ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲ ಅವ್ಯವಸ್ಥೆಯ ಆಗರವಾಗಿದ್ದು, ಸರಿಯಾಗಿ ನಡೆಸದೆ ಅಧಿಕಾರಿಗಳು ಮತ್ತು ಶಾಸಕರು ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಭ್ಯರ್ಥಿ ಆಕಾಂಕ್ಷಿ ಎಸ್.ಕೆ. ಮರಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಹೋಟೆಲ್ ಮಥುರಾ ಪ್ಯಾರಾಡೈಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲ ಕಳಪೆಯಿಂದ ಕೂಡಿವೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ರಸ್ತೆಗಳೆಲ್ಲ ಹಾಳಾಗಿವೆ. ರಸ್ತೆಯ ಮೇಲೆಯೇ ಮ್ಯಾನ್‌ಹೋಲ್‌ಗಳಿದ್ದು, ಸರಿಯಾಗಿ ನಿರ್ವಹಣೆ ಮಾಡಿಲ್ಲ. ಫುಟ್‌ಪಾತ್‌ಗಳಂತೂ ಹಾಳಾಗಿ ಹೋಗಿವೆ. ಅಳವಡಿಸಿದ ಕಲ್ಲುಗಳು ಎದ್ದಿವೆ. ಬಾಕ್ಸ್ ಚರಂಡಿಗಳ ಸ್ಥಿತಿಯೂ ಅದೇ ಆಗಿದೆ. ವಾಹನಗಳು, ಪಾದಚಾರಿಗಳು ಓಡಾಡುವುದೇ ಕಷ್ಟವಾಗಿದೆ ಎಂದರು.
ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಲಾದ ವಿದ್ಯುತ್ ಸಂಪರ್ಕದ ಬಾಕ್ಸ್‌ಗಳಂತೂ ಬಾಯಿ ತೆರೆದುಕೊಂಡಿವೆ. ಕರುಳು ಪಚ್ಚಿಯಂತೆ ವೈರುಗಳು ಹೊರಕ್ಕೆ ಬಂದಿವೆ. ಅಪಘಾತದ ಭಯ ಹೆಚ್ಚಿದೆ. ಪಾತ್‌ವೇಗಳು ಹಾಳಾಗಿವೆ. ಗುತ್ತಿಗೆದಾರು ಬೇಕಾಬಿಟ್ಟಿ ಕೆಲಸ ಮಾಡಿದ್ದಾರೆ. ಸಾರ್ವಜನಿಕರ ಹಣ ಪೋಲಾಗಿದೆ. ಮೆಸ್ಕಾಂನ ಭೂಗತ ಕೇಬಲ್ ಅಳವಡಿಕೆ ಕೂಡ ಸರಿಯಾಗಿ ನಡೆದಿಲ್ಲ ಎಂದು ದೂರಿದರು.
ಈಶ್ವರಪ್ಪ ಎದುರಾಳಿಯಾದರೂ ಗೆಲ್ಲುವ ಸಾಮರ್ಥ್ಯ ನನಗಿದೆ
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ತಾವಾಗಿದ್ದು, ಮೇಯರ್ ಆಗಿ, ನಗರಸಭಾ ಸದಸ್ಯನಾಗಿ, ಪಾಲಿಕೆ ಸದಸ್ಯನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕೇವಲ ಕುರುಬ ಜನಾಂಗವಲ್ಲದೆ ಎಲ್ಲಾ ಜನಾಂಗದವರ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ. ಅಲ್ಲದೆ ಕಳೆದ ಹಲವು ವರ್ಷಗಳಿಂದ ಕುರುಬ ಜನಾಂಗಕ್ಕೆ ಶಿಮೊಗ್ಗದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕಿಲ್ಲ. ಈ ಬಾರಿ ತiಗೆ ಸಿಗಬಹುದು ಎಂಬ ವಿಶ್ವಾಸವಿದೆ. ತಮಗೆ ಟಿಕೆಟ್ ಸಿಗುವುದರಿಂದ ಭದ್ರಾವತಿ ಮತ್ತು ಶಿಕಾರಿಪುರದಲ್ಲಿಯೂ ಕೂಡ ಕುರುಬ ಜನಾಂಗದವರು ಹೆಚ್ಚಿದ್ದಾರೆ. ಇದರಿಂದ ಅನುಕೂಲವಾಗುತ್ತದೆ ಎಂದ ಅವರು, ಶಿವಮೊಗ್ಗ ನಗರದಿಂದ ಮೂವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ನನಗೆ ಗೊತ್ತಿಲ್ಲ. ಒಂದು ಪಕ್ಷ ಮೂವರ ಹೆಸರು ಅಂತಿಮವಾಗಿದ್ದರೆ ಅದರಲ್ಲಿ ನನ್ನ ಹೆಸರೂ ಇರುತ್ತದೆ. ಒಂದು ಪಕ್ಷ ನನಗೆ ಟಿಕೆಟ್ ಸಿಕ್ಕರೆ ಈಶ್ವರಪ್ಪ ಎದುರಾಳಿಯಾದರೂ ಗೆಲ್ಲುವ ಸಾಮರ್ಥ್ಯ ನನಗಿದೆ ಎಂದರು.
ಎಸ್.ಕೆ. ಮರಿಯಪ್ಪ, ಕಾಂಗ್ರೆಸ್ ಮುಖಂಡ
ನಿರಂತರ ಕುಡಿಯುವ ನೀರಿನ ಯೋಜನೆ ಕೂಡ ಸಮರ್ಪಕವಾಗಿಲ್ಲ 24×7 ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ. ಮನೆಗೆ ಸಂಪರ್ಕಗೊಳಿಸಿರುವ ಪೈಪ್ ಲೈನುಗಳು ಸರಿಯಾಗಿಲ್ಲ. ಮೀಟರುಗಳು ಕೂಡ ದೋಷಪೂರಿತವಾಗಿವೆ. ಇದರಿಂದ ನೀರಿನ ಬಿಲ್ ಕೂಡ ಹೆಚ್ಚಾಗಿದೆ. ನೀರಿಲ್ಲದೆ ಗಾಳಿ ಬಂದರೂ ಕೂಡ ಮೀಟರ್ ಓಡುತ್ತದೆ. ಒಟ್ಟಾರೆ ಇದೊಂದು ದುರವಸ್ಥೆಯ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.
Also read: ಎಚ್’ಡಿಕೆಗೆ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ ಜಾತಿ ರಾಜಕಾರಣದ ಬಗ್ಗೆ ಹೇಳಿದ್ದೇನು
ಇಷ್ಟಾದರೂ ಶಾಸಕ ಕೆ.ಎಸ್. ಈಶ್ವರಪ್ಪ, ಸ್ಮಾಟ್ ಸಿಟಿ ಕಾಮಗಾರಿಗಳು ಚೆನ್ನಾಗಿ ನಡೆದಿವೆ ಎಂದು ಪ್ರಮಾಣ ಪತ್ರ ನೀಡುತ್ತಾರೆ. ಕಾಮಗಾರಿಗಳನ್ನು ನೋಡದೆ ಅಧಿಕಾರಿಗಳ ಪರ ವಹಿಸಿ ಮಾತನಾಡುವುದನ್ನು ನೋಡಿದರೆ ಇದರಲ್ಲಿ ಇವರ ರಾಜಕೀಯ ಹಿತಾಸಕ್ತಿ ಕಂಡುಬರುತ್ತದೆ. ತಕ್ಷಣವೇ ಕಳಪೆ ಕಾಮಗಾರಿಗಳ ತನಿಖೆ ನಡೆಸಬೇಕು. ಇದಕ್ಕಾಗಿ ನಾಗರಿಕರೂ ಸೇರಿದಂತೆ ಸರ್ವ ಪಕ್ಷಗಳ ಸಮಿತಿ ರಚಿಸಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಮಾಶಂಕರ ಉಪಾಧ್ಯ, ಸುನಿಲ್, ತಾರಾನಾಥ್, ಉಮೇಶ್, ಪ್ರಭಾಕರ ಗೌಡ, ಬಾಲಾಜಿ, ರಘುವೀರ ಸಿಂಘ್, ರಘು, ಮಲ್ಲಿಕಾರ್ಜುನ, ಚಿನ್ನಪ್ಪ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post