ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶೃಂಗೇರಿ ಶಾರದಾ ಪೀಠದ #Shringeri Sharadapeeta ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ #Vidhushekara Bharathi Shri ಸಾನಿಧ್ಯದಲ್ಲಿ ಅ.8ರಂದು ಸಂಜೆ 3ಗಂಟೆಗೆ ಗೋವರ್ಧನ ಟ್ರಸ್ಟಿನ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಕೆ.ಇ. ಕಾಂತೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ನಿಟ್ಟಿನಲ್ಲಿ ಗೋವರ್ಧನಾ ಟ್ರಸ್ಟನ್ನು ರಚಿಸಲಾಗಿದೆ. ಗೋಮಾತೆಯ ರಕ್ಷಣೆಗಾಗಿಯೇ ಇದು ರಚಿತವಾಗಿದ್ದು, ಇದರ ಪೂರ್ವಭಾವಿ ತಯಾರಿಗಳು ಈಗಾಗಳೇ ನಡೆದಿವೆ. ಬಿಡಾಡಿ ದನಗಳು, ಬರಡು ಹಸುಗಳು, ಗೋಕಳ್ಳರಿಂದ ರಕ್ಷಿಸಲ್ಪಟ್ಟ ಗೋವುಗಳು ಅಪಘಾತದಲ್ಲಿ ಗಾಯಗೊಂಡ ಗೋವುಗಳು ಹೀಗೆ ವಿವಿಧ ರೀತಿಯಲ್ಲಿ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಿಂದ ಗೋವರ್ಧನ ಟ್ರಸ್ಟನ್ನು ರಚಿಸಲಾಗಿದೆ ಎಂದರು.
ಈಗಾಗಲೇ ಗೋಸಂರಕ್ಷಣೆಯ ಇಚ್ಛೆಯುಳ್ಳ ಸಾರ್ವಜನಿಕರು ತಿಂಗಳಿಗೆ 100 ರೂ.ಗಳನ್ನು ಗೋವರ್ಧನಾ ಟ್ರಸ್ಟಿಗೆ ದೇಣಿಗೆ ನೀಡಬಹುದಾಗಿದೆ. ಇದಕ್ಕಾಗಿ ಕೂಪನ್‍ಗಳನ್ನು ಸಹ ವಿತರಿಸಲಾಗಿದೆ. ಸುಮಾರು 3500ಕ್ಕೂ ಹೆಚ್ಚು ಗೋಪ್ರೇಮಿಗಳು 100 ರೂ. ಹಣ ನೀಡಿ, ಸದಸ್ಯತ್ವ ನೊಂದಾಯಿಸಿದ್ದಾರೆ. ಪ್ರತಿ ತಿಂಗಳು ಈ ಹಣ ಬ್ಯಾಂಕ್ ಖಾತೆಯಿಂದ ಟ್ರಸ್ಟಿಗೆ ವರ್ಗಾವಣೆಯಾಗುವಂತೆ ಇಸಿಎಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಹಲವರು ದೇಣಿಗೆ ಕೂಡ ನೀಡಿದ್ದಾರೆ. ಈ ಎಲ್ಲಾ ಆರ್ಥಿಕ ಬಲದಿಂದ ಗೋವುಗಳನ್ನು ರಕ್ಷಿಸಲು ನಾವು ಮುಂದಾಗಿದ್ದೇವೆ ಎಂದರು.
ಈಗಾಗಲೇ ನಗರದಲ್ಲಿ ಸುರಭಿ, ಮಹಾವೀರ್ ಮತ್ತು ಜ್ಞಾನೇಶ್ವರಿ ಎಂಬ ಮೂರು ಗೋಶಾಲೆಗಳಿವೆ. ಇವುಗಳ ಪುನರ್ ಜೀವನಕ್ಕೂ ಗೋವರ್ಧನ ಟ್ರಸ್ಟ್ ನೆರವು ನೀಡುತ್ತದೆ. ಅಲ್ಲದೆ ಈ ಗೋಶಾಲೆಗಳಿಗೆ ಬೇಕಾದ ಮೇವುಗಳನ್ನು ಬೆಳೆಯಲು ಗೊಂದಿಚಟ್ನಹಳ್ಳಿ ಸಮೀಪದಲ್ಲಿ ಆರು ಎಕರೆ ಜಮೀನು ನೋಡಲಾಗಿದ್ದು, ಅ.6ರಂದು ಈ ಜಮೀನಿನಲ್ಲಿ ಶ್ರೀಕ್ಷೇತ್ರ ಹೊಂಬುಜದ ದಿಗಂಬರ ಜೈನಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳವರ ಅಮೃತಹಸ್ತದಿಂದ ಬೆಳಿಗ್ಗೆ 9.30ಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಅಲ್ಲದೆ ಗೋವುಗಳನ್ನು ಆಸ್ಪತ್ರೆಗೆ ಸೇರಿಸಲು ಅನುಕೂಲವಾಗುವಂತೆ ಸ್ವಯಂಚಾಲಿತ ಹೈಡ್ರಾಲಿಕ್ ವ್ಯವಸ್ಥೆಯ ಆ್ಯಂಬುಲೆನ್ಸ್ ವಾಹನವನ್ನು ಕೂಡ ಈಗಾಗಲೇ 18 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ ಎಂದರು.
ಟ್ರಸ್ಟಿನ ಉದ್ಘಾಟನಾ ಸಮಾರಂಭ ಅ.8ರಂದು ನಗರದ ಅಲ್ಲಮಪ್ರಭು ಮೈದಾನ(ಫ್ರೀಡಂಪಾರ್ಕ್)ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಶೃಂಗೇರಿ ಶಾರದಾಪೀಠದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಆಗಮಿಸಲಿದ್ದು, ಅಂದು ಸಂಜೆ ಮೂರು ಗಂಟೆಗೆ ಅವರ ಪುರಪ್ರವೇಶ ಇರುತ್ತದೆ. ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಶಂಕರಮಠದಿಂದ ದೈವಜ್ಞ ಕಲ್ಯಾಣ ಮಂದಿರದವರೆಗೆ ವೇದಘೋಷ, ಮಂಗಳವಾದ್ಯ, ಚಂಡೆಯೊಂದಿಗೆ ವಾಹನ ಜಾಥಾ ಇರುತ್ತದೆ. ಮತ್ತು ಸಂಜೆ 4ಗಂಟೆಗೆ ದೈವಜ್ಞ ಕಲ್ಯಾಣ ಮಂದಿರದಿಂದ ಫ್ರೀಡಂಪಾರ್ಕ್‍ವರೆಗೆ ಶೋಭಾಯಾತ್ರೆ ಇರುತ್ತದೆ. ಸಂಜೆ 5 ಗಂಟೆಗೆ ಫ್ರೀಡಂಪಾರ್ಕ್‍ನಲ್ಲಿ ಶ್ರೀಗಳು ಗೋವರ್ಧನ ಟ್ರಸ್ಟನ್ನು ಉದ್ಘಾಟಿಸಿ ಅನುಗ್ರಹ ಭಾಷಣ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಮಹಾಪೋಷಕರುಗಳಾದ ಕೆ.ಎಸ್. ಈಶ್ವರಪ್ಪ, ಹೆಚ್.ಎಸ್. ಶಿವಶಂಕರ್, ಸಿ.ವಿ. ರುದ್ರಾರಾಧ್ಯ, ಹೆಚ್.ಎಸ್. ನಾಗರಾಜ್, ಕೆ.ಸಿ. ನಟರಾಜ್ ಭಾಗವತ್, ಬಿ.ಎ. ರಂಗನಾಥ್, ಪದಾಧಿಕಾರಿಗಳಾದ ರಾಘವೇಂದ್ರ ಸ್ವಾಮಿ, ಉಮೇಶ್ ಆರಾಧ್ಯ, ನಾಗೇಶ್ ಎಂ., ರಮೇಶ್‍ಬಾಬು, ಎಸ್.ಕೆ. ಶೇಷಾಚಲ, ಟ್ರಸ್ಟಿಗಳಾದ ಮಹಾಲಿಂಗಶಾಸ್ತ್ರೀ, ಸಂದೇಶ್ ಉಪಾಧ್ಯ, ಹೆಚ್. ಶಿವಾಜಿ, ಗುರುರಾಜ್ ಶೇಟ್, ವಿನೋದ್‍ಕುಮಾರ್ ಜೈನ್, ರಾಮ್ ಸ್ವರೂಪ್, ಮೋಹನ್ ಜಾಧವ್, ಎಂ.ಜಿ.ಬಾಲು, ಶ್ರೀಕಾಂತ್, ಮಹಿಳಾ ಸಂಚಾಲಕರಾದ ಉಮಾಮೂರ್ತಿ, ಶುಭ ರಾಘವೇಂದ್ರ, ಉಷಾ ಅರುಣ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post