ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ಯಾರಂಟಿಗಳಲ್ಲೇ ಮುಳುಗಿರುವ ರಾಜ್ಯ ಸರ್ಕಾರ ರೈತರನ್ನು ಮರೆತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ KSEshwarappa ಹೇಳಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜನಪರವಾಗಿ ಇಲ್ಲ. ಆಂತರೀಕ ಮತ್ತು ಬಹಿರಂಗ ಬಡಿದಾಟದಲ್ಲಿ ಮುಳುಗಿದೆ. ಅವರ ಐದು ಗ್ಯಾರಂಟಿಗಳಲ್ಲಿ ಒಂದಾದರೂ ಜನರಿಗೆ ಸಮಾಧಾನ ತಂದಿಲ್ಲ. ಹಣ ಕೊಟ್ಟರೂ ವಿದ್ಯುತ್ ಸಿಗುತ್ತಿಲ್ಲ. ಉಚಿತ ಬಸ್ ಯೋಜನೆಯಿಂದಾಗಿ ಖಾಸಗಿ ಬಸ್ ಮತ್ತು ಆಟೋ ರಿಕ್ಷಾ ಮತ್ತಿತರ ವಾಹನಗಳ ಮಾಲೀಕರು ಪರದಾಡುವಂತಾಗಿದೆ. ನಿರುದ್ಯೋಗಿ ಪದವೀಧರರಿಗೆ ಇನ್ನೂ ಗ್ಯಾರಂಟಿ ಲಭ್ಯವಾಗಿಲ್ಲ. ಉಚಿತ ಅಕ್ಕಿ ಯೋಜನೆಯಲ್ಲೂ ಖಚಿತತೆ ಇಲ್ಲ ಎಂದರು.
ರಾಜ್ಯ ಸರ್ಕಾರದ ವಿರುದ್ಧ ನಾಳೆ ಪ್ರತಿಭಟನೆ
ರೈತವಿರೋಧ ರಾಜ್ಯಸರ್ಕಾರದ ವಿರುದ್ಧ ಜಿಲ್ಲಾ ಕೇಂದ್ರದಲ್ಲಿ ಬೆಳಿಗೆ 10-30ಕ್ಕೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.ಈ ಪ್ರತಿಭಟನೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು, ಮುಖಂಡರು ಭಾಗವಹಿಸಲಿದ್ದಾರೆ. ಸೆ.17 ಪ್ರಧಾನಿ ಮೋದಿಯವರ ಜನ್ಮದಿನ ಇದರ ಅಂಗವಾಗಿ ಸೆ.17ರಿಂದ ಅ.2ರವರೆಗೆ ಬಿಜೆಪಿ ಸೇವಾ ಪಾಕ್ಷಿಕ ಆಚರಣೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ರಕ್ತದಾನ ಶಿಬಿರ, ಆಯುಷ್ಮಾನ್ ಕಾರ್ಡ್ ವಿತರಣೆ, ದೀನದಯಾಳ್ ಜನ್ಮ ದಿನಾಚರಣೆ, ಎಲ್ಲಾ ಶಕ್ತಿ ಮಹಾಶಕ್ತಿ ಕೇಂದ್ರಗಳಿಗೆ ಭೇಟಿ, ಅ.2ರಂದು ಗಾಂಧಿ ಜಯಂತಿಯ ದಿನದಂದು ಸಮಾರೋಪ ಸಮಾರಂಭ, ಸ್ವಚ್ಛತಾ ಆಂದೋಲನದ ಮೂಲಕ ನಡೆಯಲಿದೆ.
ಟಿ.ಡಿ. ಮೇಘರಾಜ್, ಬಿಜೆಪಿ ಜಿಲ್ಲಾಧ್ಯಕ್ಷ
Also read: ಸಮಸಮಾಜ ನಿರ್ಮಾಣ ಯುವಕರ ಗುರಿಯಾಗಲಿ: ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯ
ರಾಜ್ಯದ ರೈತರು ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದಾರೆ. ಅಧಿಕಾರದಲ್ಲಿರುವ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ. ಬರಗಾಲ ಘೋಷಣೆ ಮಾಡಲು ಯೋಚಿಸುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರೈತರ ಆತ್ಮಹತ್ಯೆ ಪ್ರಕರಣಗಳೆಷ್ಟು, ಬೆಳೆ ಪರಿಹಾರಕ್ಕಾಗಿ ಏನು ಮಾಡಿದ್ದಾರೆ ಎಂಬಿತ್ಯಾದಿ ರೈತರ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ಈ ಮೈತ್ರಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್ ಪಡೆಯುವುದಿಲ್ಲ. ಈ ಮೈತ್ರಿಕೂಟದಿಂದ ಕಾಂಗ್ರೆಸ್ ನಾಯಕರಿಗೆ ಹೊಟ್ಟೆನೋವು ಶುರುವಾಗಿದೆ. ಬಿಜೆಪಿ ಕೋಮುವಾದಿ ಪಕ್ಷ ಎಂದು ಟೀಕಿಸುತ್ತಿದ್ದಾರೆ. ಬಿಜೆಪಿ ಯಾವತ್ತೂ ಕೋಮುವಾದಿ ಅಲ್ಲ. ಕಾಂಗ್ರೆಸ್ಸೇತರ ಸರ್ಕಾರ ರಾಜ್ಯದಲ್ಲಿ ಬಂದಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಆಗ ಇದೇ ಸಿದ್ದರಾಮಯ್ಯನವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದು, ಗೂಟದ ಕಾರನ್ನು ನೀಡಿದ್ದು ಬಿಜೆಪಿಯೇ. ಅದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಹಂಗಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ.ಮೇಘರಾಜ್, ಜಗದೀಶ್, ಶಿವರಾಜ್, ಸಾಲೇಕೊಪ್ಪ ರಾಮಚಂದ್ರ, ವಿನ್ಸೆಂಟ್, ಕಾಚಿನಕಟ್ಟೆ ಸತ್ಯನಾರಾಯಣ, ಜ್ಞಾನೇಶ್ವರ್, ಕೆ.ವಿ. ಅಣ್ಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post