ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಅಭಿಪ್ರಾಯವನ್ನು ಕೂಡ ಪಕ್ಷ ಗಮನಿಸುತ್ತಿದ್ದು, ಈ ಬಗ್ಗೆ ವರಿಷ್ಠರಿಗೆ ವರದಿ ಸಲ್ಲಿಸಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಯನೂರು ಮಂಜುನಾಥ್ ಅವರ ಹೇಳಿಕೆ ಮತ್ತು ಅಭಿಪ್ರಾಯಗಳನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಸ್ಪಷ್ಟವಾದ ವರದಿ ಕಳಿಸಿದ್ದೇವೆ. ಶಿಸ್ತು ಕ್ರಮದ ಬಗ್ಗೆ ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದು ನಿರಂತರ ಪ್ರಕ್ರಿಯೆ. ಸರಿದಾರಿಗೆ ತರುವ ಕೆಲಸ ಆಗುತ್ತದೆ. ನಾವು ಜೋಡಿಸುವುದಕ್ಕೆ ಕೂತಿದ್ದೇವೆ. ಪಕ್ಷವನ್ನು ಒಡೆಯಲು ಅಲ್ಲ. ಅತ್ಯಂತ ದೊಡ್ಡ ಪಕ್ಷ ಬಿಜೆಪಿ 20 ಕೋಟಿ ಸದಸ್ಯರನ್ನು ಹೊಂದಿದೆ. ಇಂತಹ ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳಿರಬಹುದು. ಅದನ್ನು ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ ಎಂದರು.
ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅದರದೇ ಆದ ಮಾನದಂಡವಿದೆ. ಪಕ್ಷದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ಅವರ ಭಾಗವಹಿಸುವಿಕೆ ಮತ್ತು ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಕೊಡುಗೆ ಗಮನಿಸಿ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತದೆ. ಪಕ್ಷದ ಘನತೆ, ಗೌರವಕ್ಕೆ ಧಕ್ಕೆ ತರುವ ಘಟನೆಗಳನ್ನು ಯಾರು ಕೂಡ ಮಾಡಬಾರದು. ಸೊರಬ ಕ್ಷೇತ್ರದಲ್ಲಿ ಕೂಡ ಕೆಲವು ಹಿರಿಯರ ಅಭಿಪ್ರಾಯಗಳನ್ನು ಗಮನಿಸಿದ್ದೇವೆ. ಈಗಾಗಲೇ ರಾಜ್ಯಾಧ್ಯಕ್ಷರು ಮಾತುಕತೆ ಮಾಡಿದ್ದಾರೆ. ಅಲ್ಲಿ ಕೂಡ ಸಮಸ್ಯೆಯನ್ನು ಹಿರಿಯ ನಾಯಕರು ಬಗೆಹರಿಸುತ್ತಾರೆ ಎಂದರು.
ಮೋದಿ ಸರ್ಕಾರದ ಸಾಧನೆ, ವರ್ಚಸ್ಸು ಮತ್ತು ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ಬೆಂಬಲ ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ನಾಗರಾಜ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಕೆ.ಇ. ಕಾಂತೇಶ್, ಶಿವರಾಜ್, ಜ್ಞಾನೇಶ್ವರ್, ರಾಮಣ್ಣ, ಹೃಷಿಕೇಶ್ ಪೈ. ಇ. ವಿಶ್ವಾಸ್, ಅಣ್ಣಪ್ಪ ಮೊದಲಾದವರಿದ್ದರು.
ಪ್ರಾರ್ಥನಾ ಮಂದಿರಕ್ಕೆ ಬಜರಂಗದಳ ಕಾರ್ಯಕರ್ತರ ಅಕ್ರಮ ಪ್ರವೇಶ ಹಿನ್ನೆಲೆ: ಸೂಕ್ತ ಕ್ರಮಕ್ಕೆ ಆಗ್ರಹ
ಪ್ರಾರ್ಥನಾ ಮಂದಿರಕ್ಕೆ ಮಾ. 19ರಂದು ಬಜರಂಗದಳ ಕಾರ್ಯಕರ್ತರು ಅಕ್ರಮ ಪ್ರವೇಶ ಮಾಡಿ ದಾಳಿ ನಡೆಸಿದ್ದಲ್ಲದೇ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಸೌತ್ ಇಂಡಿಯಾ ಕ್ರಿಶ್ಚಿಯನ್ ಮಿಷನ್ ಫಾಸ್ಟರ್ ಫಾ. ಮಣಿಕಂಠ ಇಮ್ಯಾನುಯಲ್ ಹಾಗೂ ಸಂಸ್ಥೆಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ಕೂಡ ಭಾನುವಾರದ ಆರಾಧನೆಯ ಸಂದರ್ಭದಲ್ಲಿ ಬಜರಂಗದಳದ ಕೆಲವು ಕಾರ್ಯಕರ್ತರು ಬಂದು ನೀವು ಮತಾಂತರ ಮಾಡುತ್ತಿದ್ದೀರಿ. ಇನ್ನು ಮುಂದೆ ಇಲ್ಲಿ ಪ್ರಾರ್ಥನೆ ಮಾಡಬಾರದು ಎಂದು ಸುಳ್ಳು ಆರೋಪ ಹೊರಿಸಿ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ತುಂಗಾನಗರ ಠಾಣೆಗೆ ಹೋಗಿ ಕಳೆದ 15 ವರ್ಷಗಳಿಂದ ಇದೇ ಸಂಸ್ಥೆಯಲ್ಲಿ ಫಾಸ್ಟರ್ ಆಗಿ ಕೆಲಸ ಮಾಡುತ್ತಿರುವ ನಾನು ಮೌಖಿಕ ದೂರು ನೀಡಿರುತ್ತೇನೆ ಎಂದರು.
ಏಕಾಏಕಿ ಬಜರಂಗದಳದ ಕಾರ್ಯಕರ್ತರು ಮಾ. 19 ರಂದು ಪ್ರಾರ್ಥನಾ ಮಂದಿರದಲ್ಲಿ ಆರಾಧನೆ ಪ್ರಾರಂಭಿಸಿದಾಗ ಅಂಕುಶ್, ಸಚಿನ್, ಜಿತೇಂದ್ರ ಗೌಡ, ರಾಜೇಶ್ ಗೌಡ ಇನ್ನಿತರರು ತುಂಗಾ ನಗರ ಪೊಲೀಸರೊಂದಿಗೆ ಆಗಮಿಸಿ ಘೋಷಣೆ ಕೂಗಿ ಪ್ರಾರ್ಥನೆಗೆ ಅಡ್ಡಪಡಿಸಿದ್ದಾರೆ. ಅಲ್ಲಿದ್ದವರನ್ನು ಕೂಡ ಪೊಲೀಸರು ವಿಚಾರಿಸಿದಾಗ ಅಲ್ಲಿದ್ದವರು ನಮಗೆ ಯಾರೂ ಕೂಡ ಬಲವಂತ ಮಾಡಿಲ್ಲ ಎಂದು ಸ್ಪಷ್ಟೀಕರೀಸಿದ್ದಾರೆ ಎಂದರು.
ಪದೇ ಪದೇ ದಾಳಿ ಮಾಡಿ ಪ್ರಾರ್ಥನಾ ಮಂದಿರದ ಕೆಲಸಗಳಿಗೆ ಅಡ್ಡಿಪಡಿಸುತ್ತಿರುವ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಮುಖಂಡರಾದ ಏಸುದಾಸ್, ಪ್ರಮುಖರಾದ ಜೆ.ವಿ. ಭಾನು, ಶಿವಕುಮಾರ್, ಎಸ್.ಎ. ಯೂಸುಫ್, ಸಿ.ರಾಜೇಂದ್ರನ್, ಡಿಎಸ್ಎಸ್ ಪ್ರಮುಖರು ಮೊದಲಾದವರಿದ್ದರು.
ಏ.2ರಂದು ‘ಗತಿ’ ಎಂಬ ನಾಟಕ ಪ್ರದರ್ಶನ
ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಏ.2ರ ಸಂಜೆ 6:30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ‘ಗತಿ’ ಎಂಬ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಕಾರ್ಯದರ್ಶಿ ಬಿ.ಆರ್. ಅಚ್ಯುತ್ ರಾವ್ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2015ರಿಂದ ಬಳಗದ ವತಿಯಿಂದ ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಖ್ಯಾತ ಚಲನಚಿತ್ರ, ಕಿರುತೆರೆ ನಟ ಮತ್ತು ರಂಗಭೂಮಿ ನಿರ್ದೇಶಕ, ನಟ, ನಾಟಕಕಾರ, ಎಸ್.ಎನ್. ಸೇತೂರಾಂ ಹಾಗೂ ತಂಡದವರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ಸ್ವಾತಂತ್ರ್ಯಾನಂತರದ ಸುಮಾರ 60 ವರ್ಷಗಳ ಆಗುಹೋಗುಗಳು ಮತ್ತು ಒಂದು ನಗರದ ಮಧ್ಯಮ ವರ್ಗದ ಕುಟುಂಬದ ಮೇಲೆ ಆ ಅರವತ್ತು ವರ್ಷಗಳ ಪರಿಣಾಮ ಇವುಗಳ ಸೂಕ್ಷ್ಮವನ್ನು ಹಿಡಿಯುವ ಪ್ರಯತ್ನವೇ ಗತಿ ನಾಟಕ ಎಂದರು.
ಒಂದೂವರೆ ಗಂಟೆಯ ನಾಟಕ ಇದಾಗಿದ್ದು, ಪ್ರವೇಶ ದರ 100ರೂ.. ಸವಳಂಗ ರಸ್ತೆಯ ಸೈಕಲ್ ಲೋಕ, ಎಲ್ಎಲ್ ಆರ್ ರಸ್ತೆಯ ಹೋಟೆಲ್ ಶುಭಂ, ಶ್ರೀನಿಧಿ ಸೇಲ್ಸ್ ಅಂಡ್ ಟೆಕ್ಸ್ಟೈಲ್ಸ್, ದುರ್ಗಿಗುಡಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಅಯ್ಯಂಗಾರ್ ಬೇಕರಿ, ವಿನೋಬನಗರದ ವಿಪ್ರ ಟ್ರಸ್ಟ್ನ ಮಲೆನಾಡು ಮಳಿಗೆಯಲ್ಲಿ ಟಿಕೆಟ್ ದೊರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 94484 58457 ಅಥವಾ 8618072981ರಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ. ರಾಮಾಚಾರ್, ಹೆಚ್.ಜಿ. ನಾಗರಾಜ್, ಎನ್.ನಾಗೇಶ್, ಕುಮಾರಶಾಸ್ತ್ರಿ ಉಪಸ್ಥಿತರಿದ್ದರು.
ಕಬ್ಬು ಸರಬರಾಜು ಮಾಡಿದ ರೈತರ ಬಾಕಿ ಮೊತ್ತ ಬಿಡುಗಡೆಗೆ ಆಗ್ರಹ
2010-11ನೇ ಸಾಲಿನ ಎಂಪಿಎಂ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರ ಬಾಕಿ ಮೊತ್ತ 2.94 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯಮ ಕಬ್ಬು ಬೆಳೆಗಾರರ ಸಂಘದ ರಾಜ್ಯ ಹಾಗೂ ಜಿಲ್ಲಾ ಸಂಚಾಲಕ ಹೆಚ್. ದೇವಕುಮಾರ್ ಆಗ್ರಹಿಸಿದರು.
ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ 2010-11ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಘೋಷಿಸಿದ್ದ ಪ್ರತಿ ಟನ್ಗೆ 100ರೂ.ಅನ್ನು ಕೂಡಲೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಕಾರ್ಖಾನೆಗೆ ಪೂರೈಕೆ ಮಾಢಿ ಕಬ್ಬಿಗೆ ಸರ್ಕಾರಿ ಪ್ರತಿ ಟನ್ಗೆ 1800 ರೂ. ನಿಗದಿ ಮಾಡಿತ್ತು. ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ಟನ್ಗೆ 1900 ರೂ. ಘೋಷಿಸಿದ್ದರಿಂದ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರು ಎಂಪಿಎಂ ಕಾರ್ಖಾನೆಯ ರೈತರಿಗೂ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 100ರೂ. ನೀಡುವಂತೆ ಆದೇಶಿದ್ದರು. ಆದರೆ ಹಣ ಮಾತ್ರ ಬಿಡಗಡೆಯಾಗಿರಲಿಲ್ಲ. ಸಂಘದ ನಿರಂತರ ಹೋರಾಟದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚುವರಿ ಹಣ 100 ರೂ. ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಆದೇಶ ನೀಡಿದ್ದಾರೆ. ಅದರಂತೆ ಕಾರ್ಖಾನೆಯ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿಲ್ಲಾಧಿಕಾರಿ ಆರ್. ಸೆಲ್ವಮಣಿಯವರು ಕಡಿಮೆ ಮೊತ್ತ ಬಾಕಿ ಇರುವ ರೈತರಿಗೆ ಆದ್ಯತೆ ಅನುಸಾರ ಕಂತಿನ ರೂಪದಲ್ಲಿ ಹಣ ಪಾವತಿಸಲು ನಿರ್ದೇಶಿಸಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕೂಡಲೇ ಹಣ ಬಿಡುಗಡೆ ಮಾಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದ ಅವರು,ರೈತರ ಚುನಾವಣಾ ಪ್ರನಾಳಿಕೆ ಒಪ್ಪಿಗೆ ನೀಡುವ ಪಕ್ಷಕ್ಕೆ ರಾಜ್ಯದ ರೈತರ ಬೆಂಬಲವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ದೇವೇಗೌಡ ಕವಲಗುಂದಿ, ಕೆ.ಈರಣ್ಣ, ಸಣ್ಣಯ್ಯ, ಆರ್.ಎನ್.ನಾಗರಾಜ್, ಆನಂದ್, ಕೃಷ್ಣೋಜಿ ರಾವ್ ಇನ್ನಿತರರಿದ್ದರು.
ಮಾ.25ರಂದು ‘ಸಂಗೀತ ಸ್ವರಧಾರಾ’ ಕಾರ್ಯಕ್ರಮ
ಸಂಗೀತ್ ಸಮರ್ಪಣ್ ಟ್ರಸ್ಟ್, ಸದ್ಭಾವನಾ ಟ್ರಸ್ಟ್, ಜೆಸಿಐ ಶಿವಮೊಗ್ಗ ಶರಾವತಿ ಫೌಂಡೇಷನ್, ಜೆಸಿಐ ಶಿವಮೊಗ್ಗ ಶರಾವತಿ, ಜೆಸಿಐ ಶಿವಮೊಗ್ಗ ಶ್ರೀರಕ್ಷೆ ಇವರ ಸಂಯುಕ್ತ ಆಶ್ರಯದಲ್ಲಿ ಮಾ.25ರ ಸಂಜೆ 5:30ಕ್ಕೆ ಕುವೆಂಪು ರಂಗಮಂದಿರದಲ್ಲಿ ‘ಸಂಗೀತ ಸ್ವರಧಾರಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಗೀತ್ ಸಮರ್ಪಣ್ ಟ್ರಸ್ಟ್ ಅಧ್ಯಕ್ಷೆ ಸುರೇಖಾ ಹೆಗ್ಡೆ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಹಿಂದಿ ಹಳೆಯ ಚಿತ್ರಗಳ ಹಾಡುಗಳ ಗಾಯನವಿದ್ದು, ಸುರೇಖಾ ಹೆಗ್ಡೆ, ಬೆಂಗಳೂರಿನ ಮೋಹನ್ ಕೃಷ್ಣ, ಕಿರಣ್ ಚನ್ನಗಿರಿ ಅವರಿಂದ ಗಾಯನವಿದೆ ಎಂದರು.
ಸದ್ಭಾವನಾ ಟ್ರಸ್ಟ್ ಅಧ್ಯಕ್ಷ ಎಂ. ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪನ್ಯಾಸಕ ಹಾಗೂ ಯಕ್ಷಗಾನ ಕಲಾವಿದ ವಿ. ದತ್ತಮೂರ್ತಿ ಭಟ್ ಅವರಿಗೆ ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ಹರಳಪ್ಪ, ಶೋಭಾ ಸತೀಶ್, ದಿವ್ಯಾ, ಪರಮೇಶ್, ಲಿಂಗರಾಜು ಇನ್ನಿತರರು ಉಪಸ್ಥಿತರಿದ್ದರು.
ಮಾ.೩ ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ ಮಾ. ೩೦ ರಂದು ‘ಮೋದಿ ರಾಂಗ್ ನಂಬರ್, ಬಿಜೆಪಿ ರಾಂಗ್ ನಂಬರ್’ ಎಂಬ ಘೋಷಣೆಯೊಂದಿಗೆ ಅಣಕು ಪ್ರದರ್ಶನ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ವಿನಯ್ ಕೆ.ಸಿ. ರಾಜಾವತ್ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ೧೦.೩೦ ಕ್ಕೆ ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ ಎಂದರು.
ರಾಜ್ಯ ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕೇವಲ ಜಾತಿ ಧರ್ಮದ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀವನ್, ಸೈಯದ್, ವಿಜಯ್ ಇದ್ದರು.
ಮಾ. 26ರಂದು ಬಂಜಾರ ಸಾಹಿತ್ಯ ಸಮ್ಮೇಳನ
ರಾಜ್ಯ ಬಂಜಾರ ವಿದ್ಯಾರ್ಥಿ ಸಂಘಟನೆ ವತಿಯಿಂದ ಮಾ. 26ರಂದು ಬೆಳಗ್ಗೆ 10:30ರಿಂದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಉಪ್ಪಾರ ಭವನದಲ್ಲಿ ಪ್ರಪ್ರಥಮ ಬಂಜಾರ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್. ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ಲೇಖಕರು ಹಾಗೂ ಸಾಹಿತಿಗಳಿದ್ದು, ಅವರು ನಮ್ಮ ಸಮಾಜದ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಅವರಿಗೆ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ ಅವರನ್ನು ಆಯ್ಕೆ ಮಾಡಲಾಗಿದೆ. ಅಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಧ್ವಜಾರೋಹಣ ನೆರವೇರಿಸಲಿದ್ದು, ಬಂಜಾರ ಹಿರಿಯ ಸಾಹಿತಿ ಡಾ.ಪಿ.ಕೆ. ಖಂಡೋಬ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನವನ್ನು ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಸಮಾಜದ ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಬಂಜಾರ ಭಾಷಾ ಗೋರ್ ಬೋಲಿ, ಪ್ರಬಂಧ ಮಂಡನೆ ಕುರಿತು ೩ ಗೋಷ್ಠಿಗಳು ನಡೆಯಲಿವೆ. ಸಂಜೆ ೭.೩೦ ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಯಾನಾಯ್ಕ, ಉಮಾಮಹೇಶ್ವರ ನಾಯ್ಕ್, ರಾಮು ಎನ್. ರಾಥೋಡ್, ಗೋಪಾಲ್ ನಾಯ್ಕ್ ಉಪಸ್ಥಿತರಿದ್ದರು.
ಮಾ. 26ರಿಂದ 28ರವರೆಗೆ ಶ್ರೀ ರಕ್ತೇಶ್ವರಿ ಮತ್ತು ಆದಿ ಪರಾಶಕ್ತಿ ದೇವಾಲಯದ 6 ನೇ ವಾರ್ಷಿಕೋತ್ಸವ
ವಿನೋಬನಗರದ 60 ಅಡಿ ರಸ್ತೆ ಚಾನಲ್ ಪಕ್ಕದಲ್ಲಿರುವ ಶ್ರೀ ರಕ್ತೇಶ್ವರಿ ಮತ್ತು ಆದಿ ಪರಾಶಕ್ತಿ ದೇವಾಲಯದ 6 ನೇ ವಾರ್ಷಿಕೋತ್ಸವವನ್ನು ಮಾ. 26ರಿಂದ 28ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಖಜಾಂಚಿ ಶರತ್ ಚಂದ್ರ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ. 26ರ ಬೆಳಗ್ಗೆ 8 ಗಂಟೆಗೆ ಅಮ್ಮನವರಿಗೆ ರುದ್ರಾಭಿಷೇಕ, 12 ಗಂಟೆಗೆ ಮಹಾ ಮಂಗಳಾರತಿ, ಸಂಜೆ 6 ಗಂಟೆಗೆ ಕೀರ್ತನೆ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾ.27ರಂದು ಬೆಳಗ್ಗೆ 8 ಗಂಟೆಗೆ ರುದ್ರ ಹೋಮ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6ಕ್ಕೆ ಶಾಂಭವಿ ವೈಭವ ಹರಿಕಥೆ, ಮಾ. 28ರಂದು ಬೆಳಗ್ಗೆ 8 ಗಂಟೆಗೆ ಚಂಡಿಕಾ ಬೀಜಾಕ್ಷರಿ ಹೋಮ, ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ‘ಮಹಿಷ ವರ್ಧಿನಿ’ ಯಕ್ಷಗಾನ ಪ್ರದರ್ಶನವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭೀಮಣ್ಣ, ಹರೀಶ್, ಶಿವಮೊಗ್ಗ ವಿನೋದ್, ಎಸ್.ಆರ್. ಧನಂಜಯ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post