ಶಿವಮೊಗ್ಗ: ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಒದಗಿಸಲು ಹಾಗೂ ಈ ಭಾಗದಲ್ಲಿ ವಾಹನ ಸಂಚಾರದಟ್ಟಣೆ ನಿಯಂತ್ರಿಸಲು ಶಿವಮೊಗ್ಗ-ತುಮಕೂರು ನಡುವೆ ಚತುಷ್ಪಥ ರಸ್ತೆ ನಿರ್ಮಿಸಲು 3957 ಕೋಟಿ ರೂ.ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ ಅವರು, ಈ ರಸ್ತೆಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ. ಈ ಕಾರ್ಯದಲ್ಲಿ ಈ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಕಾಲಿಕವಾಗಿ ಸ್ಪಂದಿಸಿದ್ದಲ್ಲದೇ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದು ವಿಶೇಷ ಎಂದರು.
ಶಿವಮೊಗ್ಗ ನಗರದಲ್ಲಿನ ಸಂಚಾರ ದಟ್ಟಣೆ ನಿಯಂತ್ರಣ ಜೊತೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಒದಗಿಸುವ ಸದುದ್ದೇಶದಿಂದ ನಗರವನ್ನು ಕೇಂದ್ರವನ್ನಾಗಿಸಿಕೊಂಡು ಊರ ಹೊರವಲಯದಲ್ಲಿ 19 ಕಿಮೀ ವ್ಯಾಪ್ತಿಯಲ್ಲಿ 430 ಕೋಟಿ ರೂ.ಗಳ ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಪಂಕ್ತೀಕರಣ ನಕ್ಷೆಯನ್ನು ತಯಾರಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಭೂಸಾರಿಗೆ ಮಂತ್ರಾಲಯದ ಅನುಮತಿ ದೊರೆಯಲಿದೆ ಎಂದರು.
ರಾಜ್ಯ ಸರ್ಕಾರದ ಕೆಎಸ್’ಐಐಡಿಸಿ ಸಂಸ್ಥೆಯ ಮೂಲಕ 38 ಕೋಟಿ ರೂ.ಗಳ ವೆಚ್ಚದಲ್ಲಿ ಶಿವಮೊಗ್ಗದಲ್ಲಿ ಕಿರುವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದಿನ ಒಂದು ವರ್ಷದ ಅವಧಿಯೊಳಗಾಗಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ 1458 ಕೋಟಿ ರೂ.ಗಳ ವೆಚ್ಚದಲ್ಲಿ 64 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅವುಗಳ ಪ್ರಗತಿ ಪರಿಶೀಲನೆಯ ಕುರಿತು ಪ್ರತಿ ತಿಂಗಳು ಸಭೆಯನ್ನು ಏರ್ಪಡಿಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದ ಅವರು, ಕೈಗೊಂಡಿರುವ ಪ್ರತಿ ಕಾಮಗಾರಿಗೆ ಕಾಲಮಿತಿ ನಿಗದಿಗೊಳಿಸಲಾಗುತ್ತಿದೆ. ನಿರೀಕ್ಷೆಯಂತೆ ಕೆಲಸ-ಕಾರ್ಯಗಳು ಪೂರ್ಣಗೊಂಡಲ್ಲಿ ಶಿವಮೊಗ್ಗ ನಗರದ ಚಿತ್ರಣವೇ ಬದಲಾಗಲಿದೆ ಎಂದರು.
ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೊಳಪಡುವ ಜಿಲ್ಲೆಯ 444 ಕೆರೆಗಳನ್ನು ಅಭಿವೃದ್ಧಿಪಡಿಸಲು, ಜಿಪಂನಿಂದ 23 ಕೋಟಿ ರೂ.ಗಳ ಪ್ರಸ್ತಾವನೆ ಬಂದಿದ್ದು, ಕೆರೆಗಳ ದುರಸ್ತಿಗೆ ಅಗತ್ಯವಾಗಿರುವ ಅನುದಾನವನ್ನು ಬಿಡುಗಡೆ ಮಾಡಿ, ಕಾಮಗಾರಿಯನ್ನು ಕೂಡಲೇ ಆರಂಭಿಸಲಾಗುವುದು ಎಂದರು.
ಜಿಲ್ಲೆಯ ಸರ್ಕಾರಿ ಶಾಲೆಗಳ ದುರಸ್ತಿಗೆ 34.00 ಕೋಟಿ ರೂ.ಗಳ ಅನುದಾನ ರಾಜ್ಯ ಸರ್ಕಾರದಿಂದ ಮಂಜೂರಾಗಿದೆ. ಅಲ್ಲದೇ ಶಿವಮೊಗ್ಗ ನಗರದ ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ದೊರೆಯಬಹುದಾದ ಎಲ್ಲಾ ಮೂಲಗಳಿಂದ ಹಣ ಸಂಗ್ರಹಿಸಿ, ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಅವರು, ಅದರ ಪೂರ್ವಸಿದ್ಧತೆಗಾಗಿ ಇಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಪಾಲಿಕೆ ಸದಸ್ಯರು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಸಭೆ ಏರ್ಪಡಿಸಲಾಗಿದೆ. ನವೆಂಬರ್ 10ರೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಗುದ್ದಲಿಪೂಜೆಯನ್ನು ನೆರವೇರಿಸಲಾಗುವುದು ಎಂದರು.
ಪಾಲಿಕೆ ಮೇಯರ್ ಲತಾಗಣೇಶ್, ಉಪಮೇಯರ್ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಉಪಸ್ಥಿತರಿದ್ದರು.
Discussion about this post