ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊಳಗೇರಿಗಳಿಗೆ ತೆರಳಿ ಮಕ್ಕಳಲ್ಲಿ ನೃತ್ಯದ ಅಭಿರುಚಿ ಹಾಗೂ ದೇಶಭಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ರಾಷ್ಟ್ರದ ಒಂದೇ ಒಂದು ಸಂಸ್ಥೆ ಸಹಚೇತನ ನಾಟ್ಯಾಲಯ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.
ಸಹಚೇತನ ನಾಟ್ಯಾಲಯ ಹಮ್ಮಿಕೊಂಡಿದ್ದ ಭಾರತೀಯಂ-11 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿವಂಗತ ಅಜಿತ್ ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ನೆರವೇರಿಸಿದ ಸೇವಾ ಚಟುವಟಿಕೆಗಳು, ಯೋಗ ಶಿಕ್ಷಣಗಳು, ಸೇವಾ ಪರಿಕಲ್ಪನೆಗಳು ಸಮಾಜದ ಹಿತದೃಷ್ಟಿಯಲ್ಲಿ ಇಂದಿಗೂ ಪ್ರಸ್ತುತ. ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು.
ಅಜಿತ್ ಕುಮಾರ್‌ರವರ ಬಗ್ಗೆ ಸವಿವರವಾಗಿ ವಿವರಿಸಿದ ಪ್ರಾಂತ ಪ್ರಚಾರ ಪ್ರಮುಖ್ ಮಧುಕರ ಮತ್ತೂರು, ಅಜಿತ್ ಕುಮಾರ್ ಎಂದರೆ ಉತ್ಕೃಷ್ಟತೆಯ ಆರಾಧಕ. ಶಿಸ್ತು, ಸರಳತೆ, ಸ್ವಚ್ಚತೆಯನ್ನು ಮೈಗೂಡಿಸಿಕೊಂಡಿದ್ದ ಅವರು ಅಂತರ್‌ಬಾಹ್ಯಶುದ್ದೀ ವ್ಯಕ್ತಿತ್ವದವರಾಗಿದ್ದರು. ಒಬ್ಬ ವ್ಯಕ್ತಿ ಕಾಲವಾದ ಮೇಲೂ ಆತನ ವ್ಯಕ್ತಿತ್ವದ ಪ್ರಭಾವ ಎಷ್ಟರಮಟ್ಟಿಗೆ ಸಮಾಜದ ಮೇಲೆ ಇರುತ್ತದೆ ಎಂಬ ಆಧಾರದ ಮೇಲೆ ಆತನ ಮಹಾನತೆಯನ್ನು ಅಳೆಯಬಹುದು. ಸಮಾಜಕ್ಕೆ ಸೇವಾವ್ರತಿಗಳನ್ನು ಕಟ್ಟಿಕೊಟ್ಟು ಲೋಕಹಿತದ ಚಿಂತನೆಯಲ್ಲೇ ಬಾಳಿಬದುಕಿದ ಅಜಿತರ ಜೀವನ ಒಂದು ಸಾರ್ಥಕತೆಯ ಮೈಲಿಗಲ್ಲು ಎಂದರು.
ಅಜಿತಶ್ರೀ ಪುರಸ್ಕಾರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್. ಕೆ. ಶೇಷಾಚಲ ಅವರು, ಸೇವಾಕಾರ್ಯಗಳಲ್ಲಿ ಜೀವನವನ್ನೇ ಮುಡಿಪಾಗಿಟ್ಟು ಕಾರ್ಯಮಾಡುವ ಕಾರ್ಯಕರ್ತರನ್ನು ರೂಪಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊರತುಪಡಿಸಿ ಮತ್ತೊಂದು ಸಂಸ್ಥೆಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು.
ಮತ್ತಿಬ್ಬರು ಪ್ರಶಸ್ತಿ ಪುರಸ್ಕೃತರಾದ ನವ್ಯಶ್ರೀ ನಾಗೇಶ್ ಹಾಗೂ ಪರೋಪಕಾರಂ ಸಂಸ್ಥೆಯ ಶ್ರೀಧರ್ ಮಾತನಾಡಿ, ನಿಸ್ವಾರ್ಥ ಕಾರ್ಯ, ಲೋಕ ಕಾಳಜಿ, ಸ್ವಹಿತಾಸಕ್ತಿಯ ತ್ಯಾಗವೇ, ಸೇವೆ ಎಂಬ ಯಜ್ಞಕ್ಕೆ ಹವಿಸ್ಸುಗಳು ಎಂದು ನುಡಿದರು.
ಈ ಮಧ್ಯದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಸಂಗೀತಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್‌ಡಿ ಪಡೆದ ವಿದ್ವಾನ್ ಎಸ್. ಆರ್. ನಾಗರಾಜ್‌ರವರಿಗೆ ಆತ್ಮೀಯವಾಗಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್ ಹಾಗೂ ಕರ್ನಾಟಕ ದಕ್ಷಿಣಪ್ರಾಂತ ಸಹ ಕಾರ್ಯವಾಹ ಟಿ. ಪಟ್ಟಾಭಿರಾಮ್ ಭಾಗವಹಿಸಿದ್ದರು.
ಕಾರ್ಯಕ್ರಮದ ಕೇಂದ್ರಬಿಂದುಗಳಾಗಿದ್ದ ಗುರುಪುರ, ಜೋಸೆಫ್ ನಗರ ರಾಜೀವ್ ಗಾಂಧಿ ಬಡಾವಣೆ, ಹಾಗೂ ಮಾಧವನೆಲೆಯ ಮಕ್ಕಳು ಅತ್ಯಂತ ಮನಮೋಹಕವಾಗಿ ದೇಶಭಕ್ತಿಗೀತೆಗಳಿಗೆ ನರ್ತಿಸಿದರು.
ನೃತ್ಯಗುರು ಸಹನಾ ಚೇತನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಾ. ನಾಗಮಣಿ ನಿರೂಪಿಸಿದರು ಹಾಗೂ ಸಹಚೇತನ ಸಂಸ್ಥೆಯ ಅಧ್ಯಕ್ಷರಾದ ಎನ್. ಆರ್. ಪ್ರಕಾಶ್(ಆಚಿ) ವಂದಿಸಿದರು. ಎಸ್. ಚೇತನ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post