ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಡತನದಲ್ಲಿದ್ದರೂ ಇಡಿಯ ವಿಶ್ವವೇ ತಿರುಗಿ ನೋಡುವಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಸಿ. ರಾಯ್ ಅವರ ಆದರ್ಶಗಳು ಇಂದಿನ ಯುವ ವೈದ್ಯರು ಮೈಗೂಡಿಸಿಕೊಳ್ಳಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ Subbaiah Medical College ಡೀನ್ ಎಂ.ಎಸ್. ಕೃಷ್ಣಪ್ರಸಾದ್ ಕರೆ ನೀಡಿದರು.
ತಡಿಕೆಲ ಸುಬ್ಬಯ್ಯ ಟ್ರಸ್ಟ್ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಏಂಜಲ್ಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿ.ಸಿ. ರಾಯ್ ಅವರ ಜನ್ಮ ದಿನ ಮತ್ತು ಪುಣ್ಯಸ್ಮರಣೆ ದಿನವನ್ನೇ ರಾಷ್ಟ್ರೀಯ ವೈದ್ಯಕೀಯ ದಿನ ಎಂದು ಘೋಷಿಸಿರುವುದು ವಿಶೇಷವಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಬಿ.ಸಿ. ರಾಯ್ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಅಪಾರವಾಗಿದೆ. ಬಡತನದಲ್ಲಿ ಹುಟ್ಟಿ ಬೆಳೆದ ಬಿ.ಸಿ. ರಾಯ್ ಅವರು ಅವೆಲ್ಲವನ್ನೂ ಮೆಟ್ಟಿನಿಂತು ಸಾಧನೆ ಮಾಡಿ, ಸಮಾಜ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದರು.
ವೈದ್ಯಕೀಯ ರಂಗಕ್ಕೆ ಅಮೋಘ ಕೊಡುಗೆ ನೀಡಿದ ಅವರು, ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ 1961ರಲ್ಲಿ ಭಾರತರತ್ನ ಪ್ರಶಸ್ತಿಯನ್ನು ಪಡೆದುಕೊಂಡರು. ರಾಷ್ಟ್ರೀಯ ವೈದ್ಯರ ದಿನದಂದು, ವೈದ್ಯರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಲ್ಲದೇ ನಮ್ಮ ಜೀವನಕ್ಕೆ ವೈದ್ಯರು ನೀಡಿದ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಲಾಗುತ್ತದೆ.ಈ ವಿಶೇಷ ದಿನವನ್ನು ಜನರ ಸೇವೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಿಸಲಾಗುತ್ತದೆ ಎಂದರು.
ಮ್ಯಾಕ್ಸ್ ಆಸ್ಪತ್ರೆಯ ಸೂಪರ್’ಇಂಟೆಂಡೆಂಟ್ ಡಾ. ನಾರಾಯಣ ಪಂಜಿ ಮಾತನಾಡಿ, ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಜನರ ಜೀವಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇವರುಗಳಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ವೈದ್ಯರ ದಿನ ಆಚರಣೆ ಅಂಗವಾಗಿ ತಡಿಕೆಲ ಸುಬ್ಬಯ್ಯ ಟ್ರಸ್ಟ್ ಅಡಿಯಲ್ಲಿರುವ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ಏಂಜಲ್ಸ್ ಆಸ್ಪತ್ರೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಮುಖವಾಗಿ ನಮ್ಮೆಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಸ್ವತಃ ರಕ್ತದಾನ ಮಾಡುವ ಮೂಲಕ ವೈದ್ಯರ ದಿನ ಆಚರಣೆ ಮಾಡುವ ಮೂಲಕ ಬಿ.ಸಿ. ರಾಯ್ ಹಾಗೂ ಇಡಿಯ ವೈದ್ಯ ಸಮೂಹಕ್ಕೆ ಗೌರವ ಸಲ್ಲಿಸುತ್ತಿದ್ದೇವೆ ಎಂದರು.
ವೈದ್ಯರ ದಿನ ಆಚರಣೆ ಹಿನ್ನೆಲೆಯಲ್ಲಿ ಮ್ಯಾಕ್ಸ್ ಆಸ್ಪತ್ರೆ ಮುಖ್ಯಸ್ಥ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಸೇರಿ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗಳು ರಕ್ತದಾನ ಮಾಡಿ ಮಾದರಿಯಾದರು.
ಕಾರ್ಯಕ್ರಮದಲ್ಲಿ ತಡಿಕೆಲ ಸುಬ್ಬಯ್ಯ ಟ್ರಸ್ಟ್ ಛೇರ್‍ಮನ್ ಟಿ. ಸುಬ್ಬರಾಮಯ್ಯ, ಡಾ.ಲತಾ ನಾಗೇಂದ್ರ, ಡಾ.ವಿನಯ ಶ್ರೀನಿವಾಸ್, ಸ್ತ್ರೀರೋಗ ಹಾಗೂ ಪ್ರಸೂತಿ ಹಿರಿಯ ತಜ್ಞರಾದ ಡಾ.ಗೀತಾ ರವಿ ಮತ್ತು ಮ್ಯಾಕ್ಸ್, ಏಂಜಲ್ಸ್ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post