ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೀರ್ಥಹಳ್ಳಿ ತಾಲ್ಲೂಕಿನ ಶ್ರೀಕ್ಷೇತ್ರ ಹೆಗಲತ್ತಿಯ ಶ್ರೀ ನಾಗಯಕ್ಷೆ ಸೇವಾ ಸಮಿತಿ ವತಿಯಿಂದ ಮಾ.4ರಿಂದ ಆರಂಭವಾದ ಶ್ರೀ ನಾಗಯಕ್ಷೆ ದೇವಿ, ನವಗ್ರಹ ಮತ್ತು ಶ್ರೀ ನಾಗದೇವರ 12ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಮಾ.8ರ ವರೆಗೆ ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಮುಖರಾದ ಗಜೇಂದ್ರನಾಥ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಮತ್ತು ಪಾತ್ರಿಗಳಾದ ಶ್ರೀ ಶಾರದಮ್ಮ ಅವರ ದಿವ್ಯಪೂರ್ಣಾನುಗ್ರಹ ಆಶೀರ್ವಾದದೊಂದಿಗೆ ಹಾಗೂ ಪಾತ್ರಿಗಳಾದ ಶ್ರೀ ಕಲ್ಲಮ್ಮನವರ ಉಪಸ್ಥಿತಿಯಲ್ಲಿ, ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಹೆಗಲತ್ತಿ ಹಾಗೂ ವಿವೇಕ್ ಭಟ್ ತೂದೂರು ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಮಾ.6ರಂದು ಬೆಳಿಗ್ಗೆ 9ಗಂಟೆಗೆ ಶ್ರೀ ಮಹಾಗಣಪತಿ ಪೂಜೆ, ನವಚಂಡಿಕಾ ಹವನ, ಬ್ರಹ್ಮಕಳಶ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದ್ದು, ಸಂಜೆ 6ಗಂಟೆಗೆ ಆಶ್ಲೇಷ ಬಲಿ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಡೆಯಲಿದೆ.
ಮಾ.7ರಂದು ಬೆಳಿಗ್ಗೆ 7ಗಂಟೆಗೆ ಶ್ರೀ ಪಲ್ಲಕ್ಕಿ ದೇವರ ಆಗಮನ, ಆರಾಧನೆ, ಮಹಾಮಂಗಳಾರತಿ, ಅನ್ನಸಂತರ್ಪಣೆ, ನಡೆಯುವುದಲ್ಲದೆ, ಶಿವಮೊಗ್ಗ ನಗರ ಭಾವಸಾರ ಕ್ಷತ್ರೀಯ ಸಮಾಜದ ಶ್ರೀ ತುಳಜಾ ಭವಾನಿ ದೇವಾಲಯದ ಹಾಗೂ ಗ್ರಾಮದ ಭಕ್ತರಿಂದ ಮೆರವಣಿಗೆ ಮತ್ತು ಭಜನೆ ಮೂಲಕ ಭಂಡಾರದ ಸ್ವಾಗತ ನಡೆಯಲಿದೆ. ಶ್ರೀಕ್ಷೇತ್ರ ಬಂಗಾರಮಕ್ಕಿ ಶ್ರೀಗಳು, ದಿವ್ಯಸಾನಿಧ್ಯವಹಿಸಲಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉಪಸ್ಥಿತರಿರುವರು ಎಂದರು.
ಶ್ರೀ ದೇವಸ್ಥಾನಕ್ಕೆ ಈ ಬಾರಿ 9 ದೇವಸ್ಥಾನಗಳ ಪಲ್ಲಕ್ಕಿಗಳು ಆಗಮಿಸಲಿದ್ದು, ಅವುಗಳಲ್ಲಿ ಶ್ರೀ ಕ್ಷೇತ್ರ ಗುತ್ತಿಯಡೇಹಳ್ಳಿಯ ಮಾಳೂರು ಸೀಮೆ ಶ್ರೀ ಗುತ್ಯಮ್ಮ, ಶ್ರೀ ಕ್ಷೇತ್ರ ಸಮಕಾನೆಯ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರು, ಶ್ರೀ ಕ್ಷೇತ್ರ ಮಾಳೂರಿನ ಶ್ರೀ ಗಾಳಿಮಾರಮ್ಮ, ಶ್ರೀ ಕ್ಷೇತ್ರ ಅಲಬಳ್ಳಿಯ ಶ್ರೀ ಚಾಮುಂಡೇಶ್ವರಿ ಅಮ್ಮನವರು, ಶಿವಮೊಗ್ಗ ಬ್ಯಾಡರ ಕೇರಿಯ ಶ್ರೀ ಎಲ್ಲಮ್ಮ ದೇವಿ, ಶ್ರೀ ಕ್ಷೇತ್ರ ಕೀಗಡಿಯ ಶ್ರೀ ಕುಮಾರ ರಾಮ ಗ್ರಾಮದೇವರು, ಶ್ರೀ ಕ್ಷೇತ್ರ ಮಂಡಗದ್ದೆಯ ಶ್ರೀ ಗುತ್ಯಮ್ಮ ಮತ್ತು ಶ್ರೀ ದುರ್ಗಮ್ಮ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರು ಹಾಗೂ ಶ್ರೀ ಕ್ಷೇತ್ರ ಕನ್ನಂಗಿಯ ಶ್ರೀ ಗುತ್ಯಮ್ಮ ಕುಟ್ಟಲುಗಾರು ಪಲ್ಲಕ್ಕಿಗಳು ವಿಶೇಷವಾಗಿವೆ. ಅದೇ ದಿನ ರಾತ್ರಿ 8ಗಂಟೆಗೆ ಶ್ರೀ ಗುತ್ಯಮ್ಮ ಪ್ರಸಾದಿತಾ ಯಕ್ಷಗಾನ ಮಂಡಳಿಯಿಂದ `ನಾಗಮಂಡಲ’ ಯಕ್ಷಗಾನ ಪ್ರದರ್ಶನವಿದೆ ಎಂದರು ಮಾಹಿತಿ ನೀಡಿದರು.
ಮಾ.8ರಂದು ಬೆಳಿಗ್ಗೆ 9ಗಂಟೆಗೆ ಶ್ರೀ ಪಲ್ಲಕ್ಕಿ ದೇವರ ಆರಾಧನೆ, ಮಹಾಮಂಗಳಾರತಿ, ಪಲ್ಲಕ್ಕಿ ದೇವರುಗಳ ಸ್ವಸ್ಥಾನಕ್ಕೆ ನಿರ್ಗಮನ ಕಾರ್ಯ ನಡೆಯಲಿದೆ. ಜಾತ್ರೆ ಮುಗಿದ ನಂತರದ ಪ್ರತಿ ಹುಣ್ಣಿಮೆಯ ದಿನದಂದು ಹೇಳಿಕೆ, ದರ್ಶನ ಮತ್ತು ಹರಕೆ ಸೇವೆಗಳು ನಡೆಯಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಸಂತೋಷ್ ಸಾಕ್ರೆ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕೆ.ಈ. ಕಾಂತೇಶ್, ಈ. ವಿಶ್ವಾಸ್, ಮೋಹನ್‍ಜಾದವ್, ಕುಬೇರಪ್ಪ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















