ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸುವುದು ಕರ್ತವ್ಯ. ಪಠ್ಯ-ಪುಸ್ತಕಗಳಿಗೆ ಸೀಮಿತರಾಗದೆ ತಮ್ಮಲ್ಲಿರುವ ಇತರ ಕೌಶಲ್ಯಗಳಲ್ಲೂ ಪರಿಣತಿ ಹೊಂದಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ನಗರದ ಡಿವಿಎಸ್ ಕಾಲೇಜಿನ ಆವರಣದಲ್ಲಿ ದೇಶೀಯ ವಿದ್ಯಾ ಶಾಲಾ ಸಮಿತಿ, ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜು ಶಿವಮೊಗ್ಗ ಇದರ ಸುವರ್ಣ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಇಡೀ ರಾಜ್ಯದಲ್ಲಿ ಡಿವಿಎಸ್ ಒಂದು ವಿಶಿಷ್ಟ ಸಂಸ್ಥೆಯಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ನೀಡುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ. 1917ರಲ್ಲಿ ಅನೇಕ ಹಿರಿಯರ ತಪಸ್ಸಿನಿಂದ ಸ್ಥಾಪನೆಗೊಂಡ ಈ ವಿದ್ಯಾಸಂಸ್ಥೆ ಅಂದಿನಿಂದಲೂ ಈಡೀ ದೇಶಕ್ಕೆ ಅನೇಕ ಪ್ರತಿಭಾವಂತರನ್ನು ನೀಡಿದೆ. ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ವಿಜ್ಞಾನಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮತ್ತು ಕ್ರೀಡಾಪಟುಗಳನ್ನು ನೀಡಿದ ಶಿಕ್ಷಣ ಸಂಸ್ಥೆಯಾಗಿದೆ ಎಂದರು.
ಅಂದಿನ ಕಾಲದಲ್ಲಿ ಅಶ್ವತ್ಥನಾರಾಯಣ್, ಭದ್ರಿ ನಾರಾಯಣ್ ಅವರಂತಹ ಅನೇಕ ಹಿರಿಯರ ಶ್ರಮದಿಂದ ಈ ಸಂಸ್ಥೆ ಪ್ರಾರಂಭವಾಗಿದ್ದು, ಅವರನ್ನು ಇಂದಿಗೂ ಹಿರಿಯ ವಿದ್ಯಾರ್ಥಿಗಳು ನೆನಪಿಸಿಕೊಳ್ಳುತ್ತಾರೆ. ನಿಸ್ವಾರ್ಥದಿಂದ ಅವರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ತಮ್ಮ ಶ್ರಮವನ್ನು ಹಾಕಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾನು ಕೂಡ ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಸಂಸ್ಥೆಯನ್ನು ಇನ್ನು ಹೆಚ್ಚಿನ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಎಲ್ಲಾ ಹಿರಿಯ ವಿದ್ಯಾರ್ಥಿಗಳ ಮೇಲೆ ಇದೆ. ಇವತ್ತಿನ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಆಡಳಿತ ಮಂಡಳಿ ಕಾಲಕಾಲಕ್ಕೆ ಒದಗಿಸುತ್ತಾ ಬಂದಿದೆ. ತಮ್ಮ ಮುಂದಿನ ಭವಿಷ್ಯಕ್ಕೆ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣಬೇಕು ಮತ್ತು ಏನು ಅನುಕೂಲಬೇಕು ಎಲ್ಲವನ್ನು ಈ ಸಂಸ್ಥೆ ಒದಗಿಸಿದೆ ಎಂದರು.
ಶಿವಮೊಗ್ಗ ಇಂದು ರಾಜ್ಯದಲ್ಲೇ ಒಂದು ಶಿಕ್ಷಣದ ಹಬ್‌ಆಗಿ ಪರಿವರ್ತನೆಯಾಗುತ್ತಿದೆ. ಇಲ್ಲಿ ಮೆಡಿಕಲ್ ಕಾಲೇಜು, ಕೃಷಿ ಕಾಲೇಜು, ಆಯುರ್ವೇದ ಕಾಲೇಜು, ಪಶು ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಈ ರೀತಿ ಅನೇಕ ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಶಿವಮೊಗ್ಗದ ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಕೆ.ಎನ್.ರುದ್ರಪ್ಪ ಕೊಳಲೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜ್‌ಶೇಖರ್, ಸಹಕಾರ್ಯದರ್ಶಿ ಡಾ.ಎ.ಸತೀಶ್‌ಕುಮಾರ್ ಶೆಟ್ಟಿ, ಖಜಾಂಚಿ ಕೆ.ಗೋಪಿನಾಥ್, ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post