ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಳ್ಳಿಗಳು ಉದ್ದಾರವಾದಾಗ ಮಾತ್ರ ದೇಶವು ನಿಜವಾದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಗದಗದ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದ ಕಾರ್ಯಕಾರಿ ಕುಲಪತಿ ಡಾ. ಸುರೇಶ್.ವಿ.ನಾಡಗೌಡರ್ ಹೇಳಿದರು.
ನಗರದ ಸಿ.ಭೀಮಸೇನರಾವ್ ಕಾನೂನು ಕಾಲೇಜಿನಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿ.ಭೀಮಸೇನ ರಾವ್ ಕಾನೂನು ಕಾಲೇಜು, ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗುರುವಾರ ಸಂಜೆ, ಕಾನೂನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಅನುಸಂಧಾನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕಾನೂನು ಪದವೀಧರರಿಗೆ ಅಮೂಲ್ಯವಾದ ಅವಕಾಶಗಳಿವೆ. ದುಡ್ಡು ಸಂಪತ್ತು ಎಂಬ ಸೀಮಿತತೆಗೆ ಒಳಗಾಗಬೇಡಿ. ಕಾನೂನಿನ ಜ್ಞಾನದಿಂದ ಪರಿಣಾಮಕಾರಿಯಾಗಿ ಬದುಕು ಮುನ್ನಡೆಸಬಹುದು. ಶೋಷಣೆಗಳ ವಿರುದ್ಧ ಹೋರಾಟ ನಡೆಸಲು ಕಾನೂನಿನ ಜ್ಞಾನ ಅತಿಮುಖ್ಯ. ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಾಗ, ವೃತ್ತಿಯ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವಂತಹ ಪ್ರಯತ್ನ ನಡೆಸಬೇಕು.
ಬಿಸಿಲ ಕುದುರೆಯಂತಾದ ನ್ಯಾಯಾಂಗ ವ್ಯವಸ್ಥೆಯನ್ನು ಹತ್ತಿರವಾಗಿಸಲು ಕಕ್ಷಿದಾರರ ನಡುವೆ ಸಂಧಾನ ಎಂಬ ಪೂರಕ ವೇದಿಕೆಯನ್ನು ಬಳಸಿ. ಯಾವುದೇ ಪ್ರಕರಣಗಳು ನ್ಯಾಯಾಲಯ ಪ್ರವೇಶಿಸುವ ಮೊದಲು ರಾಜಿ ಸಂಧಾನದ ಪ್ರಕ್ರಿಯೆ ನಡೆಸಬೇಕು, ಸಂಧಾನ ವಿಫಲವಾದಲ್ಲಿ 2 ವರ್ಷದಲ್ಲಿ ಕೇಸ್ ಮುಗಿಸಬೇಕು ಎಂದು ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ. ಕೌಟುಂಬಿಕ ಕಲಹ, ಆಸ್ತಿ ವಿವಾದ, ಕಾರ್ಮಿಕ ಮಾಲೀಕರ ನಡುವಿನ ಸಂಘರ್ಷದಂತಹ ಪ್ರಕರಣಗಳಲ್ಲಿ ಸಂಧಾನದ ಮೂಲಕ ವೇಗವಾಗಿ ನ್ಯಾಯ ನೀಡಲು ಪ್ರಯತ್ನಿಸಿ. ಇದರಿಂದ ಅಲೆದಾಟ, ಸೋಲು, ಹತಾಶೆಯಂತಹ ಮನೋ ವೇದನೆಯಿಂದ ಕಕ್ಷಿದಾರರಿಂದ ಕಾಪಾಡಿ ಎಂದು ಸಲಹೆ ನೀಡಿದರು.

ಗೋವಾದ ಸಲಗಾಂವ್ಕರ್ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಾಬು ಗೌಡ ಪಾಟೀಲ್ ಮಾತನಾಡಿ, ಮಾತು ಎಂಬುದು ಅದ್ಭುತ ಕಲೆ. ಸಂವಹನಕ್ಕೆ ಭಾಷೆ ಎಂಬುದು ಎಂದಿಗೂ ಅಡ್ಡಿಯಾಗಬಾರದು. ನಾವು ಯಾವ ಭಾಷೆಯಲ್ಲಿ ಹೆಚ್ಚು ಪ್ರಬುದ್ಧರಾಗಿದ್ದೇವೆ, ಅಂತಹ ಭಾಷೆಯಲ್ಲಿ ನಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸಿ. ಭಾಷೆಯ ಪ್ರಬುದ್ಧತೆ ಎಂಬುದು ನಮ್ಮಲ್ಲಿ ಕೌಶಲ್ಯತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲ ಅಧ್ಯಕ್ಷತೆ ವಹಿಸಿದ್ದರು. ಮೂರು ದಿನಗಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ 20 ಕ್ಕೂ ಹೆಚ್ಚು ಕಾನೂನು ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು. ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿ, ಸುಮನ ನಿರೂಪಿಸಿದರು.










Discussion about this post