ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಖ್ಯಮಂತ್ರಿ ಸಿದ್ಧರಾಮಯ್ಯ #CM Siddaramaiah ಬಹುಶಃ ವಿದಾಯ ಭಾಷಣ ಹೇಳಲು ವಿಶೇಷ ಅಧಿವೇಶನವನ್ನು ಕರೆದಿರಬೇಕೆಂದು ಶಾಸಕ ಎಸ್.ಎನ್.ಚನ್ನಬಸಪ್ಪ #MLA Channabasappa ವ್ಯಂಗ್ಯವಾಡಿದ್ದಾರೆ.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ ಮನರೇಗಾ ಉದ್ದೇಶವನ್ನಿಟ್ಟುಕೊಂಡು ಈ ವಿಶೇಷ ಅಧಿವೇಶನವನ್ನು ಕರೆದಿರಲಿಕ್ಕಿಲ್ಲ. ಆದರೆ, ತಮ್ಮ ಅವಧಿಯ ಕೊನೆಯ ಅಧಿವೇಶನ ಇದು ಇರಬೇಕು ಎಂಬ ಭಾವನೆಯಲ್ಲಿ ಮುಖ್ಯಮಂತ್ರಿಗಳು ಅಧಿವೇಶನವನ್ನು ಕರೆದಿದ್ದಾರೆ. ಇದರಿಂದ ಮುಖ್ಯಮಂತ್ರಿಗಳು ಬದಲಾವಣೆ ಆಗಬಹುದು ಎಂಬ ಆಶಯ ಇದೆ. ಆದರೆ, ಯಾರೇ ಮುಖ್ಯಮಂತಿರ ಆಗಲೀ, ಏನೇ ಬದಲಾವಣೆಯಾಗಲಿ, ಅಭಿವೃದ್ಧಿಯ ಕಡೆ ಗಮನಹರಿಸಬೇಕು ಮತ್ತು ಗಮನಹರಿಸುತ್ತಾರೆಂಬ ವಿಶ್ವಾಸ ನನಗಿದೆ. ಇದು ಬಜೆಟ್ ಅಧಿವೇಶನವಂತೂ ಅಲ್ಲ ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಯಾವಾಗಲೂ ಸಿದ್ಧವಿದೆ. ಆದರೆ ಆಡಳಿತ ಪಕ್ಷಕ್ಕೆ ಇನ್ನೂ ಭಯವಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ ನಾವು ಸೋಲುತ್ತೇವೆ ಎಂಬ ಆತಂಕ ಇರುವುದಿಂದಲೇ ಈ ಚುನಾವಣೆಯ ನೆಪವೊಡ್ಡಿ ಮುಂದಕ್ಕೆ ಹಾಕುತ್ತಿದ್ದರೆ. ನ್ಯಾಯಾಲಯದ ಆದೇಶವನ್ನೇ ಅಸ್ತ್ರವಾಗಿಟ್ಟುಕೊಂಡು ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಇಡೀ ರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ನೋಡಿದರೆ ಬಿಜೆಪಿ ಎಲ್ಲಾ ಕಡೆ ವಿಜೃಂಭಿಸುತ್ತಿರುವುದು ಕಂಡು ಬಂದಿದೆ. ಇದಕ್ಕೆ ಮಹಾರಾಷ್ಟ್ರವೇ ಉದಾಹರಣೆಯಾಗಿದೆ. ಯಾವುದೇ ಚುನಾವಣೆ ನಡೆದರೂ ಕೂಡಾ ಬಿಜೆಪಿ ಈಗ ಶಕ್ತಿಯುತ ಕೇಂದ್ರವಾಗಿದೆ. ಕರ್ನಾಟಕದಲ್ಲೂ ಕೂಡಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ ಅದು ಬಿಜೆಪಿಯ ಸ್ವತ್ತೇ ಆಗಿರುತ್ತದೆ. ನಮ್ಮ ಕಾರ್ಯಕರ್ತರು ಯಾವಾಗಲೂ ಚುನಾವಣೆಗಾಗಿ ಸಿದ್ಧರಾಗಿಯೇ ಇರುತ್ತದೆ. ಸರ್ಕಾರ ಆದಷ್ಟು ಬೇಗ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಬೇಕು ಮತ್ತು ಯಾವುದೇ ವಿಶೇಷ ಅಧಿವೇಶನ ನಡೆದರೂ ಕೂಡಾ ಅದು ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಡೆಯಬೇಕು ಎಂದು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















