ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾದಕ ವಸ್ತುಗಳು ಸುಲಭವಾಗಿ ಮತ್ತು ಹತ್ತಿರದಲ್ಲೇ ಸಿಗುತ್ತಿರುವುದೇ ವ್ಯಸನಕ್ಕೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ವಿಷಾದ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ಷಣಾ ಇಲಾಖೆ ಹಾಗೂ ಹಲವು ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಾದಕ ವ್ಯಸನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದರಿಂದ ದೂರ ಇರಬೇಕು ಎಂದು ಹೇಳುತ್ತೇವೆಯೋ ಅವುಗಳೇ ಹತ್ತಿರದಲ್ಲಿ ಸಿಗುತ್ತಿರುವುದು ವಿಪರ್ಯಾಸ ಎಂದರು.
ದಿನಸಿ ಅಂಗಡಿಗಳಿಗಿಂತ ಮುಂಚಿತವಾಗಿಯೇ ಬಾಗಿಲು ತೆರೆಯುತ್ತವೆ ಮಾದಕ ವಸ್ತು ಸಿಗುವ ಅಂಗಡಿಗಳು. ಮಹಾತ್ಮ ಗಾಂಧೀಜಿಯವರು ಯಾವುದನ್ನು ಬೇಡ ಎಂದರೋ ಅದನ್ನೇ ಸರ್ಕಾರ ವಿಶೇಷ ಮಳಿಗೆಗಳ ಮೂಲಕ ಮಾರಾಟ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ಮನೆಯಲ್ಲಿರುವ ಸದಸ್ಯರನ್ನು ಮಾದಕವಸ್ತುಗಳಿಂದ ದೂರವಿರಿಸಿ ಇದೇ ಶ್ರೀಗಳ ಸಂದೇಶವಾಗಿತ್ತು. ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಗೆ ಬರುವುದೇ ಮಾನವನ ಗುಣ, ಒಮ್ಮೆ ನೀವು ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಿಕೊಳ್ಳಿ, ನಿಮ್ಮ ಇಚ್ಚಾ ಶಕ್ತಿಗೆ ಅನುಗುಣವಾಗಿ ಹಾಗೂ ಮನಸ್ಸಿನ ಗುರಿಗೆ ತಕ್ಕಂತೆ ಸ್ನೇಹ ಬೆಳೆಸಿ, ಸಿನಿಮಾ ನಟ, ನಟಿಯರ ಪಾತ್ರಗಳನ್ನು ಅನುಕರಣೆ ಮಾಡದೇ ನಿಮ್ಮದೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಿ.
-ನೆರೆದಿದ್ದ ವಿದ್ಯಾರ್ಥಿಗಳಿಗೆ ತಹಶೀಲ್ದಾರ್ ಗಿರೀಶ್ ಕಿವಿಮಾತು.
ಶಾಲಾ ಕಾಲೇಜುಗಳ, ಮಂದಿರಗಳ ಸುತ್ತ ಮುತ್ತ 100 ಅಡಿ ಅಂತರದಲ್ಲಿ ಮಾದಕ ವಸ್ತುಗಳು ಸಿಗುವ ಅಂಗಡಿಗಳು ಇರುವಂತಿಲ್ಲ ಎಂಬ ನಿಯಮವಿದೆ. ಇದು ತಮಾಷೆಯ ವಿಷಯವೆನಿಸಿದರು ಸತ್ಯವಾಗಿದೆ. ಆದರೆ ಮಾದಕ ವಸ್ತುಗಳನ್ನು ಇಷ್ಟಪಡುವ ವ್ಯಕ್ತಿ 100 ಅಡಿ ಅಷ್ಟೇ ಅಲ್ಲ ಕಿಲೋಮೀಟರ್‌ಗಟ್ಟಲೆ ಹೋಗಬಲ್ಲ. ಆದ್ದರಿಂದ ಮಾದಕ ವಸ್ತುಗಳೇ ಸಿಗದಂತಾಗಬೇಕು, ಆಗ ಮಾತ್ರ ಇಂತಹ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ನಮ್ಮ ಯೋಚನಾ ಶಕ್ತಿ ಬದಲಾಗಬೇಕು. ನಮಗೆ ಹಾಗೂ ನಮ್ಮ ಆರೋಗ್ಯಕ್ಕೆ ಯಾವುದು ಕೆಡುಕನ್ನು ಉಂಟು ಮಾಡುತ್ತದೋ ಅದನ್ನು ಕಾಲಿನಿಂದ ಒದೆಯುವಂತಾಗಬೇಕು. ಮಾದಕ ವಸ್ತುಗಳಿಂದ ದೂರವಿರಬೇಕೆಂಬ ದೃಢ ಮನೋ ನಿರ್ಧಾರವನ್ನು ಹೊಂದಬೇಕು. ಅಂತಹ ಗಟ್ಟಿತನವನ್ನು ಪ್ರದರ್ಶಿಸಿದರೆ ಮಾತ್ರ ಸಾಮಾಜಿಕ ಹಾಗೂ ವ್ಯಯಕ್ತಿಕ ಬದುಕು ಗಟ್ಟಿಯಾಗುತ್ತದೆ ಎಂದು ಹೇಳಿದರು.
Also read: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ | 35ಕ್ಕೂ ಅಧಿಕ ಜನರು ಕಣ್ಮರೆ
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಮಾತನಾಡಿ, ಮಹಾಂತ ಶಿವಯೋಗಿಗಳು ಆಗಸ್ಟ್ 1ರಂದು ಜನಿಸಿದ ದಿನದಂದು ಮಾದಕ ವ್ಯಸನ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಆ ಮಹನೀಯರು ಪ್ರಾತಕಾಲ ಸ್ಮರಣೀಯರು. ಅವರು ತಮ್ಮ ಜೋಳಿಗೆಯ ಮೂಲಕ ಪ್ರತಿ ಮನೆ ಮನೆ, ಗಲ್ಲಿ ಗಲ್ಲಿ ಓಣಿಗಳನ್ನು ತಿರುಗಿ ಅವರುಗಳಲ್ಲಿದ್ದ ಮಾದಕ ವಸ್ತುಗಳನ್ನು ಜೋಳಿಗೆಗೆ ಹಾಕಿಸಿಕೊಂಡು ಜನರನ್ನು ಮಾದಕ ವಸ್ತುಗಳಿಂದ ಮುಕ್ತರನ್ನಾಗಿ ಮಾಡಿದವರು ಎಂದು ಹೇಳಿದರು.
ಜನ ಸಾಮಾನ್ಯರು ಇವುಗಳಿಂದ ದೂರವಿರಬೇಕು. ಯಾವುದೂ ನಮ್ಮ ಆರೋಗ್ಯಕ್ಕೆ ಮಾರಕವೊ ಅದನ್ನು ಸೇವಿಸಬಾರದು ಎಂಬ ಮನಸ್ಸನ್ನು ಹೊಂದಬೇಕು. ಆಗ ಮಾತ್ರ ಇಂತಹ ಆಚರಣೆಗೆ ಅರ್ಥ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಾರುತಿ, ಡಿಡಿಪಿಐ ಪರಮೇಶ್ವರ್, ಡಾ. ಪ್ರಮೋದ್, ಡಾ|| ಕಿರಣ್, ಉಮೇಶ್ ವಾರ್ತಾ ಇಲಾಖೆಯ ಭಾಗ್ಯ, ಸತೀಶ್ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post