ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ತಂತ್ರಜ್ಞಾನ ಯುಗವಾಗದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದ್ದು, ಅವರ ಮೇಲೆ ಹೆಚ್ಚಿನ ಗಮನ ಇಡಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸಲಹೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಹಾಗೂ ಕಂಫ್ಯೂಟರ್ ಬಳಕೆಯಿಂದ ಇಂದು ಯುವಕರ ಕಣ್ಣು, ಕಿವಿ ಬೇಗ ಹಾಳಾಗುತ್ತಿವೆ ಎಂಬುದು ಆತಂಕದ ಸಂಗತಿ. ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಡಿಪೋ ಬರುವ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಉದ್ಘಾಟನೆಯಾಗಲಿದೆ. ಅದು ಆದರೆ ಇನ್ನಷ್ಟು ಅಭಿವೃದ್ಧಿಗೆ ಸಹಾಯವಾಗಲಿದೆ ಎಂದ ಅವರು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿಯವರು ದೇಶದಲ್ಲಿಯೇ ನೌಕರರ ಸಂಘದ ಸಂಘದ ಅತ್ಯುತ್ತಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪ ನವರು ಸಿಎಂ ಆಗಿದ್ದಾಗಲೂ ಸರ್ಕಾರಿ ನೌಕರರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ ಎಂದರು.
ಹಿರಿಯ ಪತ್ರಕರ್ತ ರಂಗನಾಥ ಭಾರದ್ವಾಜ್ ಪ್ರೇರಣಾದಾಯಕ ಮಾತುಗಳನ್ನಾಗಿ, ಇಂದು ಯಾವುದೂ ಕೂಡ ಸುಮ್ಮನೆ ಸಿಕ್ಕುವುದಿಲ್ಲ. ಅದಕ್ಕಾಗಿ ಹೋರಾಟ ಮಾಡಲೇಬೇಕು. ಸ್ಪರ್ಧೆ ಇದ್ದೇ ಇದೆ. ಅದಕ್ಕೆ ಮಕ್ಕಳು ತಯಾರಾಗಬೇಕು. ಸ್ಪರ್ಧೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉತ್ತೀರ್ಣ ಅಂಕಗಳನ್ನು ಕಡಿಮೆ ಮಾಡಬಾರದೆಂದು ಹೇಳಿದರು.
ಈಗ ಸರ್ಕಾರ ಮಕ್ಕಳ ತೇರ್ಗಡೆಗೆ ಬೇಕಾಗಿರುವ ಅಂಕಗಳನ್ನು 30 ಕ್ಕೆ ಇಳಿಸುತ್ತಿರುವುದಕ್ಕೆ ಆಕ್ಷೇಪವಿದೆ. ಮಕ್ಕಳ ಭವಿಷ್ಯ ಹಾಳು ಮಾಡುವ ಇಂತಹ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು. ಪಾಸ್ ಅಂಕಗಳನ್ನು ಇಳಿಸುವುದರಿಂದ ಮುಂದಿನ ದಿನಗಳಲ್ಲಿ ಸ್ಪರ್ಧೆಯೇ ಇರುವುದಿಲ್ಲ. ಇದು ಹೀಗೆ ಮುಂದುವರಿದರೆ ಪರೀಕ್ಷೆಯೇ ಬೇಡ ಮುಂದೆ ಹೋಗಿ ಎನ್ನುವ ಸ್ಥತಿ ಬಂದರೂ ಅಚ್ಚರಿಪಡಬೇಕಿಲ್ಲ ಎಂಬ ತೀವೃ ಅಸಮಾಧಾನ ವ್ಯಕ್ತಪಡಿಸಿದರು.
ಮೊಬೈಲ್ ನೋಡಲು ಕೊಟ್ಟಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ತಪ್ಪು ಯಾರದು ಎಂದು ಯೋಚಿಸಬೇಕು. ನೂರರಲ್ಲಿ ಒಂದನೆಯವರಾಗಲು ಯತ್ನಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಮಕ್ಕಳು ಒತ್ತಡ, ವ್ಯಾಮೋಹಗಳಿಗೆ ಒಳಗಾಗದೆ ಓದಿನಕಡೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಓದುವ ಸಮಯದಲ್ಲಿ ಸರಿಯಾಗಿ ಓದದಿದ್ದರೆ ಬದುಕು ಟಿಶ್ಯೂ ಪೇಪರ್‌ನಂತಾಗುತ್ತದೆ ಎಂದ ಅವರು ನೌಕರರ ಮೇಲೆ ಒತ್ತಡ ಇದ್ದರೂ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಶೇ.40 ರಷ್ಟು ಹುದ್ದೆಗಳು ಖಾಲಿ ಇದ್ದರೂ ಕೂಡ ಟ್ಯಾಕ್ಸ್ ಸಂಗ್ರಹದಲ್ಲಿ ರಾಜ್ಯ ದೇಶದಲ್ಲೇ 2 ನೇ ಸ್ಥಾನದಲ್ಲಿದೆ ಎಂದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ರಾಜ್ಯ ಸಂಘದ ಗಿರಿಗೌಡ, ಬಸವರಾಜ್ ಮೊದಲಾದವರು ಇದ್ದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪುರಸ್ಕರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post