕೆಗಳಲ್ಲಿ ಆಧಾರರಹಿತ ಆರೋಪ ಮಾಡುವುದಲ್ಲದೇ ಅಸಂವಿಧಾನಿಕ ಪದಗಳ ಬಳಕೆ ಮಾಡುತ್ತಿರುವುದನ್ನೂ ಸಹ ಗಂಭೀರವಾಗಿ ಪರಿಗಣಿಸಲಾಗುವುದು. ಅಂತಹ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಆರೋಗ್ಯ ಸುರಕ್ಷತೆಗಾಗಿ ಜಾರಿಯಾಗಿರುವ ನಗದು ರಹಿತ ಆರೋಗ್ಯ ಸೇವೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಸಮರ್ಪಕ ಅನುಷ್ಟಾನದಿಂದಾಗಿ ಸಾವಿರಾರು ಕುಟುಂಬಗಳು ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 16000 ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ನಗದು ರಹಿತ ಆರೋಗ್ಯ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ. ಸರ್ಕಾರಿ ನೌಕರರಿಗೆ ದುಬಾರಿ ವೆಚ್ಚದ ಮಾರಣಾಂತಿಕ ಕಾಯಿಲೆಗಳು ಹಾಗೂ ಶಸ್ತ್ರ ಚಿಕಿತ್ಸೆ ಸೇರಿದಂತೆ ಬಹುತೇಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ದೊರೆಯಲಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ಕುಮಾರ್ಅವರು ಮಾತನಾಡಿ, ಕಾಲಕಾಲಕ್ಕೆ ಬದಲಾಗುತ್ತಿರುವ ಆಡಳಿತ ವ್ಯವಸ್ಥೆಗೆ ಪೂರಕವಾಗಿ ನೌಕರರೂ ಕೂಡ ಹೊಂದಿಕೊಳ್ಳಬೇಕಾಗಿದೆ. ಸೇವಾವಧಿಯಲ್ಲಿ ನೌಕರರಿಗೆ ಹೊಸದಾಗಿ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳು, ಕಾಯ್ದೆಗಳ ಪೂರ್ಣ ಜ್ಞಾನ ಇರಬೇಕು. ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ನೌಕರರಿಗೂ ಅರಿವು ಇರಬೇಕಾದುದು ಅಗತ್ಯ. ಈ ದಿಸೆಯಲ್ಲಿ ವಿವಿಧ ಯೋಜನೆಗಳು, ಕಾಯ್ದೆಗಳ ಅನುಷ್ಠಾನದ ಕುರಿತು ತರಬೇತಿ ಕಾರ್ಯಾಗಾರಗಳನ್ನು ಜಿಲ್ಲಾಡಳಿತ ಮತ್ತು ಆಡಳಿತ ಸುಧಾರಣಾ ಇಲಾಖೆ, ಜಿಲ್ಲಾ ತರಬೇತಿ ಸಂಸ್ಥೆಗಳ ಮೂಲಕ ಆಯೋಜಿಸಬೇಕು ಎಂದವರು ನುಡಿದರು. ಜಿಲ್ಲಾಧಿಕಾರಿಗಳು ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು ಸೂಚಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಸ್ವಾಮಿ, ಆರ್.ಪಾಪಣ್ಣ, ಡಾ. ಹಿರೇಮಠ್, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ಉಮೇಶ್ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು, ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರುಗಳು ಹಾಗೂ ನಗರದ ಖಾಸಗಿ ಆಸ್ಪತ್ರೆಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.








Discussion about this post