ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಶ್ರಮ ಮತ್ತು ಗುರುವಿನ ಮಾರ್ಗದರ್ಶನದ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ನಮ್ಮನ್ನು ಯಶಸ್ಸಿನ ದಾರಿಯಲ್ಲಿ ಕೊಂಡೊಯ್ಯುತ್ತದೆ ಎಂದು ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಹೇಳಿದರು.
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಸಂಸ್ಥೆಯ ಕ್ಷೇತ್ರ ಮಟ್ಟದ ಸಿಬ್ಬಂದಿಗೆ ಒಂದು ದಿನದ “ಸಮಗ್ರ ವ್ಯಕ್ತಿತ್ವ ವಿಕಸನ ತರಬೇತಿ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಪ್ರತಿಯೊಬ್ಬರು ಉನ್ನತ ಕನಸು ಕಾಣಬೇಕು. ಕನಸು ನಮಗೆ ನಿದ್ದೆ ಮಾಡಲು ಬಿಡಬಾರದು. ಕನಸು ಈಡೇರಿಸಿಕೊಳ್ಳಲು ದಿನನಿತ್ಯ ಶ್ರಮಿಸುವ ದಾರಿ ಆರಿಸಿಕೊಳ್ಳಬೇಕು. ಕನಸು ನನಸಾಗಿಸಿಕೊಳ್ಳಲು ಸರಿಯಾದ ಸಿದ್ಧತೆ ನಡೆಸಬೇಕು. ಅದಕ್ಕಾಗಿ ಸಂಪೂರ್ಣ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲೂ ಅಸಾಧರಣ ಶಕ್ತಿ ಸಾಮಾರ್ಥ್ಯ ಇದ್ದು, ನಿರಂತರ ಪರಿಶ್ರಮ ಹಾಗೂ ಸಕರಾತ್ಮಕ ಆಲೋಚನೆ ಇದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ವಿಶ್ವದಲ್ಲಿ ಸಾಧನೆ ಮಾಡಿದವರ ಜೀವನಗಾಥೆ ಗಮನಿಸಿದರೆ ನಿಮಗೂ ಅರಿವು ಆಗುತ್ತದೆ. ಎಲ್ಲರೂ ಸಾಧನೆ ಮಾಡಬಲ್ಲ ಸಾಮಾರ್ಥ್ಯ ಹೊಂದಿರುವವರು ಆಗಿರುತ್ತಾರೆ ಎಂದು ಹೇಳಿದರು.
ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಸಿಇಒ ಬಿ.ಟಿ.ಭದ್ರೀಶ್ ಮಾತನಾಡಿ, 25 ವರ್ಷ ಪೂರೈಸಿ ಚೈತನ್ಯ ಸಂಸ್ಥೆಯು ಮುನ್ನಡೆಯುತ್ತಿದ್ದು, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮಹತ್ತರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಸಮುದಾಯ ಕೆಲಸಗಳನ್ನು ಸಂಸ್ಥೆಯು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದರು.

ಡಾ. ಧನಂಜಯ ಸರ್ಜಿ ಅವರು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಶಿವಮೊಗ್ಗದಲ್ಲಿ ಹೆಸರಾಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ, ಫೌಂಡೇಷನ್ ಹಾಗೂ ವಿವಿಧ ರೀತಿಯಲ್ಲಿ ಸೇವಾ ಕ್ಷೇತ್ರದಲ್ಲಿತೊಡಗಿಸಿಕೊಂಡಿರುವುದು ಅಭಿನಂದನೀಯ ಎಂದು ತಿಳಿಸಿದರು.
ಎಸ್ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಡೋಂಗ್ರೆ ಮಾತನಾಡಿದರು. ಚೈತನ್ಯ ಸಂಸ್ಥೆ ಅಧ್ಯಕ್ಷ ಡಾ. ರಿಜಿ ಜೋಸೇಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್ ವಿಶೇಷ ಉಪನ್ಯಾಸದ ಮೂಲಕ ಎಲ್ಲರನ್ನು ರಂಜಿಸಿದರು. ಭಾಷಣದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಮೌಲ್ಯಗಳ ಬಗ್ಗೆ ವಿವರಿಸಿದರು.












Discussion about this post