ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ, ಸೌಹಾರ್ದತೆ ಅವಶ್ಯಕ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಅಭಿಪ್ರಾಯಪಟ್ಟರು.
ಗಿಡಕ್ಕೆ ನೀರೆರೆಯುವುದರ ಮೂಲಕ ಸಹ್ಯಾದ್ರಿ ಕಾಲೇಜಿನಲ್ಲಿ ಎನ್.ಎಸ್.ಎಸ್. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ, ಪರಿಸರದ ಮಹತ್ವ, ಸೌಹಾರ್ಧತೆ, ಯುವ ಸಮೂಹಕ್ಕೆ ಅವಶ್ಯಕತೆ ಇದೆ. ಇಂತಹ ಶಿಬಿರಗಳು ಈ ನಿಟ್ಟಿನಲ್ಲಿ ವಿಶೇಷ ವೇದಿಕೆಯಾಗಿದೆ. ಶಿಬಿರವನ್ನು ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಉಪಯೋಗಿಸಿಕೊಳ್ಳಬೇಕು. ಶಿಬಿರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಎನ್. ಎಸ್. ಎಸ್. ಶಿಬಿರಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಸಾಮಾಜಿಕ ಮೌಲ್ಯಗಳನ್ನು ಕಲಿಸುವ ತರಬೇತಿ ಕೇಂದ್ರಗಳಾಗಿವೆ. ಉಳಿ ಪೆಟ್ಟು ತಿಂದ ಕಲ್ಲೇ ಮೂರ್ತಿಯಾಗುವುದು. ಮೂರ್ತಿಗಳನ್ನು ಇಂತಹ ಶಿಬಿರಗಳು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತವೆ. ಶಿಬಿರವು ಯಶಸ್ವಿಯಗಲಿದೆ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಪರಿಸರ ನಾಗರಾಜ್, ಶಿಬಿರದ ರೂಪುರೇಷೆಗಳನ್ನು ವಿವರಿಸಿ, ವ್ಯಕ್ತಿತ್ವ ವಿಕಸನ, ಸ್ವಚ್ಛತಾ ಮನೋಭಾವ, ನಾಯಕತ್ವ ತರಬೇತಿಯನ್ನು ಮೂಲಭೂತ ಉದ್ದೇಶವನ್ನಾಗಿಟ್ಟುಕೊಂಡು ರಾಜ್ಯದ ಪ್ರಥಮ ಶಿಬಿರವನ್ನು ಇಲ್ಲಿ ಹಮ್ಮಿಕೊಂಡಿದ್ದೇವೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪದವಿ ಕಾಲೇಜುಗಳ ಆಯ್ದ 150 ಸ್ವಯ ಸೇವಕರು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಸಹ್ಯಾದ್ರಿ ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಎಂ. ವಾಗ್ದೇವಿ ಮಾತನಾಡಿ, ಉತ್ತಮ ಆಲೋಚನೆ ಮತ್ತು ಉತ್ತಮ ಯೋಜನೆಗಳೊಂದಿಗೆ ಸಮಾಜದ ಅಭಿವೃದ್ಧಿಗೆ ಇಂತಹ ಶಿಬಿರವು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಸಹ್ಯಾದ್ರಿ ಕಲಾ ಕಾಲೇಜಿನ ಡಾ. ಟಿ. ಅವಿನಾಶ್ ಮಾತನಾಡಿ, ಸಹ್ಯಾದ್ರಿ ಕಾಲೇಜು ಕರ್ನಾಟಕದ ಸಂಸ್ಕೃತಿ, ಕಲೆ, ಸಂಗೀತ, ರಾಜಕೀಯ, ಇತಿಹಾಸದಲ್ಲೇ ಅತ್ಯಂತ ಮುಂಚೂಣಿ ಯಲ್ಲಿರುವಂತಹ ಪರಂಪರೆಯನ್ನು ಹೊಂದಿದೆ. ಅಂತಹ ಪರಂಪರೆಯನ್ನು ಮುಂದುವರೆಸಲು ಇಂತಹ ಶಿಬಿರಗಳು ಮೂಲ ವೇದಿಕೆಯಾಗಲಿ ಎಂದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಡಾ. ವೀಣಾ ಎಂ.ಕೆ., ಅವರು ಮಾತನಾಡುತ್ತಾ ಬದುಕಿನಲ್ಲಿ ಸರಳತೆ, ಸಹೃದಯತೆ, ಸಂಸ್ಕಾರಗಳು ಅತ್ಯಂತ ಅವಶ್ಯಕ. ಕೀಳರಿಮೆ ತೊರೆದು ಕ್ರಿಯಶೀಲರಾಗಿ ಶಿಬಿರದಲ್ಲಿ ಭಾಗವಹಿಸಿ ಎಂದರು.
ಡಾ. ಹಾಲಮ್ಮ ನಿರೂಪಿಸಿದರು. ಡಾ. ಶುಭ ಮರವಂತೆ ಎಲ್ಲರನ್ನು ಸ್ವಾಗತಿಸಿದರು. ಡಾ. ಪ್ರಕಾಶ್ ವಂದನಾರ್ಪಣೆ ಮಾಡಿದರು. ಪರಶುರಾಂ, ಶ್ರೀ ಗಣೇಶ್ ಕೆಂಚನಾಲ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post