ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತದ ಆರ್ಥಿಕ ವ್ಯವಸ್ಥೆ ಕೃಷಿಯ ಮೇಲೆ ಅವಲಂಬಿತವಾಗಿದ್ದು, ಪ್ರಧಾನ ಮಂತ್ರಿಗಳ ದೂರದೃಷ್ಟಿಯ ಯೋಜನೆಯಿಂದ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಯಾಗುತ್ತಿದ್ದು, ಕೃಷಿಕರಿಗೆ ವರದಾನವಾಗಲಿದೆ ಎಂದು ಕೇಂದ್ರ ಕೃಷಿ, ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌವ್ಹಾಣ್ #ShivrajSingh Chouhan ಹೇಳಿದ್ದಾರೆ.
ಅವರು ಇಂದು ನಗರದ ಫೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಅನ್ವೇಷಣ್ ಇನ್ನೋವೇಶನ್ಸ್ ಅಂಡ್ ಎಂಟ್ರೆಪ್ರೆಂಯೂರಿಯಾಲ್ ಪೋರಂ ವತಿಯಿಂದ ನಡೆದ ಮಲೆನಾಡು ಸ್ಟಾರ್ಟ್ ಅಪ್ ಸಮಿಟ್ ಕಾರ್ಯಕ್ರಮವನ್ನು #Malnad Startup Summit Program ಉದ್ಘಾಟಿಸಿ ಮಾತನಾಡಿದರು.

ಕೃಷಿ ಉತ್ಪಾದನೆಯ ವೆಚ್ಚವನ್ನು ಹೇಗೆ ಕಡಿಮೆ ಮಾಡಬೇಕು ಎಂಬುವುದರ ಬಗ್ಗೆ ಚಿಂತನೆ ನಡೆಸಲಾಗಿದೆ. ರಸಗೊಬ್ಬರಕ್ಕೆ ರೈತರಿಗೆ 2 ಲಕ್ಷ ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ನೀಡಿದ್ದೇವೆ. ಕರ್ನಾಟಕದಲ್ಲಿ ಬಿ.ಎಸ್.ವೈ. ಸರ್ಕಾರ ಇರುವಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ಮತ್ತು ರಾಜ್ಯದ 4 ಸಾವಿರ ಸೇರಿ ರೈತರಿಗೆ 10 ಸಾವಿರ ರೂ. ನೀಡುತ್ತಿತ್ತು. ಈಗಿನ ಸರ್ಕಾರ ಅದನ್ನು ನಿಲ್ಲಿಸಿದೆ. ರಾಜ್ಯಕ್ಕೆ ನೀಡಿದ ಕೋಟ್ಯಾಂತರ ರೂ.ಗಳ ಕೃಷಿ ಅನುದಾನವನ್ನು ಖರ್ಚು ಮಾಡದೇ ಉಳಿಸಿಕೊಂಡಿದೆ. ಈ ಬಗ್ಗೆ ನಾನು ಇಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
Also read: From Thyroid Cyst to Bronchogenic Cyst: A Surprising Test and A Radiological and Surgical Triumph!
ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ರೈತ ಬೆಳೆದ ಜಾಗದಲ್ಲಿ ಕಡಿಮೆ ಬೆಲೆ ಸಿಗುವುದರಿಂದ ಬೇಡಿಕೆ ಇರುವ ದೂರದ ಊರಿಗೆ ಮಾರಾಟ ಮಾಡಲು ಸಾಗಾಣಿಕೆ ವ್ಯವಸ್ಥೆಗೆ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಲಿದ್ದು, ಇದರಿಂದ ರೈತನಿಗೆ ಹೆಚ್ಚಿನ ಬೆಲೆ ಸಿಗಲಿದೆ. ಗ್ರಾಹಕರಿಗು ದುಬಾರಿಯಾಗುವುದಿಲ್ಲ ಎಂದರು.
ಎಫ್‍ಪಿಓಗಳಿಂದ ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಸ್ಟಾಟ್‍ಅಪ್ ಕ್ರಾಂತಿಯಾಗಿದ್ದು, ಕರ್ನಾಟಕದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಎಫ್‍ಪಿಓಗಳು ಪ್ರಾರಂಭವಾಗಿದ್ದು, ಶಿವಮೊಗ್ಗದಿಂದಲೇ 60 ಕೋಟಿಯ ವ್ಯವಹಾರವಾಗಿದ್ದು, ಶೀಘ್ರದಲ್ಲೇ 100 ಕೋಟಿ ದಾಟಲಿರುವುದು ಸಂತೋಷತಂದಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ಸಂಖ್ಯೆ ದಾಟಬೇಕು ಎಂಬುವುದೇ ಪ್ರಧಾನಿಯವರ ಉದ್ದೇಶವಾಗಿದ್ದು, ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು.
ಕೃಷಿ ಫಸಲುಗಳ ಅಭಿವೃದ್ಧಿ ಪಾರಂಪರಿಕ ಕೃಷಿಯ ಜೊತೆಗೆ ಆಧುನಿಕ ಕೃಷಿ ವಿಧಿ ವಿಧಾನಗಳನ್ನು ಅಳವಡಿಸಿ ಪಶುಪಾಲನೆ ಸೇರಿದಂತೆ ರೈತನಿಗೆ ಲಾಭವಾಗುವ ಎಲ್ಲಾ ರೀತಿಯ ಪದ್ಧತಿಗಳನ್ನು ಜೋಡಿಸಿ ರೈತನಿಗೆ ಆದಾಯ ಹೆಚ್ಚಳ ಮಾಡಲು ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶ್ವದ ಭೂಪಟದಲ್ಲಿ ಭಾರತ ಆರ್ಥಿಕತೆಯಲ್ಲಿ ಈಗ 5ನೇ ಸ್ಥಾನದಲ್ಲಿದ್ದು, ಮುಂಬರುವ ವರ್ಷಗಳಲ್ಲಿ 3ನೇ ಸ್ಥಾನಕ್ಕೆ ಬರಲಿದೆ. ಕೃಷಿ ಭೂಮಿಯನ್ನು ಉಳಿಸಲು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಸಾವಯವ ಕೃಷಿಯೆಡೆಗೆ ರೈತ ಯೋಚಿಸಬೇಕಾಗಿದೆ. ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಪ್ರಧಾನ ಮಂತ್ರಿಗಳು ದೂರದೃಷಿ ಯೋಜನೆಯನ್ನು ರೂಪಿಸಿದ್ದು, ನಿಮ್ಮೆಲ್ಲರ ಸಹಯೋಗ ಬೇಕು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ಟಾಟ್‍ಅಪ್ ಪ್ರಯೋಗದಿಂದ ಹೆಚ್ಚಿನ ಅನುದಾನ ಸ್ವಯಂಉದ್ಯೋಗಿಗಳಿಗೆ ಹರಿದು ಬರಲಿದೆ. 9ನೇ ವರ್ಷಕ್ಕೆ ಸ್ಟಾಟ್‍ಅಪ್ ಯೋಜನೆ ಕಾಲೂರಿದ್ದು, ದೇಶದಲ್ಲಿ 1.60ಲಕ್ಷ ಹೊಸ ಸ್ಟಾಟ್‍ಅಪ್ ಕಂಪನಿಗಳು ಕಾರ್ಯಾಚರಿಸುತ್ತಿದೆ. ನಮ್ಮ ಶಿವಮೊಗ್ಗದ ಹಲವಾರು ಕಂಪನಿಗಳು ಉತ್ತಮ ಸಾಧನೆ ಮಾಡಿದೆ. ಕೃಷಿಕರಿಗೆ ಬೆನ್ನಲೆಬಾಗಿ ನಿಂತು ಸ್ವಯಂ ಉದ್ಯೋಗಿಗಳಾಗಲು ಎಫ್‍ಪಿಓ ಮುಖ್ಯ ಉದ್ದೇಶ ಹೊಂದಿದ್ದು, ರೈತರ ಲಾಭ ರೈತರೇ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದ ಪೂರ್ಯನಾಯ್ಕ್, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಟಿ.ಡಿ. ಮೇಘರಾಜ್, ಅನ್ವೇಷಣ್ ಪ್ರಮುಖರಾದ ಸುಭಾಶ್, ಸಿ.ಎಂ.ಪಾಟೀಲ್, ಭದ್ರೀಶ್, ನಾಗರಾಜ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸ್ಟಾಟ್‍ಅಪ್ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post