ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರಣ್ಯ ಸ್ವಾಮಿಗಳು ಸಂಗೀತ ಪ್ರಪಿತಾಮಹರು. ಮೇಳ ಕರ್ತ ರಾಗಗಳ ಪ್ರಾಪಿತಾಮಹರು. ಇನ್ನು ಮುಂದೆ ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದಲ್ಲಿ ಸಂಗೀತ ದಿನಾಚರಣೆಯನ್ನು ವಿದ್ಯಾರಣ್ಯ ಸ್ವಾಮಿಗಳ ದಿನವೆಂದು ಘೋಷಿಸಿ ಆಚರಿಸೋಣವೆಂದು ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಆದೇಶಿಸಿದರು.
ರಾಗರಂಜನಿ ಟ್ರಸ್ಟ್ ಸ್ಥಾಪಕ, ಜಾಗೃತ ಪಂಚಕ ಗಾಯಕ ಪ್ರಹ್ಲಾದ್ ದೀಕ್ಷಿತ್ ನೇತೃತ್ವದಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ವಿಶ್ವಸಂಗೀತ ದಿನಾಚರಣೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ಗ್ರಾಮ ಪದ್ಧತಿಯ ಸಂಗೀತಕ್ಕೆ ಮೇಳ ಪದ್ಧತಿ ಹಾಕಿಕೊಟ್ಟವರು ವಿದ್ಯಾರಣ್ಯ ಶ್ರೀಗಳು. ಸಂಗೀತ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆ ಅಪಾರ ಎಂದು ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮೀಜಿ ಹೇಳಿದರು.
ಸಂಗೀತ ಕ್ಷೇತ್ರವು ಈ ದಿನ ಇಷ್ಟೊಂದು ವೈವಿಧ್ಯಮಯವಾಗಿದೆ ಎಂದರೆ ಅದಕ್ಕೆ ಮೂಲ ಕಾರಣ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳು ಮೇಳ ಕರ್ತ ರಾಗಗಳನ್ನು, ಜನಕ ಜನ್ಯ ರಾಗಗಳನ್ನು, ಆಲಾಪನೆಯ ಅಂಗಗಳನ್ನು ಹೇಳಿಕೊಟ್ಟು ಗಾಯನ, ವಾದ್ಯ, ನೃತ್ಯ, ನಾಟಕಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿ ಪ್ರಚಾರಿಸಿದರು. ಇಂದು ಯಾರೇ ಸಂಗೀತ ಕಲಿಯಬೇಕಾದರೂ ಮೊದಲಿಗೆ ಮಾಯಮಾಳವ ಗೌಳ ರಾಗದೊಂದಿಗೆ ಕಲಿಯುತ್ತಾರೆ. ಆ ಮಾಯಮಾಳವ ಗೌಳ ರಾಗ ಕೊಟ್ಟಿದ್ದು ವಿದ್ಯಾರಣ್ಯ ಶ್ರೀಗಳು ಎಂದರು.
Also read: ರೈಲ್ವೇ ಪ್ರಯಾಣಿಕರ ವೇದಿಕೆ ದಶಮಾನೋತ್ಸವ ಹಿನ್ನೆಲೆ: ಪ್ರಬಂಧ, ಚಿತ್ರಕಲಾ ಸ್ಪರ್ಧೆ
“ಕರ್ನಾಟಕ ಶಾಸ್ತ್ರೀಯ ಸಂಗೀತ” ಎಂದು ಹೆಸರು ನೀಡಿದ್ದು ವಿದ್ಯಾರಣ್ಯ ಶ್ರೀಗಳು. ಹೀಗೆ ಒಂದೇ ಮಾತಿನಲ್ಲಿ ಹೇಳಬೇಕಾದರೆ ಅವರಿಂದಲೇ ಸಂಗೀತ ಕ್ಷೇತ್ರ ಅಭಿವೃದ್ಧಿಯಾಗಿದ್ದು. ಹಾಗಾಗಿ ಎಲ್ಲಾ ಸಂಗೀತಗಾರರು ವಿದ್ಯಾರಣ್ಯ ಸ್ವಾಮಿಗಳಿಗೆ ಋಣಿಗಳಾಗಿರಬೇಕು. ಇನ್ನುಮುಂದೆ ಸಂಗೀತ ದಿನಾಚರಣೆಯನ್ನು ಆಚರಿಸುವಾಗ ಮೊದಲಿಗೆ ವಿದ್ಯಾರಣ್ಯ ಸ್ವಾಮಿಗಳ ಭಾವಚಿತ್ರವಿಟ್ಟು ಪೂಜಿಸಿ ಎಂದು ಶ್ರೀಗುರುಗಳು ಆದೇಶ ನೀಡಿದರು.
ಜೊತೆಯಲ್ಲಿ ಸಂಗೀತ ಎಂಬ ಪದದ ಅರ್ಥವೇನು, ಯಾವುದನ್ನು ಸಂಗೀತವೆಂದು ಕರೆಯಬೇಕು, ಸಂಗೀತ ಯಾಕೆ ಬೇಕು ಎಂದು ಹೇಳುತ್ತಾ ಶ್ರೀಗುರುಗಳು ಸರಳವಾಗಿ ಅದ್ವೈತವನ್ನು ಬೋಧಿಸಿದರು.
ಪ್ರಹ್ಲಾದ ದೀಕ್ಷಿತರು ಜನ್ಮತ: ಸಂಗೀತಗಾರರು, ಸಂಗೀತ ಸಂಸ್ಕಾರದೊಂದಿಗೆಯೇ ಜನನವಾದದ್ದು. ಸುಮಧುರ ಕಂಠವನ್ನು ಹೊಂದಿದ್ದಾರೆ, ಅವರ ಧ್ವನಿ ಎಸ್.ಪಿ. ಬಾಲ ಸುಬ್ರಮಣ್ಯಂ ಅವರ ಧ್ವನಿಯನ್ನೇ ಹೋಲುತ್ತದೆ ಎಂದು ಶ್ರೀಗುರುಗಳು ಉದ್ಗರಿಸಿದರು. ನಾನಾ ಕಥೆಗಳ ಮೂಲಕ ಗಹನವಾದ ವಿಚಾರಗಳನ್ನು ಸುಲಭವಾಗಿ ತಿಳಿಸಿಕೊಟ್ಟರು.
ಋತ್ವಿಜರು ಮತ್ತು ಸಂಗೀತಗಾರರು ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗುರುಗಳನ್ನು ಬರಮಾಡಿಕೊಂಡರು. ದೀಪ ಪ್ರಜ್ವಲನೆಯಾದ ಬಳಿಕ ಶ್ರೀಗುರುಳು ಆಶೀರ್ವಚನ ನೀಡಿದರು. ನಂತರ ಶ್ರೀಗುರುಗಳು ಎಲ್ಲರಿಗೂ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















