ಶಿವಮೊಗ್ಗ: ಹಲವಾರು ಸಂಘ-ಸಂಸ್ಥೆಗಳು ನಿಯಮಿತವಾಗಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತಾ, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತವೆ. ಆದರೆ, ತಾವು ಆಯೋಜನೆ ಮಾಡಿದ್ದ ಶಿಬಿರದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ.ಎಸ್. ನಾಗೇಂದ್ರ ಸ್ವತಃ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ನಗರದ ಮ್ಯಾಕ್ಸ್ ಏಂಜಲ್ಸ್ ಆಸ್ಪತ್ರೆಯ ಆವರಣದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ರಕ್ತ ನಿಧಿ ವಿಭಾಗ ಹಾಗೂ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ, ರಕ್ತದಾನ ಮಾಡಿ ಅವರು ಮಾತನಾಡಿದರು.
ರಕ್ತದಾನ ಮಾಡುವ ಮೂಲಕ ಮೂರು ಜೀವಗಳನ್ನು ಉಳಿಸಿದ ತೃಪ್ತಿ ನಮಗೆ ಸಿಗುತ್ತದೆ. ಜಗತ್ತು ಆಧುನಿಕವಾಗುತ್ತಿದ್ದಂತೆ ಜನರ ಜೀವನವೂ ಆಧುನಿಕವಾಗುತ್ತಿದೆ. ಈ ಆಧುನಿಕ ಜೀವನ ಶೈಲಿಯಿಂದಾಗಿ ಸಮಾಜದ ಎಲ್ಲ ಸ್ತರದಲ್ಲೂ ರಕ್ತ ಹೀನತೆಯಿಂದ ಯುವಜನತೆ ಬಳಲುತ್ತಿರುವುದು ವಿಷಾದನೀಯ ಎಂದರು.
ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ನೂರಾರು ಯೂನಿಟ್ ರಕ್ತದ ಅವಶ್ಯಕತೆ ರೋಗಿಗಳಿಗೆ ಇರುತ್ತದೆ. ಅಪಘಾತ, ಶಸ್ತ್ರಚಿಕಿತ್ಸೆ, ರಕ್ತಹೀನತೆ ಹಾಗೂ ತುರ್ತು ಚಿಕಿತ್ಸೆಯ ಸಮಯ ಹೀಗೆ ಹಲವಾರು ಕಾರಣಗಳಿಂದ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ರಕ್ತದಾನಿಗಳು ನಿಯಮಿತವಾಗಿ ರಕ್ತನಿಧಿಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಅನಿವಾರ್ಯತೆ ಇದೆ. ಹನಿ ರಕ್ತವೂ ಜೀವ ಉಳಿಸುವ ಸಂಜೀವಿನಿಯಂತೆ ಕಾರ್ಯನಿರ್ವಹಿಸುವುದರಿಂದ ರಕ್ತವನ್ನು ಶೇಖರಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಡಿಕೆಲ ಸುಬ್ಬಯ್ಯ ಟ್ರಸ್ಟ್’ನ ಟ್ರಸ್ಟಿ ಡಾ. ವಿನಯಾ ಶ್ರೀನಿವಾಸ್ ಮಾತನಾಡಿ, ರಕ್ತದಾನವೆಂಬುದು ಅತ್ಯಂತ ಶ್ರೇಷ್ಟವಾದ ಕೆಲಸಗಳಲ್ಲಿ ಒಂದಾಗಿದೆ. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಕೇವಲ ಒಬ್ಬ ದಾನಿಯಿಂದಲೇ ಪಡೆಯಬೇಕು. ಯುವಜನತೆ ರಕ್ತದಾನ ಮಾಡುವಂತೆ ಪ್ರೇರೇಪಿಸಿ ಜಾಗೃತಿ ಮೂಡುವಂತಹ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಯುವಪೀಳಿಗೆ ಹೆಚ್ಚಿನ ಗಮನಹರಿಸಿ ಜೀವರಕ್ಷಣೆಗೆ ಸಹಕಾರಿಯಾಗಲು ಮುಂದಾಗಬೇಕು ಎಂದು ಕರೆ ನೀಡಿದರು.
ರಕ್ತದಾನ ಮಾಡುವ ವಿಚಾರದಲ್ಲಿ ವಿದ್ಯಾವಂತರಲ್ಲೂ ಮೂಢನಂಬಿಕೆಗಳಿವೆ. ರಕ್ತದಾನ ಮಾಡುವುದರಿಂದ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರು ಉಂಟಾಗುವುದಿಲ್ಲ. ಬದಲಾಗಿ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುವಲ್ಲಿ ಸಹಾಯ ಮಾಡುತ್ತದೆ. ರಕ್ತದಾನ ಮಾಡುವುದರಿಂದ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ಕಂಡುಬರುವುದಿಲ್ಲ. ಹೆಚ್ಚಿನ ಜನರು ರಕ್ತದಾನ ಮಾಡುವಂತಾಗಬೇಕು ಎಂದರು.
ಶಿಬಿರದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲತಾ ನಾಗೇಂದ್ರ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರರೋಗ ತಜ್ಞ ಡಾ. ನಾರಾಯಣ ಪಂಜಿ, ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಸುರೇಶ್, ಡಾ. ವೈಭವ್ ನಾಯಕ್, ಡಾ. ಅನಿರುದ್ಧ ಉಡುಪ, ಡಾ. ಮಿಥುನ್ ಭಾಗವಹಿಸಿದ್ದರು.
Discussion about this post