ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಆಧುನಿಕ ಮಾದರಿಯಲ್ಲಿ ಸುಸಜ್ಜಿತವಾಗಿ ನವೀಕೃತವಾಗಿರುವ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಕಚೇರಿಯಾಗಿರುವ ನೌಕರರ ನವೀಕೃತ ಕಟ್ಟಡವು ಜುಲೈ 1ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಎಂ.ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳು, ಗಣ್ಯರು ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 1920ರಲ್ಲಿ ಸ್ಥಾಪನೆಗೊಂಡು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಹಾಗೂ ರಾಷ್ಟ್ರದಲ್ಲೇ ಮಾದರಿ ಸಂಘಟನೆಯಾಗಿದ್ದು, ಹಲವು ವೃಂದ ಸಂಘಗಳಿಗೆ ಸಂಯೋಜನೆ ನೀಡಿರುತ್ತದೆ ಎಂದವರು ತಿಳಿಸಿದ್ದಾರೆ.
ಪ್ರಸ್ತುತ ನೌಕರರ ಸಂಘವು 2020ಕ್ಕೆ ನೂರು ವರ್ಷಗಳ ಶತಮಾನೋತ್ಸವ ಆಚರಣೆಗೆ ಸನ್ನದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನೌಕರರ ಭವನವನ್ನು ಆಧುನಿಕ ಮಾದರಿಯಲ್ಲಿ ನವೀಕರಿಸಲು ಸರ್ಕಾರವು ರೂ. 12 ಕೋಟಿಗಳ ಅನುದಾನವನ್ನು ಮಂಜೂರು ಮಾಡಿತ್ತು, ಭವನದ ನವೀಕರಣ ಕಾಮಗಾರಿಗಳು 2020ನೇ ಜನವರಿಯಲ್ಲಿ ಪ್ರಾರಂಭಗೊಂಡು ಪ್ರಸ್ತುತ ಪೂರ್ಣಗೊಂಡಿರುವ ಭವ್ಯ ಹಾಗೂ ನವೀಕೃತ ಭವನದಲ್ಲಿ ಕಾನೂನು ಸಲಹಾ ಕೇಂದ್ರ, ಬೋರ್ಡ್ ಹಾಲ್, ಅತ್ಯಾಧುನಿಕ ಮಾದರಿಯ ಮೀಟಿಂಗ್ ಹಾಲ್, ಸುಸಜ್ಜಿತವಾದ ಸುಮಾರು 350 ಆಸನವುಳ್ಳ ಸಭಾಂಗಣ, 8 ಹವಾ ನಿಯಂತ್ರಿತ ವಿ.ವಿ.ಐ.ಪಿ. ಕೊಠಡಿಗಳು, 40 ಸುಸಜ್ಜಿತ ವಸತಿಗೃಹ, ವಿಶಾಲವಾದ ವಾಹನ ನಿಲುಗಡೆ ಪ್ರದೇಶ ಹಾಗೂ ವಿಶಾಲವಾದ ಪ್ರಾಂಗಣವನ್ನು ಒಳಗೊಂಡಿದೆ ಎಂದವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post