ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಮಾನಸಿಕ ಆರೋಗ್ಯದ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಈ ಕುರಿತು ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್. ಯೋಗೀಶ್ ಅಭಿಪ್ರಾಯಪಟ್ಟರು.
ಮಾನಸ ಟ್ರಸ್ಟ್’ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಅನ್ವೇಷಣಾ ಎಂಬ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದೊಂದು ಅಪರೂಪದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವಾಗಿದೆ. ವಿವಿಧ ಸ್ಪರ್ಧೆಗಳಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿರುತ್ತೀರಿ. ಆದರೆ ಅನ್ವೇಷಣಾ ಎಂಬ ಈ ಹೆಸರು ನೀವು ನಿಮ್ಮನ್ನು ಈ ಮೂಲಕ ಅನ್ವೇಷಣೆ ಮಾಡಿಕೊಳ್ಳುತ್ತೀರಿ ಎಂದು ಸೂಚಿಸುತ್ತಿದೆ ಎಂದರು.ಶಿಕ್ಷಣದಲ್ಲಿ ಅನ್ವೇಷಣೆ ಎಂಬುದು ಅತಿ ಮುಖ್ಯ. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಮಾನಸಿಕ ಆರೋಗ್ಯದ ಪಾತ್ರ ಅತ್ಯಂತ ಮಹತ್ವದ್ದು. ಅಂತಹ ಮಹತ್ಕಾರ್ಯವನ್ನು ಮಾಡುತ್ತಿರುವ ಮಾನಸ ಸಂಸ್ಥೆ ನಡೆಸುತ್ತಿರುವ ಈ ಕಾಲೇಜಿನಲ್ಲಿ ಒಂದು ಆಪ್ತವಾದ ವಾತಾವರಣವಿದೆ ಎಂದು ಪ್ರಶಂಸಿಸಿದರು.
ಸಹಚೇತನ ನಾಟ್ಯಾಲಯದ ನೃತ್ಯ ಗುರುಗಳಾದ ಸಹನಾ ಚೇತನ್ ಮಾತನಾಡಿ, ಸಾಂಸ್ಕೃತಿಕ ಸ್ಪರ್ಧೆಗಳು ಸಂಘಟನಾತ್ಮಕ ಶಕ್ತಿಯನ್ನು, ಸಹ ಬಾಳ್ವೆಯ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳು ಮುಂದಿನ ಜೀವನಕ್ಕೆ ಸಾಮಾಜಿಕ ಸಂಘಟನೆ ಹಾಗೂ ಸಹಬಾಳ್ವೆಯೇ ಮುಖ್ಯವಾದ ಮೌಲ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಅನ್ವೇಷಣಾ ಸಂಯೋಜಕರಾದ ಉಪನ್ಯಾಸಕ ಮಂಜುನಾಥ ಸ್ವಾಮಿ ಅವರು, ಅನ್ವೇಷಣಾ ಎಂಬುದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಪ್ರತಿವರ್ಷ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಗೂ ಸ್ಪರ್ಧೆಗಳ ಹಬ್ಬ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವುದರೊಂದಿಗೆ ವಿವಿಧ ಶೈಕ್ಷಣಿಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಇದೇ ಸಂದರ್ಭದಲ್ಲಿ ನಡೆಸುವ ಶೈಕ್ಷಣಿಕ ವಸ್ತು ಪ್ರದರ್ಶನ ಸಹಾಯ ಮಾಡುತ್ತದೆ ಎಂದವರು ತಿಳಿಸಿದರು.
ಎರಡು ದಿನಗಳ ಕಾಲ ನಡೆದ ಶೈಕ್ಷಣಿಕ ವಸ್ತು ಪ್ರದರ್ಶನದಲ್ಲಿ ಸುಮಾರು 2000 ವಿದ್ಯಾರ್ಥಿಗಳು ಹಲವಾರು ಮಾದರಿಗಳನ್ನು ವೀಕ್ಷಿಸಿ ವಿಚಾರಗಳನ್ನು ತಿಳಿದುಕೊಂಡಿರುತ್ತಾರೆ. ಅದೇ ರೀತಿ ಅನ್ವೇಷಣಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಪದವಿ ಪೂರ್ವ ಕಾಲೇಜುಗಳ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ ಎಂದು ತಿಳಿಸಿದರು.
ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ಸಮಗ್ರ ಪ್ರಶಸ್ತಿಯನ್ನು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ತನ್ನ ಮುಡಿಗೇರಿಸಿಕೊಂಡಿತು.
ಈ ಅನ್ವೇಷಣಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಒಟ್ಟು ಆರು ರೀತಿಯ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಶ್ರೀ ಆದಿಚುಂಚನಗಿರಿ ಪದವಿ ಪೂರ್ವಕಾಲೇಜಿನ ಆರ್ಯನ್ ಮತ್ತು ತಂಡ, ದ್ವಿತೀಯ ಬಹುಮಾನವನ್ನು ಸರ್.ಎಂವಿ ಪದವಿ ಪೂರ್ವ ಕಾಲೇಜಿನ ಪ್ರಾರ್ಥನ ಮತ್ತು ತಂಡ ಪಡೆಯಿತು. ತೃತೀಯ ಸ್ಥಾನವನ್ನು ಸರ್ವೋದಯ ಪದವಿಪೂರ್ವ ಕಾಲೇಜಿನ ಪ್ರಗತಿ ಮತ್ತು ತಂಡ ಪಡೆದುಕೊಂಡಿತು.
ಸಮೂಹ ನೃತ್ಯ ಸ್ಪರ್ಧೆಯಲ್ಲಿ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ತೇಜಶ್ರೀ ಮತ್ತು ತಂಡ ಪ್ರಥಮ ಬಹುಮಾನವನ್ನು, ಸರ್ವೋದಯ ಪದವಿ ಪೂರ್ವ ಕಾಲೇಜಿನ ರಂಜಿತಾ ಮತ್ತು ತಂಡ ದ್ವಿತೀಯ ಬಹುಮಾನ ಹಾಗೂ ಸರ್’ಎಂವಿ ಪದವಿಪೂರ್ವ ಕಾಲೇಜಿನ ರೋಹಿಣಿ ಮತ್ತು ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಭಿತ್ತಿಚಿತ್ರ ತಯಾರಿ ಸ್ಪರ್ಧೆಯಲ್ಲಿ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜು ಶಿವಮೊಗ್ಗದ ಮನೋಜ್ ಕೆ ಹಾಗೂ ಭೂಮಿಕಾ ಏಡಿ ಪ್ರಥಮ ಬಹುಮಾನವನ್ನು, ಸೈಂಟ್ ಜೋಸೆಫ್ ಅಕ್ಷರ ಧಾಮ ಪದವಿಪೂರ್ವ ಕಾಲೇಜಿನ ಸ್ನೇಹ ಹಾಗೂ ಮಂದಾರ ದ್ವಿತೀಯ ಬಹುಮಾನವನ್ನು, ಸರಕಾರಿ ವಿದ್ಯಾರ್ಥಿನಿಯರ ಪದವಿ ಪೂರ್ವಕಾಲೇಜಿನ ಶಿವಾನಿ ಹಾಗೂ ಸಾನಿಕ ತೃತೀಯ ಬಹುಮಾನ ಪಡೆದರು.
ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ ಸರ್.ಎಂ.ವಿ. ಪದವಿ ಪೂರ್ವ ಕಾಲೇಜಿನ ರಜತ್’ಕೃಷ್ಣ ಹಾಗೂ ಲಯನ ಆರ್. ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡರೆ, ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಜಿಯಾ ಎಸ್. ಶೇಟ್ ಹಾಗೂ ನಿಶಾಂತ್ ದ್ವಿತೀಯ ಬಹುಮಾನ ಪಡೆದುಕೊಂಡರು.
ಪ್ರಬಂಧ ಸ್ಪರ್ಧೆಯಲ್ಲಿ ನ್ಯಾಮತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಚಂದ್ರಕಲಾ ಎಸ್ ಪ್ರಥಮ ಬಹುಮಾನವನ್ನು ಪಡೆದರೆ, ಸಾಗರದ ವಿದ್ಯಾರ್ಥಿನಿಯರ ಪದವಿಪೂರ್ವ ಕಾಲೇಜಿನ ಗುಲ್ಶನ್ ದ್ವಿತೀಯ ಬಹುಮಾನ ಪಡೆದುಕೊಂಡರು.
ಮಂಡಲ ರಂಗೋಲಿ ಸ್ಪರ್ಧೆಯಲ್ಲಿ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಐಶ್ವರ್ಯ ಹಾಗೂ ಜ್ಯೋತಿ ಪ್ರಥಮ ಬಹುಮಾನ, ಸರ್ವೋದಯ ಪದವಿಪೂರ್ವ ಕಾಲೇಜಿನ ಸಿಂಚನಾ ಹಾಗೂ ಹೇಮಾವತಿ ದ್ವಿತೀಯ ಬಹುಮಾನ, ಇಂಪೀರಿಯಲ್ ಪದವಿಪೂರ್ವ ಕಾಲೇಜಿನ ಮುಸ್ಕಾನ್ ಹಾಗೂ ಸರ್ವರಿ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಈ ಎಲ್ಲ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿರುವುದು ಕಂಡುಬಂದಿತು. ಪಾಠ ಹಾಗೂ ಪರೀಕ್ಷೆಗಳ ಏಕತಾನತೆಯಿಂದ ಹೊರಬಂದು ಒತ್ತಡವನ್ನು ನಿವಾರಿಸಿಕೊಳ್ಳಲು ಈ ಕಾರ್ಯಕ್ರಮ ತಮಗೆ ಅನುಕೂಲ ಮಾಡಿಕೊಟ್ಟಿದೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶೈಕ್ಷಣಿಕ ಸಲಹೆಗಾರರಾದ ಡಾ.ರಾಜೇಂದ್ರ ಚೆನ್ನಿ, ಆಡಳಿತ ಅಧಿಕಾರಿಗಳಾದ ಪ್ರೊಫೆಸರ್‌ರಾಮಚಂದ್ರ ಬಾಳಿಗ ಹಾಗೂ ಅನ್ವೇಷಣಾ ಸಂಯೋಜಕರಾದ ಉಪನ್ಯಾಸಕ ಮಂಜುನಾಥಸ್ವಾಮಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಂಗೀತ ನಿರೂಪಿಸಿ, ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಾಜಕಾರ್ಯ ವಿಭಾಗದ ನ್ಯಾನ್ಸಿ ಪಿಂಟೊ ಬಹುಮಾನಿತರ ಹೆಸರುಗಳನ್ನು ಪ್ರಕಟಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಮೋಹನ್ ಕುಮಾರ್ ಅವರು ವಂದನಾರ್ಪಣೆಯನ್ನು ನೆರವೇರಿಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post