ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ ಬಗ್ಗೆ ವಿಶೇಷ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದ್ದು, ದುಷ್ಕರ್ಮಿಗಳ ವಿರುದ್ಧ, ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇಂದು ಮಣಿಪಾಲ ಆಸ್ಪತ್ರೆಯಲ್ಲಿ ಗೋವುಗಳ ಅಪಹರಣಕಾರರಿಂದ ತೀವ್ರ ಹಲ್ಲೆಗೊಳಗಾಗಿ, ಚಿಕಿತ್ಸೆ ಪಡೆಯುತ್ತಿರುವ ತೀರ್ಥಹಳ್ಳಿಯ ಇಬ್ಬರು ಯುವಕರ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ರಮ ಗೋವು ಸಾಗಾಣಿಕೆ ಹಾಗೂ ಅಪಹರಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಂತಹ ಚಟುವಟಿಗೆಗಳಿಗೆ ಕಡಿವಾಣ ಹಾಕಬೇಕೆಂದು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಗೋ ಸಾಗಾಟವನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ವಾಹನ ಹರಿಸಿದ ಘಟನೆಯನ್ನು ಖಂಡಿಸಿದ ಸಚಿವರು, ಇನ್ನು ಮುಂದೆ ಇಂಥಹ ಘಟನೆಗಳು ಮರುಕಳಿಸಬಾರದು ಹಾಗೂ ಗೋವುಗಳ ಕಳ್ಳ ಸಾಗಾಣಿಕೆ ಕೃತ್ಯಗಳಲ್ಲಿ ತೊಡಗುವ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ಗೋವುಗಳ ಅಕ್ರಮ ಸಾಗಾಣಿಕೆ ಹಾಗೂ ಹತ್ಯೆ ವಿರುದ್ಧ ಕಠಿಣ ಕಾನೂನನ್ನು ಸರಕಾರ ತಂದಿದ್ದು, ಅದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದರು.
ಘಟನೆಯಿಂದ ತೀವ್ರ ಹಲ್ಲೆಗೊಳಗಾಗಿ, ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಯುವಕರನ್ನು ಮಾತನಾಡಿಸಿ, ಅರೋಗ್ಯ ವಿಚಾರಿಸಿದ ಸಚಿವರು, ಆಸ್ಪತ್ರೆಯ ಮುಖ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ಒದಗಿಸುವಂತೆ ಸೂಚಿಸಿದರು.
ತೀರ್ಥಹಳ್ಳಿ ತಾಲೂಕು ಮೇಳಿಗೆ ಗ್ರಾಮದಿಂದ ಸೋಮವಾರ ಅಕ್ರಮವಾಗಿ, ಹಸುಗಳನ್ನು ಸಾಗಿಸುತ್ತಿದ್ದ ದುಷ್ಕರ್ಮಿಗಳು, ಅದನ್ನು ತಡೆಯಲು ಬಂದ ಇಬ್ಬರು ಯುವಕರ ಮೇಲೆ ವಾಹನವನ್ನು ಚಲಾಯಿಸಿ ತೀವ್ರವಾಗಿ ಗಾಯಗೊಳಿಸಿದ್ದರು. ಈ ಸಂಬಂಧ ತೀರ್ಥಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post