ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕುಸ್ತಿ ಕ್ರೀಡಾಸಕ್ತರು ಇರುವುದರಿಂದ ಅವರ ಕ್ರೀಡಾಳುಗಳ ಉತ್ತೇಜನಕ್ಕಾಗಿ ಆಖಾಡ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡು ಕೋಚ್‌ಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಅವರು ಇಂದು ಶಿವಮೊಗ್ಗದ ನೆಹರೂ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಾಜ್ಯದ ಎಲ್ಲಾ ಕ್ರೀಡಾಶಾಲೆಗಳು ಕಳೆದ 2ವರ್ಷಗಳ ಅವಧಿಯಲ್ಲಿ ಕೊರೋನದಂತಹ ಸೋಂಕಿನ ಕಾರಣದಿಂದಾಗಿ ಬಳಕೆಯಾಗದಿರುವುದರಿಂದ ಪುನಃ ವ್ಯವಸ್ಥಿತವಾಗಿ ನಿರ್ವಹಿಸಬೇಕಾದ ಅಗತ್ಯವಿದೆ. ಅಲ್ಲದೇ ಕ್ರೀಡಾಶಾಲೆಗಳಲ್ಲಿನ ಕ್ರೀಡಾಳುಗಳಿಗೆ ಆರೋಗ್ಯ, ಸ್ವಚ್ಚತೆಯ ಜೊತೆಗೆ ಉತ್ತಮ ವಾತಾವರಣ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಗುಣಮಟ್ಟದ ಪೌಷ್ಠಿಕ ಆಹಾರ, ವಸತಿ ಮತ್ತಿತರ ಸೌಲಭ್ಯ ನೀಡುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ನಡೆದ ಓಲಂಪಿಕ್ಸ್ ಕ್ರೀಡೆಯಲ್ಲಿ ದೇಶದ ಕ್ರೀಡಾಪಟುಗಳ ಸಾಧನೆ ತೃಪ್ತಿಕರವಾಗಿದೆ. ಆದಾಗ್ಯೂ ಕ್ರೀಡಾಪಟುಗಳಿಗೆ ಇನ್ನಷ್ಟು ಉತ್ತೇಜನ ನೀಡಲು ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳಿಗೆ ಸರ್ಕಾರದ ವತಿಯಿಂದಲೇ ಅಗತ್ಯ ಸಹಕಾರ ನೀಡಲಾಗುವುದಲ್ಲದೇ ದಾನಿಗಳು ಹಾಗೂ ಸರ್ಕಾರದ ಇತರೆ ಅನುದಾನ ಪಡೆದು ಕ್ರಮ ಕೈಗೊಳ್ಳಲಾಗುವುದು. ಜಿಂದಾಲ್‌ನಂತಹ ಕಂಪನಿಗಳು ಸಹಕಾರ ನೀಡುವ ಬಗ್ಗೆ ಆಸಕ್ತಿ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಕ್ರೀಡಾಕೂಟಕ್ಕೆ ತರಬೇತಿ ನೀಡಿ, ಇನ್ನಷ್ಟು ಮಂದಿಯನ್ನು ಕಳಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವಲ್ಲಿ ಕೋಚ್‌ಗಳ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದರು.
6,000-7,000 ಕ್ರೀಡಾಪಟುಗಳು ಭಾಗವಹಿಸುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಯವರು ಆಗಮಿಸಲಿದ್ದಾರೆ. ಸೌಲಭ್ಯವನ್ನು ಬಳಸಿಕೊಂಡು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಅಧಿಕಾರಿಗಳಿಂದ ಆಗಬೇಕಾಗಿದೆ. ಜಿಲ್ಲೆಗೆ 73.00ಕೋ. ಹಾಗೂ ಮಂಡ್ಯ ಜಿಲ್ಲೆಗೆ 70.00ಕೋಟಿ ಅನುದಾನ ಖೇಲೋ ಇಂಡಿಯಾ ಯೋಜನೆಯಡಿ ಮಂಜೂರಾಗಿದೆ ಎಂದ ಅವರು, ರಾಜ್ಯದಿಂದ 30ಕೋ. ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ರೇಷ್ಮೇ ಕೃಷಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ವಿದೇಶದಿಂದ ಬರುತ್ತಿದ್ದ ರೇಷ್ಮೇ ಆಮದಿನ ಮೇಲೆ ನಿರ್ಬಂಧ ವಿಧಿಸಿರುವುದರಿಂದ ದೇಶೀಯ ರೇಷ್ಮೇಗೆ ಹೆಚ್ಚಿನ ಬೇಡಿಕೆ ದೊರೆಯಲಿದೆ. ಈ ನಿರ್ಣಯದಿಂದಾಗಿ ನಷ್ಟದಲ್ಲಿದ್ದ ಮೈಸೂರು ಸಿಲ್ಕ್ಸ್ ಘಟಕ ೨೦೦ಕೋಟಿ ರೂ.ಗಳ ಆದಾಯ ಗಳಿಸಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರೇಷ್ಮೇ ಕೃಷಿಗೆ ರೈತರು ಆಸಕ್ತಿ ತೋರುವಂತೆ ಪ್ರಾತ್ಯಕ್ಷಿತೆಗಳನ್ನು ಏರ್ಪಡಿಸಲಾಗುವುದಲ್ಲದೆ ಉತ್ತಮ ಬೆಳೆಗಾರರಿಗೆ ಗುರುತಿಸಿ ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ರೇಷ್ಮೇ ಬೆಳೆಗೆ ಸೋಂಕು ಕಾಣಿಸಿಕೊಂಡಿದ್ದು, ಅದರ ನಿಯಂತ್ರಣಕ್ಕಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ತಜ್ಞ ವಿಜ್ಞಾನಿಗಳೊಂದಿಗೆ ರೇಷ್ಮೇ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದಲ್ಲದೆ ರೈತರೊಂದಿಗೆ ಸಮಾಲೋಚನೆ ನಡೆಸಲಾಗುವುದು. ರೇಷ್ಮೇ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಇದ್ದು, ರೇಷ್ಮೇ ಬೆಳೆ ಕ್ಷೇತ್ರ ವಿಸ್ತರಣೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೇಷ್ಮೇ ಬೆಳೆಗಾರರಿಗೆ ಸಹಾಯಧನದ ಚೆಕ್‌ನ್ನು ಸಚಿವರು ಫಲಾನುಭವಿಗಳಿಗೆ ವಿತರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post