ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸುದೀರ್ಘ ಅವಧಿಯಿಂದ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳು ಸರ್ಕಾರವು ಹೊರಡಿಸಿದ ಆದೇಶಾನುಸಾರ ಕೋವಿಡ್ ನಿಯಮಗಳನ್ನು ಅನುಸರಿಸಿ ಶುಭಾರಂಭಗೊಂಡಿದ್ದು, ಮಕ್ಕಳು ಹಾಗೂ ಪೋಷಕರಲ್ಲಿ ಸಂಭ್ರಮದ ವಾತಾವರಣ ಮೂಡಿದೆ ಎಂದು ಗ್ರಾಮೀಣಾಭಿವೃಧ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಪದವಿಪೂರ್ವ ಮಹಿಳಾ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸಿ, ಅವರಿಂದ ಮಾಹಿತಿ ಪಡೆದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕೊರೋನ ಸೋಂಕು ನಿಯಂತ್ರಣ ಕುರಿತಂತೆ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿದ ಅವರು, ಕಾಲೇಜಿಗೆ ಉತ್ಸಾಹದಲ್ಲಿ ಬರುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಬಹುದಿನಗಳಿಂದ ಆನ್‌ಲೈನ್‌ನಲ್ಲಿ ಪಠ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಮಕ್ಕಳಿಗೆ ಇಂಟರ್‌ನೆಟ್ ಸಂಪರ್ಕ ಸಿಗದೆ ತರಗತಿಗಳಿಗೆ ಅನಾನುಕೂಲವಾಗುತ್ತಿತ್ತು. ಅಲ್ಲದೇ ಅನೇಕ ಸಂದರ್ಭದಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಇಲ್ಲದೆ ತರಗತಿಗಳಲ್ಲಿ ಭಾಗವಹಿಸುವುದು ಸಾಧ್ಯವಾಗುತ್ತಿರಲಿಲ್ಲ. ತರಗತಿಗಳ ಆರಂಭದಿಂದಾಗಿ ಇಂತಹ ಸಮಸ್ಯೆಗಳಿಂದ ವಿದ್ಯಾರ್ಥಿನಿಯರಿಗೆ ಪರಿಹಾರ ದೊರೆತಂತಾಗಿದೆ ಎಂಬುದನ್ನು ಮಕ್ಕಳಿಂದಲೇ ಕೇಳಿ ತಿಳಿದಿರುವುದಾಗಿ ಅವರು ತಿಳಿಸಿದರು.

ಶಾಲಾ ಆರಂಭಕ್ಕೂ ಪೂರ್ವದಲ್ಲಿ ಪ್ರತಿ ಕೊಠಡಿಗಳನ್ನು ಸ್ಯಾನಿಟೈಜ್ ಮಾಡಲಾಗಿದೆ. ಅಲ್ಲದೇ ಮೊದಲ ದಿನದಲ್ಲೇ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಹಾಜರಾತಿ ಕಂಡುಬರುತ್ತಿದೆ. ಶಾಲೆಗೆ ಬಾರದಿರುವ ವಿದ್ಯಾರ್ಥಿಗಳು ನಾಳೆಯಿಂದ ಶಾಲೆಗೆ ಆಗಮಿಸಿ, ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು.

ಶಾಲಾ ದಾಖಲಾತಿಗೆ ಅವಕಾಶವಿದ್ದು, ಈವರೆಗೆ ಶಾಲೆಗಳಿಗೆ ದಾಖಲಾಗದ ವಿದ್ಯಾರ್ಥಿಗಳನ್ನು ಪೋಷಕರು ಶಾಲೆಗೆ ದಾಖಲಾತಿ ಮಾಡಿಸಬೇಕು ಎಂದ ಅವರು ಕಾಲೇಜಿನ ಪ್ರತಿ ಕೊಠಡಿಗಳಿಗೆ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನವಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜ ಕಾಗಲ್ಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಸೇರಿದಂತೆ ಕಾಲೇಜಿನ ಬೋಧನ ಹಾಗೂ ಬೋದಕೇತರ ಸಿಬ್ಬಂಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















