ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲೆಯಲ್ಲಿ ಪತ್ರಕರ್ತರ ಸೋಗಿನಲ್ಲಿ ಕೆಲವು ಪತ್ರಿಕೆಗಳ ಹೆಸರಿನಲ್ಲಿ ಮತ್ತು ವಾಟ್ಸಾಪ್, ಫೇಸ್‍ಬುಕ್, ವೆಬ್‍ಪೇಜ್, ಯೂಟ್ಯೂಬ್ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳು, ಖಾಸಗಿ ಉದ್ದಿಮೆದಾರರು, ವೈದ್ಯರುಗಳು, ರಾಜಕಾರಣಿಗಳಿಗೆ ಹಣಕ್ಕಾಗಿ ಕಿರುಕುಳ ಕೊಡುವ, ಸಲ್ಲದ ಆರೋಪ ಮಾಡಿ ಬ್ಲಾಕ್‍ಮೇಲ್‍ನಿಂದ ಸುಲಿಗೆ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರ ಸೋಗಿನಲ್ಲಿ ಭೂವ್ಯವಹಾರದಲ್ಲಿ ಮಧ್ಯಪ್ರವೇಶಿಸಿ ಸುಲಿಗೆ ಮಾಡುವುದು, ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡ/ನಿವಾಸ/ ಲೇಔಟ್ ಗಳ ಬಗ್ಗೆ ದೂರುಗಳ ನೆಪದಲ್ಲಿ ಮಾಲೀಕರಿಗೆ ಹಣಕ್ಕಾಗಿ ಕಿರುಕುಳ ನೀಡುವುದು. ಸರ್ಕಾರಿ ಕಚೇರಿಗಳಿಗೆ ನುಗ್ಗಿ ಕೆಲಸದ ಅವಧಿಯಲ್ಲಿ ಅಧಿಕಾರಿ /ಸಿಬ್ಬಂದಿಗಳ ವಿಡಿಯೋ ಚಿತ್ರೀಕರಣ ಮಾಡುವುದು, ಮತ್ತು ಅವರನ್ನು ಬ್ಲಾಕ್‍ಮೇಲ್ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿರುವುದು ಸಂಘದ ಗಮನಕ್ಕೆ ಬಂದಿವೆ.
ನಕಲಿ ಪತ್ರಕರ್ತರ ಹಾವಳಿಯನ್ನು ಪ್ರಶ್ನಿಸುವ ನೈಜ ಕಾರ್ಯನಿರತ ಪತ್ರಕರ್ತರ ವಿರುದ್ದವೂ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕಾರಿ ಬರಹ ಬರೆಯುವ ಮೂಲಕ ತೇಜೋವಧೆ ಮಾಡಲಾಗುತ್ತಿದೆ. ಅಲ್ಲದೆ ಶಿವಮೊಗ್ಗ ಜಿಲ್ಲಾವ್ಯಾಪ್ತಿಯಲ್ಲಿ “ಪ್ರೆಸ್” (PRESS) ಸ್ಟಿಕರ್ ಹಾಕಿಕೊಂಡ ವಾಹನಗಳು ಪತ್ರಿಕೋದ್ಯಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಎಂದು ಪತ್ರಕರ್ತರು ತಿಳಿಸಿದರು.
Also read: ನಿಯಮ ಬಾಹಿರ ಹೋಂ-ಸ್ಟೇಗಳ ವಿರುದ್ದ ಕಾನೂನು ಕ್ರಮ: ಅನಿತಾ ಭಾಸ್ಕರ್ ಎಚ್ಚರಿಕೆ
ಈ ಪ್ರಕರಣಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾಶಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪತ್ರಕರ್ತರ ಹೆಸರಿನಲ್ಲಿ ಯಾರಾದರೂ ಹಣ ವಸೂಲಿ, ಬ್ಲಾಕ್ ಮೇಲ್ ಮಾಡುವುದು ಕಂಡುಬಂದಲ್ಲಿ ಬಾಧಿತ ಸರ್ಕಾರಿ ಅಧಿಕಾರಿಗಳು/ ರಾಜಕಾರಣಿಗಳು,/ಉದ್ದಿಮೆದಾರರು/ ಸಾರ್ವಜನಿಕ ಸೇವೆಯಲ್ಲಿರುವವರು ತಕ್ಷಣವೇ ಪೆÇಲೀಸ್ ಇಲಾಖೆಗೆ ದೂರು ನೀಡಬೇಕೆಂದು ಸಂಘವು ಮನವಿ ಮಾಡಿಕೊಳ್ಳುತ್ತದೆ.
ಪೊಲೀಸ್ ಇಲಾಖೆ ಕೂಡ ಇಂತಹ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ಜಿಲ್ಲೆಯಾದ್ಯಂತ ಪ್ರೆಸ್ (press) ಸ್ಟಿಕರ್ ಹಾಕಿಕೊಂಡ ಎಲ್ಲಾ ಬಗೆಯ ವಾಹನಗಳನ್ನು ತಪಾಸಣೆ ನಡೆಸಿ ಪತ್ರಕರ್ತರು ಎಂಬುದರ ಬಗ್ಗೆ ನೋಂದಾಯಿತ ದಾಖಲೆಗಳನ್ನು ಪರಿಶೀಲಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಕೆ.ವಿ ಶಿವಕುಮಾರ್, ಪ್ರಧಾನಕಾರ್ಯದರ್ಶಿ ಅರುಣ್ ವಿ.ಟಿ., ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್, ಪದಾಧಿಕಾರಿಗಳಾದ ವೈದ್ಯ, ಕೆ.ಆರ್. ಸೋಮನಾಥ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post