ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರಾವಣ ಸಂಭ್ರಮದ ಅರ್ಥವೆ ಪರಸ್ಪರರ ಸುಖ, ದುಃಖಗಳನ್ನು ಆಲಿಸುವುದು, ಭರಿಸುವುದು ಎಂದು ಮನ್ವಂತರ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಅಭಿಪ್ರಾಯಪಟ್ಟರು.
ಮನ್ವಂತರ ಮಹಿಳಾ ಮಂಡಳ, ಕೋಟೆ ಯೋಗ ಕೇಂದ್ರದ ಮಹಿಳಾ ಘಟಕ, ಬಸವನಗಂಗೂರು ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ” ಶ್ರಾವಣ ಸಂಭ್ರಮ ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಓ ಮನವೆ ನೀ ಕೇಳು ಎನುತ ಬರುವ ಶ್ರಾವಣವು ಸುಖ,ಶಾಂತಿ, ನೆಮ್ಮದಿ ಅನವರತವಿರಲಿ ಎಂದು ಹಾರೈಸುತ್ತದೆ. ಬಿರು ಬೇಸಿಗೆ ಕಳೆದು, ಮಳೆಗಾಲದಲ್ಲಿ ತುಂಬಿ ತುಳುಕುವ ನದಿನಿನಾದದಲಿ ಮಿಂದೆದ್ದು, ಸಮೃದ್ಧ ಹಸಿರ ರಾಶಿಯ ನಡುವೆ ಕಂಗೊಳಿಪ ಭೂತಾಯ ಬಗೆಬಗೆಯಲಿ ಪೂಜಿಸಿ, ಪರಸ್ಪರೊಳಗಿನ ಸಂಬಂಧಗಳ ಮತ್ತಷ್ಟು ಬಿಗಿಗೊಳಿಸಲು ಪರಸ್ಪರ ಕಂಕಣ ಕಟ್ಟಿಸಿ, ಪರಸ್ಪರರಲಿ ಸಮೃದ್ದತೆಯ ಸೆಲೆ ಇರಲೆಂದು ಬಾಗಿನ ಸಮರ್ಪಿಸಿ, ಜನಮನಕೆ, ಜಗದಗಲಕೆ ಒಳಿತಾಗಲೆಂದು ಹಾರೈಸುವ ಅರ್ಥಗರ್ಭಿತ ಹಬ್ಬವಾಗಿ ಶ್ರಾವಣ ಸಂಭ್ರಮದ ಹಬ್ಬ ಆರಂಭವಾಗುತ್ತದೆ ಎಂದು ಶ್ರಾವಣ ಮಾಸವನ್ನು ವ್ಯಾಖ್ಯಾನಿಸಿದರು.
ಹಬ್ಬಗಳ ಸಾಲು ಶ್ರಾವಣ ಮಾಸ. ಭೀಮನ ಅಮವಾಸ್ಯೆಯಿಂದ ಆರಂಭವಾಗಿ ಸ್ವರ್ಣ ಗೌರಿ, ಚೌತಿ ಗಣೇಶನೊಂದಿಗೆ ಸಂಪನ್ನಗೊಳ್ಳುವ ಈ ಮಾಸದಲಿ ಪರಸ್ಪರರಲ್ಲಿ ರಕ್ಷಣೆಯ ಭಾವ ತುಂಬಿ ದೃಢತೆ, ಸ್ನೇಹ, ಬಾಂಧವ್ಯದ ನೆಲೆ ಸಾರಿದರೆ, ಪ್ರತಿ ಕುಟುಂಬ ಹೆಂಗಳೆಯರು ನೇಮ ನಿಷ್ಠೆಯಿಂದ ಇದ್ದು ಸೋಮವಾರದಿಂದ ಶನಿವಾರದವರೆಗೆ ಆಚರಿಸುವ ವಿವಿಧ ಪೂಜಾ ಕಾರ್ಯಗಳಲ್ಲಿ ಈ ಸಮಾಜದ ಸದೃಢತೆಯನ್ನು ಆಶಿಸುತ್ತಾರೆ ಎಂದು ತಿಳಿಸಿದರು.
ಸೋಮವಾರ ಶಿವನ ಆರಾಧನೆ, ಮಂಗಳವಾರ ಶ್ರಾವಣ ಗೌರಿ, ಶುಕ್ರವಾರ ಶುಕ್ರಗೌರಿ, ಗುರುವಾರ ಗುರುರಾಯರ ಆರಾಧನೆ, ಸಂಭ್ರಮಿಸಿ ನಲಿವ ಶ್ರೀಕೃಷ್ಣನ ಹುಟ್ಟುಹಬ್ಬ, ಶನಿವಾರ ರಂಗನಾಥ, ವಿಷ್ಣುವಿನ ಆರಾಧನೆ, ಮೂವತ್ತು ದಿನವೂ ಒಂದಿಲ್ಲೊಂದು ಹಬ್ಬದ ಸಂಭ್ರಮ. ನಮ್ಮ ಮನೆಯ ಕುಟುಂಬದ ಸದಸ್ಯರು ನೆರೆಯ ಬಂಧು ಬಾಂಧವರು, ಸಮಾಜ ಬಂಧುಗಳು ಸದಾ ಸಂತುಲಿತವಾಗಿರಲಿ
ಸಂಭ್ರಮದ ಜೊತೆ ಮನೆ ಮನ ನಗುತ್ತಿದ್ದರೆ ಕುಟುಂಬ ಆ ಮೂಲಕ ಸಮಾಜವೂ ನಲಿಯುತಿರಲಿ ಎಂಬ ಸಂದೇಶ ಶ್ರಾವಣ ಮಾಸದ ಹಬ್ಬಗಳು ನೀಡುತ್ತಾ ಸಾಗುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮನ್ವಂತರ ಮ. ಮಂಡಳದಿಂದ ಪರಸ್ಪರ ಕಂಕಣ ಕಟ್ಟಿಕೊಂಡು, ಬಾಗಿನ ಸಮರ್ಪಿಸಿಕೊಂಡು, ಅನೇಕ ಗೌರಿಹಾಡು, ಆರತಿ ಹಾಡುಗಳನ್ನು ಹಾಡಲಾಯಿತು.
ಕಾರ್ಯಕ್ರಮದಲ್ಲಿ ಕೋಟೆ ಕೇಂದ್ರದ ಪುಷ್ಪ ರವಿಯವರು ಮತ್ತವರ ತಂಡದವರು, ಬಸವನಗಂಗೂರಿನ ರೋಜಾ ಮತ್ತವರ ತಂಡದವರು ಅತಿಥಿಗಳಾಗಿ ಆಗಮಿಸಿದ್ದರು. ಕುಮುದ್ವತಿ ತಂಡದ ಸುಜಾತ ವೆಂಕಟೇಶ್, ಸದಸ್ಯರಾದ ಸವಿತಾ ವೆಂಕಟೇಶ್, ಜ್ಯೋತಿ ಸುರೇಶ್, ಜ್ಯೋತಿ ವಾಸುದೇವ್, ಲತಾ ಸೋಮಶೇಖರ್ ,ಕುಸುಮಾ, ಗೀತ, ಹಾಗೂ ಮನ್ವಂತರದ ಜಯಾ ಸುರೇಶ್, ಸುಲೋಚನಾ ಮೂರ್ತಿ, ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post