ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಕ್ಷಕರ ಸಮಸ್ಯೆಗಿಂತ ಶಿಕ್ಷಣದ ಸಮಸ್ಯೆ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತಿದ್ದ ಕೃ. ನರಹರಿಯವರು ಎಂದಿಗೂ ತಾಳ್ಮೆ ತಪ್ಪಿದವರಲ್ಲ. ಅವರಿಂದಾಗಿ ಇಂದು ಇಡೀ ಭಾರತದ ವಾತಾವರಣ ಬದಲಾಗಿದೆ ಎಂದು ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ #D H Shankaramurthy ಬಣ್ಣಿಸಿದರು.
ನಗರದ ಶುಭಮಂಗಳ ಸಮುದಾಯ ಭವನದ ಛಾಯಾದೇವಿ ಸಭಾಂಗಣದಲ್ಲಿ ಶ್ರೀಗಂಧ ಸಂಸ್ಥೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಆರ್‍ಎಸ್‍ಎಸ್ ಜ್ಯೇಷ್ಠ ಕಾರ್ಯಕರ್ತ ಕೃ. ನರಹರಿ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಗುಣಗಾನ ಮಾಡಿದರು.
ಭವ್ಯ ಭಾರತ ನಿರ್ಮಾಣದ ಕನಸು ಕಂಡಿದ್ದರು. ಅದನ್ನೆಲ್ಲಾ ಸಂಘದಿಂದ ಕಲಿತಿದ್ದರು. ಸದನದಲ್ಲಿ ತಾಳ್ಮೆ ತಪ್ಪಿದರೆ ಎಚ್ಚರಿಸುತ್ತಿದ್ದರು. ಕೆಂಪುಕೋಟೆ ಮೇಲೆ ನಿಂತು ಪ್ರಧಾನಿಯವರು ನರಹರಿಯವರನ್ನು ನೆನಪಿಸಿಕೊಳ್ಳುವಷ್ಟು ಅದ್ಭುತ ವ್ಯಕ್ತಿತ್ವ ಅವರದಾಗಿದೆ ಎಂದರು.
ಸದನದಲ್ಲಿ ವಿಷಯ ಮಂಡನೆ ಸರಿಯಾಗಿ ಮಾಡದಿದ್ದರೆ ಎಚ್ಚರಿಸುತ್ತಿದ್ದರು. ಸದನದಲ್ಲಿ ಜೋರಾಗಿ ಮಾತನಾಡಿದರೆ ತಾಳ್ಮೆಗೆಡದಂತೆ ಸೂಚನೆ ನೀಡುತ್ತಿದ್ದರು. ಸಮಾಜ ಬದಲಾವಣೆಯ ಬಗ್ಗೆಯೇ ಚಿಂತನೆ ನಡೆಸುತ್ತಿದ್ದರು. ಸಂಘ, ಸಮಾಜ ಬೇರೆಬೇರೆ ಎಂದು ಯೋಚಿಸಿದವರಲ್ಲ. ಅವರು ಕಂಡ ಕನಸು ನನಸು ಮಾಡಲು ಪ್ರಯತ್ನಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ಬರಪ್ಪ ಮಾತನಾಡಿ, ಯಾವುದೇ ಸಮಸ್ಯೆ ಇದ್ದರೂ ಮೊದಲು ಸಂಬಂಧಪಟ್ಟ ಅಧಿಕಾರಿಗಳ ಬಳಿ ಹೋಗುತ್ತಿದ್ದರು. ಅಲ್ಲಿಯೂ ಆಗದಿದ್ದರೆ ಸಚಿವರ ಬಳಿ ಹೋಗುತ್ತಿದ್ದರು. ಅಲ್ಲಿಯೂ ಆಗದಿದ್ದರೆ ಸಿಎಂ ಬಳಿ ಹೋಗಿ ಪರಿಹಾರ ಕಂಡುಕೊಳ್ಳುತ್ತಿದ್ದರು ಎಂದರು.
ನರಹರಿಯವರು ಮೂರು ಅವಧಿಯಲ್ಲಿ ವಿಧಾನ ಪರಿಷತ್‍ನಲ್ಲಿ ಉತ್ತಮವಾಗಿಯೇ ಕಾರ್ಯ ನಿರ್ವಹಿಸಿದ್ದರು. ಎಲ್ಲಾ ಸಮಸ್ಯೆಗಳಿಗೂ ತಾಳ್ಮೆಯಿಂದಲೇ ಉತ್ತರಕಂಡುಕೊಳ್ಳುತ್ತಿದ್ದರು. ನಾಲ್ಕನೇ ಬಾರಿಗೆ ಚುನಾವಣೆಗೆ ನಿಂತಾಗ ಅವರಿಗೆ ಸೋಲಾಗಿದೆ ಎಂಬುದನ್ನು ಕೇಳಿ ಬಹಳ ನೋವಾಯಿತು. ಎದುರು ಪಾರ್ಟಿಯ ಅಭ್ಯರ್ಥಿ ಒಂದು ವರ್ಷದಿಂದ ಜಾತಿ ಸಂಘಟನೆ ಮಾಡಿಕೊಂಡು ಪಾರ್ಟಿ ಮಾಡಿಸುತ್ತಾ, ಹಣ, ಉಡುಗೆರೆಗಳನ್ನು ಮತದಾರರಿಗೆ ನೀಡಿ ಗೆದ್ದರು ಎಂಬುದನ್ನು ಕೇಳಿ ಇನ್ನಷ್ಟು ಬೇಸರವಾಗಿತ್ತು ಎಂದರು.
ವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಜೆ. ರಾಮಚಂದ್ರ ಮಾತನಾಡಿ, ಸರಳ ವ್ಯಕ್ತಿತ್ವದ ನರಹರಿ ಅವರನ್ನು ಶಿಕ್ಷಕ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಆಯ್ಕೆಮಾಡಲಾಗಿತ್ತು. ಸಂಘಕ್ಕೆ ಸಮರ್ಪಿತವಾದ ಮನೆ ಅವರದಾಗಿತ್ತು. ಸಮಯ ಪಾಲನೆ, ಧ್ಯೇಯ ಸಮರ್ಪಿತವಾದ ಜೀವನ ಅವರದ್ದಾಗಿತ್ತು. ಪರಿಷತ್ತು ಸದಸ್ಯರಾಗಿದ್ದಾಗ ಅವರಿಗೆ ಬೆಂಗಳೂರಿನಲ್ಲಿ ನೀಡಲಾಗಿದ್ದ ಎರಡೂವರೆ ಕೋಟಿ ರೂ.ಮೌಲ್ಯದ ನಿವೇಶನವನ್ನು ಸಂಘಕ್ಕೆ ದಾನ ಮಾಡಿದ್ದರು. ಇಂತಹವರು ಮುಂದಿನ ಪೀಳಿಗೆಯಲ್ಲಿ ಸಿಕ್ಕುತ್ತಾರಾ ? ಎಂಬುದು ಪ್ರಶ್ನೆಯಾಗಿದೆ ಎಂದರು.
ಹತ್ತು ವರ್ಷದಿಂದಲೇ ಸಂಘಕ್ಕೆ ಸೇರಿ ಇಡೀ ಜೀವನ ಅದಕ್ಕಾಗಿಯೇ ಸಮರ್ಪಿಸಿದರು. ಜೀವನವನ್ನು ಹೇಗೆ ಚನ್ನಾಗಿ ಇಟ್ಟುಕೊಳ್ಳಬೇಕೆಂಬುದನ್ನು ಅವರ ಜೀವನದಿಂದ ಕಲಿಯಬೇಕಿದೆ. ಆಡಂಬರದ ಭಾಷಣವೂ ಇರಲಿಲ್ಲ. ಸರಳವಾದ ಜೀವನದ ಜೊತೆಗೆ ದೊಡ್ಡ ವಿಚಾರವನ್ನು ಇಟ್ಟುಕೊಂಡಿದ್ದರು. ವಿದ್ಯೆ, ಹುದ್ದೆ, ಒಳ್ಳೆಯ ಮನೆ ಇದ್ದರೂ ಗರ್ವ ಇಲ್ಲದೆ ಬದುಕಿದವರು. ಜಗಮಗಿಸದೆ ಪೂರ್ಣ ಜೀವನದಿಂದ ಬದುಕಿದವರು. ನಾನೇನಾದರೂ ದಾರಿ ತಪ್ಪುವ ಸಂದರ್ಭ ಬಂದರೆ ನರಹರಿಯನ್ನು ಸ್ಮರಿಸಿಕೊಳ್ಳೋಣ ಎಂದರು.
ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್ ಮಾತನಾಡಿ, ನರಹರಿ ಜೀವನ ಆದರ್ಶಯುತವಾಗಿತ್ತು. ಅವರ ಮನೆ ಆಶ್ರಮದಂತೆ ಇತ್ತು. ಕೊಡಗಿನಲ್ಲಿ ಪ್ರಚಾರಕರಾಗಿ ಸಂಘಟನೆ ಬಲಗೊಳಿಸಿದ್ದರು. ಮಕ್ಕಳಿಗೆ ಟ್ಯೂಷನ್ ಕೂಡ ಮಾಡುತ್ತಿದ್ದರು. ಎಲ್ಲದರಲ್ಲೂ ಅಚ್ವುಕಟ್ಟು ಅವರದ್ದಾಗಿತ್ತು ಎಂದು ಸ್ಮರಿಸಿದರು. ಡಿ.ಕೆ. ಪಾಂಡೆ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post