ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿಗಂದೂರು ದೇವಿಯ ಆಶೀರ್ವಾದದಿಂದ ಸಿಗಂದೂರು ಚೌಡೇಶ್ವರಿ ಸೇತುವೆ #Sigandooru Chowdeshwari Bridge ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ #Harathalu Halappa ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 7 ವರ್ಷಗಳ ಹಿಂದೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ #Nitin Gadkari ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ #B S Yadiyurappa ಹಾಗೂ ಕಾಗೋಡು ತಿಮ್ಮಪ್ಪನವರು ಈ ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಅವರದೇ ಉಪಸ್ಥಿತಿಯಲ್ಲಿ ಈ ಸೇತುವೆಯ ಐತಿಹಾಸಿಕ ಉದ್ಘಾಟನೆ ನಡೆದು 7 ದಶಕಗಳ ಈ ಭಾಗದ ಜನರ ಕನಸು ನನಸಾಗಿದೆ ಎಂದರು.
ರಾಜ್ಯ ಸರ್ಕಾರ ಕೊನೆ ಕ್ಷಣದಲ್ಲಿ ಹತಾಶ ಮನೋಭಾವದಿಂದ ಬಹಿಷ್ಕಾರ ಹಾಕಿದ್ದಾರೆ. ಸಿಎಂ ಮತ್ತು ಲೋಕೋಪಯೋಗಿ ಸಚಿವರು ಬರುತ್ತೇನೆ ಎಂದಿದ್ದರು. ಲೋಕೋಪಯೋಗಿ ಸಚಿವರು ಉದ್ಘಾಟನಾ ಸ್ಥಳದವರೆಗೆ ಬಂದು ಕೊನೆಕ್ಷಣದಲ್ಲಿ ವಾಪಸ್ ಹೋಗಿದ್ದಾರೆ. ಸ್ಥಳೀಯ ಶಾಸಕರು ಕೂಡ ಮೋದಿಯಾದರೂ ಬರಲಿ, ಟ್ರಂಪ್ ಆದರೂ ಬರಲಿ. ಉದ್ಘಾಟನೆಗೆ ನನಗೆ ಹೇಳದಿದ್ದರೂ ಹೋಗುತ್ತೇನೆ ಎಂದು ಮಾಧ್ಯಮದ ಮುಂದೆ ಬಡಾಯಿ ಕೊಚ್ಚಿಕೊಂಡವರು, ಯಾರದ್ದೋ ಮಾತು ಕೇಳಿ ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಉಸ್ತುವಾರಿ ಸಚಿವರು ಕೂಡ ಮೊನ್ನೆ ಎರಡು ಬಾರಿ ಸೇತುವೆಯ ಕಾಮಗಾರಿ ಪರಿವೀಕ್ಷಣೆ ಮಾಡಿದ್ದರು. ಇದು ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವುದರಿಂದ ಅವರಿಗೆ ಕಸಿವಿಸಿಯಾಗಿರಬೇಕು. ಕೊನೆ ಗಳಿಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಇರುವುದು ಸರಿಯಲ್ಲ. ಇದು ಒಂದು ವಿಧ್ವಂಸಕ ಕೃತ್ಯಕ್ಕೆ ಸಮಾನ ಎಂದರು.
ಇವರನ್ನು ಯಾರು ಕರೆಯಬೇಕು. ಈ ಕಾರ್ಯಕ್ರಮ ರಾಜ್ಯ ಸರ್ಕಾರವೇ ಸಂಘಟಿಸಿ ಮಾಡಬೇಕಾಗಿತ್ತು. ಯಾಕೆ ಮಾಡಲಿಲ್ಲ? ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ, ಸೋಲು –ಗೆಲುವು ಇದ್ದೇ ಇರುತ್ತದೆ. ಹಸಿರುಮಕ್ಕಿ ಸೇತುವೆ 2022 ಫೆಬ್ರವರಿ 1ರಂದು ನಾನು ಶಾಸಕನಾಗಿದ್ದಾಗ ಯಡಿಯೂರಪ್ಪನವರು 50 ಕೋಟಿ ರೂ. ನೀಡಿದ್ದರು. ಆದರೆ, ತಾಂತ್ರಿಕ ತೊಂದರೆಯಿಂದ ಸೂಚಿಸಿದ ನೀರಿನ ಮಟ್ಟಕ್ಕಿಂತ ಜಾಸ್ತಿ ಇದೆ ಎಂದು ಗುತ್ತಿಗೆದಾರ ಹಿಂದೇಟು ಹಾಕಿದ್ದರಿಂದ ಮತ್ತೆ ಅದು ಕೇಂದ್ರಕ್ಕೆ ಅಪ್ರೂವಲ್ ಗೆ ಹೋಗಿ ಹೆಚ್ಚುವರಿಯಾಗಿ ಅದಕ್ಕೆ ಅನುದಾನವನ್ನು ಯಡಿಯೂರಪ್ಪ ಘೋಷಣೆ ಮಾಡಿದ್ದರು. ಒಟ್ಟು 125 ಕೋಟಿ ರೂ. ವೆಚ್ಚದ ಆ ಸೇತುವೆಗೆ ಅಪ್ರೂವಲ್ ಸಿಕ್ಕಿತ್ತು. ಆ ನಂತರ ಕೊರೋನಾ ಬಂದಿದ್ದರಿಂದ ಅದು ತಡವಾಯ್ತು ಎಂದರು.
ದೇವರು ಯಾರನ್ನು ಕರೆಸಿ ಉದ್ಘಾಟಿಸಬೇಕಿತ್ತೋ ಅವರನ್ನು ಕರೆಸಿಕೊಂಡು ಸೇತುವೆ ಉದ್ಘಾಟನಾ ಸಮಾರಂಭವನ್ನು ಮಾಡಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಡಿ.ಎಸ್. ಅರುಣ್, ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post