ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರದ ಮುಂದಿನ ಬಜೆಟ್ ಅಧಿವೇಶನದೊಳಗೆ ಎನ್‌ಪಿಎಸ್ ನೌಕರರ ಬೇಡಿಕೆ ಈಡೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಎನ್‌ಪಿಎಸ್ ಮುಖಂಡರ ಜತೆಯಲ್ಲಿ ವಿಶೇಷ ಸಭೆ ಆಯೋಜಿಸಲಾಗುವುದು. ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಒತ್ತಡ ಹಾಕಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಘಟಕ, ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಎನ್‌ಪಿಎಸ್ ನೌಕರರ ಸಮಾವೇಶ ಮತ್ತು ವೋಟ್ ಫಾರ್ ಒಪಿಎಸ್ ಅಭಿಯಾನ, ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸುವಾಗ ದಬ್ಬಾಳಿಕೆ ನಡೆಯುವುದು ಸಹಜ. ಆದರೆ ಯಾವುದೇ ಒತ್ತಡಕ್ಕೂ ಹೆದರದೇ ನಿರಂತರವಾಗಿ ಹೋರಾಟ ಮುಂದುವರೆಸೋಣ, ಎನ್‌ಪಿಎಸ್ ನೌಕರರ ಬೇಡಿಕೆ ಈಡೇರುವವರೆಗೂ ನಿಮ್ಮ ಹೋರಾಟಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.
ಬೇಡಿಕೆಗಳ ಈಡೇರಿಕೆಗಾಗಿ ಯಾರೇ ಹೋರಾಟ ನಡೆಸಿದರೂ ಅವರಿಗೆ ಬೆಂಬಲ ನೀಡುವುದು ಸಜ್ಜನರ ಕರ್ತವ್ಯ. ಎನ್‌ಪಿಎಸ್ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಂಡು ರಾಜ್ಯಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಬೆಂಬಲಕ್ಕೆ ಎಲ್ಲರೂ ನಿಲ್ಲಬೇಕು ಎಂದರು.
ರಾಜ್ಯದಲ್ಲಿ ರಾಜಕಾರಣಿಗಳಿಗೆ ಮಾತ್ರ ಒಪಿಎಸ್ ವ್ಯವಸ್ಥೆ ಇದ್ದು, ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಜಾರಿಗೊಳಿಸಿರುವುದು ಯಾವ ನ್ಯಾಯ. ಒಂದು ವೇಳೆ ಎನ್‌ಪಿಎಸ್ ಉತ್ತಮ ವ್ಯವಸ್ಥೆ ಆಗಿದ್ದರೆ ರಾಜಕಾರಣಿಗಳಿಗೂ ಎನ್‌ಪಿಎಸ್ ಅನ್ವಯ ಮಾಡಲಿ. ರಾಜ್ಯ ಸರ್ಕಾರ ಎನ್‌ಪಿಎಸ್ ನಿಂದ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಾಂತಾರಾಮ್ ಮಾತನಾಡಿ, ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ವೋಟ್ ಫಾರ್ ಒಪಿಎಸ್ ಎಂಬ ಅಭಿಯಾನದ ಮುಖಾಂತರ ಸರ್ಕಾರಕ್ಕೆ ಒತ್ತಡ ಹಾಕಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ರಾಘವೇಂದ್ರ ಮಾತನಾಡಿ, ಒಪಿಎಸ್ ಯೋಜನೆ ಜಾರಿ ಹೋರಾಟ ಬದುಕಿನ ಹೋರಾಟ ಆಗಿದ್ದು, ಎನ್‌ಪಿಎಸ್ ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅನುಭವಿಸಿದವರಿಗೆ ಗೊತ್ತಿದೆ. ರಾಜ್ಯ ಸರ್ಕಾರ ಕೂಡ ಎನ್‌ಪಿಎಸ್ ನೌಕರರ ಸಮಸ್ಯೆಗಳನ್ನು ಅರಿತುಕೊಂಡು ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಸಮಾವೇಶ ನಡೆಯುವ ಫ್ರೀಡಂ ಪಾರ್ಕ್ ಸಭಾಂಗಣಕ್ಕೆ ಎಲ್ಲ ಎನ್‌ಪಿಎಸ್ ನೌಕರರು ಆಗಮಿಸಿದರು. ಎಲ್ಲರಿಗೂ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಜ್ಜಿಗೆ ವಿತರಿಸಲಾಯಿತು. ಮೂರು ಸಾವಿರಕ್ಕೂ ಅಧಿಕ ಎನ್‌ಪಿಎಸ್ ನೌಕರರು ಪಾಲ್ಗೊಂಡಿದ್ದರು.
ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪರ್‍ಯಾನಾಯ್ಕ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣ, ಚಂದ್ರಕಾಂತ್, ತಾಲೂಕು ಅಧ್ಯಕ್ಷ ಪ್ರಭಾಕರ್, ಪ್ರಮುಖರಾದ ಗುರುಸ್ವಾಮಿ, ಮಹಾಬಲೇಶ್ವರ ಹೆಗಡೆ, ಡಾ. ನಾಗರಾಜ್ ಪರಿಸರ, ರಾಧಾ, ಕೇಶವಪ್ರಸಾದ್, ರವಿ, ವಿವಿಧ ಜಿಲ್ಲೆಗಳ ಅಧ್ಯಕ್ಷರು, ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post