ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉದ್ಯಮ ಕ್ಷೇತ್ರದಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿದ್ದು ವಿದ್ಯಾರ್ಥಿಗಳು ಅವಶ್ಯಕತೆಗಳ ಆಧಾರದ ಮೇಲೆ ಅಧ್ಯಯನ ನಡೆಸಬೇಕಿದೆ ಎಂದು ಟಿಸಿಎಸ್ ಕಂಪನಿ ವ್ಯವಸ್ಥಾಪಕರಾದ ಶ್ರೀನಿವಾಸ ರಾಮನುಜಂ ಅಭಿಪ್ರಾಯಪಟ್ಟರು.
ಬುಧವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಇಂಡಕ್ಷನ್ ಕಾರ್ಯಕ್ರಮ-2022’ ಆನ್ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಂಡದ ಆಟಗಾರರಿದ್ದಂತೆ. ಪರಸ್ಪರ ಅಧ್ಯಯನಶೀಲತೆ, ಹೊಸ ವಿಷಯಗಳ ಕುರಿತು ಚರ್ಚೆ, ಅನ್ವೇಷಣೆ ಎಲ್ಲವೂ ತಂಡದಲ್ಲಿ ಒಳಗೊಂಡಿರಬೇಕು. ಹಲವಾರು ಕಂಪನಿಗಳ ಮೊದಲ ಪ್ರಾಶಸ್ತ್ಯ ತಂಡಗಳ ಕಲಿಕೆಯಾಗಿರುತ್ತದೆ. ಇದರಿಂದ ಹಲವಾರು ಆವಿಷ್ಕಾರಿ ಅದ್ಭುತತೆಯನ್ನು ನಿರ್ಮಾಣ ಮಾಡಬಹುದಾಗಿದೆ ಎಂದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕೌಶಲ್ಯತೆ ಮತ್ತು ಅಧ್ಯಯನದ ಆಧಾರದ ಮೇಲೆ ಅನುಷ್ಟಾನಗೊಂಡಿದೆ. ಒಂದು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮತ್ತೊಂದು ವಿಭಾಗದ ವಿಷಯಗಳ ಕುರಿತಾಗಿಯೂ ಅಧ್ಯಯನ ನಡೆಸಬಹುದಾಗಿದೆ. ಇಂತಹ ವಿದ್ಯಾರ್ಥಿ ಕೇಂದ್ರಿತ ಕಲಿಕೆಗೆ ಶಿಕ್ಷಣ ನೀತಿ ವೇದಿಕೆ ಮಾಡಿಕೊಡಲಿದೆ. ವಿಶ್ಲೇಷಣಾತ್ಮಕ ಕೌಶಲ್ಯ, ಸಂವಹನ ಕೌಶಲ್ಯ, ಉತ್ತಮ ಬರವಣೆಗೆ ಮತ್ತು ಕೇಳಿಸಿಕೊಳ್ಳುವ ಕೌಶಲ್ಯಗಳು ಪ್ರಮುಖವಾಗಿ ನಾವು ಅಳವಡಿಸಿಕೊಳ್ಳಬೇಕಿದೆ. ಉದ್ಯೋಗ ದೊರೆತ ಕೆಲವೇ ದಿನಗಳಲ್ಲಿ ಇತರರು ಹೇಳಿದ ಸಲಹೆಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ ಕೌಶಲ್ಯತೆಯನ್ನು ಯುವ ಸಮೂಹ ಕಳೆದುಕೊಳ್ಳುತ್ತಿದೆ. ಓರ್ವ ಉತ್ತಮ ಕೇಳುಗ ಸದಾ ಹೊಸತನದ ವ್ಯಕ್ತಿತ್ವವಾಗಿ ರೂಪಗೊಳ್ಳಬಹುದಾಗಿದೆ ಎಂದು ಹೇಳಿದರು.
ಎನ್‌ಇಎಸ್ ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಸಾಮಾಜಿಕವಾಗಿ ತಮ್ಮದೇ ಜವಬ್ದಾರಿಯನ್ನು ಹೊಂದಿರುತ್ತಾರೆ. ವಿದ್ಯಾರ್ಥಿ ಜೀವನದ ಅಮೂಲ್ಯತೆಯನ್ನು ಅರಿತು ಉತ್ತಮ ಎಂಜಿನಿಯರ್‌ಗಳಾಗಿ ಹೊರಹೊಮ್ಮಿ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ ಕಾಲೇಜಿನಲ್ಲಿರುವ ಮಾರ್ಗದರ್ಶನ ಯೋಜನೆ ಮೂಲಕ ವಿದ್ಯಾರ್ಥಿಗಳ ಪ್ರತಿ ಹಂತದ ಕಲಿಕೆಯ ಕುರಿತ ಮೌಲ್ಯಮಾಪನ ನಡೆಸಬಹುದಾಗಿದೆ. ಹಲವಾರು ಉತ್ತಮ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದು ನಾವಿನ್ಯಯುತ ಚಿಂತನೆಗಳೊಂದಿಗೆ ಸಾಗಲು ಅನೇಕ ಪೂರಕ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಡಾ.ಮಂಜುನಾಥ.ಪಿ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ.ರಜತ್ ಹೆಗಡೆ, ಕಾರ್ಯಕ್ರಮ ಸಂಯೋಜಕರಾದ ಡಾ.ಆನಂದರಾಮ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಅದ್ಯಾಪಕರು ಭಾಗವಹಿಸಿದ್ದರು. ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಮೊಯಿನುದ್ದಿನ್ ಖಾನ್ ವಂದಿಸಿ, ಪಿಆರ್‌ಓ ಸಿ.ಎಂ.ನೃಪತುಂಗ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post