ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಡಿಯ ಪ್ರಪಂಚದಲ್ಲೇ ಅಪರೂಪದಲ್ಲಿ ಅಪರೂಪ ಎನ್ನುವಂತಹ ಸ್ವರ ಮಾಂತ್ರಿಕ, ನಿರ್ಜೀವ ಸಾಹಿತ್ಯಕ್ಕೆ ತಾವೇ ಜೀವವಾದ ಗಾಯನ ಪರ್ವತ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು, ನೈತಿಕವಾಗಿ ಅಗಲಿ ಸೆಪ್ಟಂಬರ್ ೨೫ಕ್ಕೆ ಒಂದು ವರ್ಷ ಕಳೆದಿದೆ.
ಒಂದು ವರ್ಷದ ಅವಧಿಯಲ್ಲಿ ಗಾಯನಪ್ರಿಯರಿಗೆ ಅವರು ನೆನಪಾಗದ ಕ್ಷಣಗಳೇ ಇಲ್ಲ. ಅದು ಅವರ ಸ್ವರಕ್ಕಿದ್ದ ಮಾಂತ್ರಿಕತೆ ಎಂದರೆ ಅತಿಶಯೋಕ್ತಿಯಲ್ಲ. ಎಸ್‌ಪಿಬಿ ಅವರ ಒಂದು ವರ್ಷದ ಸವಿನೆನಪಿಗಾಗಿ ಶಿವಮೊಗ್ಗದ ಕೆಲವು ಪ್ರತಿಭಾನ್ವಿತರು ಒಟ್ಟುಗೂಡಿ ಮಧುರವಾದ ಹಾಡೊಂದನ್ನು ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.
ವಿನಯ್ ಶಿವಮೊಗ್ಗ ರಚಿಸಿರುವ ಸಾಹಿತ್ಯದ ಈ ಸಾಲುಗಳಿಗೆ ಮಲೆನಾಡಿನ ಖ್ಯಾತ ಗಾಯಕಿ ಸುರೇಖಾ ಹೆಗಡೆ ಧ್ವನಿಯಾಗಿದ್ದು, ಇನ್ನೊಬ್ಬ ಪ್ರತಿಭಾನ್ವಿತ ಕಲಾವಿದ ವಿಠ್ಠಲ್ ರಂಗಧೋಳ ಸಂಗೀತದ ಮೆರಗು ನೀಡಿದ್ದಾರೆ.
ಈ ಬಗ್ಗೆ ಕಲ್ಪ ಮೀಡಿಯಾ ಹೌಸ್ ಜೊತೆ ಮಾತನಾಡಿದ ವಿನಯ್ ಶಿವಮೊಗ್ಗ, ಡಾ. ಎಸ್.ಪಿ.ಬಿ ಅವರು, ನಮ್ಮನ್ನು ಭೌತಿಕವಾಗಿ ಅಗಲಿದ್ದಾರೆ. ಅವರಿರದ ಒಂದು ವರ್ಷದಲ್ಲಿ ಎಷ್ಟು ಬಾರಿ ನೆನಪಾದರು ಎಂದು ನಮ್ಮನ್ನು ಕೇಳಿದರೆ, ಅವರು ನೆನಪಾಗಿಯೇ ಇಲ್ಲ ಎನ್ನಬೇಕಾಗುತ್ತದೆ. ಕಾರಣ ಅವರನ್ನು ಮರೆತಿದ್ದರೆ ಅಲ್ಲವೇ ನೆನಪಾಗುವುದು ಎಂದು ಭಾವುಕರಾದರು.
ಕೆಲವು ಪುಣ್ಯಜೀವಿಗಳು ಈ ಭೂಮಿ ಮೇಲೆ ಅವತರಿಸುವುದೇ ನಮಗೆ ಅಲೌಖಿಕ ಆನಂದದಿಂದ ಅನುಭವ ನೀಡಲು. ಈ ಗಂಧರ್ವ ಹಕ್ಕಿಯು ಇಲ್ಲಿಗೆ ಬಂದಿದ್ದು ಅಂತಹ ವರವಾಗಿಯೇ. ಪ್ರತಿ ಹಾಡುಗಾರರಿಗೂ, ಕಲಾವಿದರಿಗೂ, ಕಲಾರಸಿಕರಿಗೂ ಎಂದೆಂದೂ ಬತ್ತದ ಸ್ಫೂರ್ತಿಯ ಚಿಲುಮೆಯೇ ಎಸ್‌ಪಿಬಿ ಎಂದರು.
ಸುರೇಖಾ ಹೆಗಡೆ ಮಾತನಾಡಿ, ಪ್ರತಿ ಹಾಡಿನಲ್ಲೂ ಎಸ್‌ಪಿಬಿ ತಮ್ಮ ಮನಸ್ಸಿನ ತೊಟ್ಟಿಲಿನಲ್ಲಿ ಹುಟ್ಟುತ್ತಾರೆ. ಪ್ರತಿ ಗಾಯನದಲ್ಲೂ ತಮ್ಮ ಹೃದಯಗಳಲ್ಲಿ ಬೆಳೆಯುತ್ತಾರೆ. ಇಂತಹ ಗಂಧರ್ವರಿಗೆ ಎಲ್ಲಿಯ ಸಾವು? ಶರೀರವಿಲ್ಲದಿರಬಹುದು, ಶಾರೀರಕ್ಕೆ ಕೊನೆ ಎಲ್ಲಿ? ಎಸ್‌ಪಿಬಿ ಅವರು, ಸಂಗೀತವೆಂಬ ಗಂಧರ್ವ ವಿದ್ಯೆಯ ಆತ್ಮ. ಅವರಿಗೆ ಸಾವು ಎನ್ನುವುದೇ ಇಲ್ಲ. ನಮ್ಮ ಮನಗಳಲ್ಲಿ ಸದಾ ರಾರಾಜಿಸುವ ಚಿರಂಜೀವಿ ಅವರು ಎಂದು ಮನದಾಳದ ಭಾವನೆಯನ್ನು ಹಂಚಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post