ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುಂಗಾ ಪಾನ ಗಂಗಾ ಸ್ನಾನ Tunga Paana Ganga Snana ಎಂಬ ಗಾಧೆ ಮಾತಿಗೆ ಅಪವಾದವಾಗಿದ್ದು, ತುಂಗೆ ಅಪವಿತ್ರವಾಗಿದೆ ಕುಡಿಯಲು ಯೋಗ್ಯವಲ್ಲದ ಅಂಶಗಳು ನೀರಿನಲ್ಲಿ ಕಂಡುಬಂದಿದ್ದು, ಶಿವಮೊಗ್ಗ ನಗರಕ್ಕೆ ನೀರಿನಿಂದಲೇ ಅನಾರೋಗ್ಯ ಕಾಡುವ ಅಪಾಯದ ಗಂಟೆ ಬಾರಿಸಿದೆ ಎಂದು ನಗರ ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ಎಲ್ಲಾ ಪಕ್ಷದ ಸದಸ್ಯರುಗಳು ಒಕ್ಕೊರಲಿನಿಂದ ತುಂಗೆಯ ಶುದ್ಧೀಕರಣಕ್ಕೆ ಆಗ್ರಹಿಸಿದರು.
ಪಾಲಿಕೆ ಸದಸ್ಯರಾದ ರಮೇಶ್ ಹೆಗಡೆ ಮಾತನಾಡಿ, ತುಂಗೆಯನ್ನು ಉಳಿಸುವುದು ಮಹಾನಗರ ಪಾಲಿಕೆ ಕರ್ತವ್ಯವಾಗಿದೆ ಯುಜಿಡಿ ಮುಖಾಂತರವೇ ಮಲೀನ ನೀರು ಹರಿಯಬೇಕು ಎಂಬ ನಿರ್ಣಯ ಮಾಡೋಣ ಎಂದರು.
ಶಂಕರ್ ಗನ್ನಿ ಮಾತನಾಡಿ, ಪಂಪ್ ಹೌಸ್‍ಗೆ ನೇರವಾಗಿ ಕಲುಷಿತ ನೀರು ಬರುತ್ತಿದೆ ಎಂದರು. ಲಕ್ಷ್ಮೀ ಶಂಕರ್‍ನಾಯಕ್ ಅದಕ್ಕೆ ಧ್ವನಿಗೂಡಿಸಿದರು. ವಿಶ್ವನಾಥ್ ಮಾತನಾಡಿ ಉತ್ತಮ ಅಭಿವೃದ್ಧಿಯಾದ ಕನ್ಸರ್‍ವೆನ್ಸಿಗಳ ನಗರ ಎಂಬ ಪ್ರಶಸ್ತಿ ಬಂದಿದ್ದರೂ ಮಿಳಘಟ್ಟ ಸೇರಿದಂತೆ ನನ್ನ ವಾರ್ಡಿನಲ್ಲಿ ಕನ್ಸರ್‍ವೆನ್ಸಿ ಅಭಿವೃದ್ಧಿಯಾಗಿಲ್ಲ ಆಗಾಗಿ ಕಲುಷಿತ, ತ್ಯಾಜ್ಯ ನೀರು ಎಲ್ಲವೂ ಕನ್ಸರ್‍ವೆನ್ಸಿಗೆ ಬಿಡುತ್ತಿದ್ದು, ಅದು ನೇರವಾಗಿ ಕಾಲುವೆ ಸೇರುತ್ತಿದೆ. ಮೊದಲು ಪಾಲಿಕೆ ವ್ಯಾಪ್ತಿಯ ಎಲಾ ಕನ್ಸರ್‍ವೆನ್ಸಿ ಅಭಿವೃದ್ದಿಗೊಳಿಸಿ ಮೂಲಭೂತ ಸೌಲಭ್ಯ ಕಲ್ಪಿಸಿ ಎಂದರು.
ಧೀರರಾಜ್ ಹೊನ್ನಾವಿಲೆ ಮಾತನಾಡಿ, ಖಾಯಿಲೆಗಳ ನಗರವಾಗುತ್ತಿದ್ದು, ಯುಜಿಡಿ ನೀರು ಚಾನಲ್‍ಗೆ ಸೇರದಂತೆ ಕ್ರಮವಹಿಸಿ ಎಂದರು.
ಯಮುನಾ ರಂಗೇಗೌಡ ಮಾತನಾಡಿ, ಹಲವು ವರ್ಷಗಳಿಂದ ಸಾಕಷ್ಟು ಸಂಘ ಸಂಸ್ಥೆಗಳು ಶುದ್ಧ ತುಂಗೆಗಾಗಿ ಹೋರಾಟ ಮಾಡುತ್ತ ಬಂದಿದ್ದರು ಪರಿಣಾಮ ಸೊನ್ನೆ ಎಂದರು.
ರಾಜು ಮಾತನಾಡಿ, 24×7 ಕುಡಿಯುವ ನೀರು ಮತ್ತು ಒಳಚರಂಡಿ ವಿಭಾಗವನ್ನು ನೀರು ಸರಬರಾಜು ಮಂಡಳಿಗೆ ಕೊಟ್ಟಿದ್ದೆ ತಪ್ಪಾಗಿದೆ ಎಂದರು. ನಗರಾಜು ಕಂಕಾರಿ ಮಾತನಾಡಿ ಸ್ಮಾರ್ಟ್ ಸಿಟಿ ಹಳೆ ಸೇತುವೆಯಿಂದ ಹೊಸ ಸೇತುವೆಯವರೆಗೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಪ್ರಾಜೆಕ್ಟ್ ತಯಾರಿಸಿ ಅಭಿವೃದಿಗೊಳಿಸಿದ್ದು ಆಯಿತು. ಆದರೂ ತುಂಗೆಯ ಒಡಲಿಗೆ ಮಲೀನ ನೀರು ಸೇರುತ್ತಲೆ ಇದೆ. ಇವತ್ತಿಗೂ ಹಲವೆಡೆ ಫಿಟ್ ವ್ಯವಸ್ಥೆ ಇದೆ. ಮಳೆ ನೀರು ಮತ್ತು ಟಾಯ್ಲೆಟ್ ನೀರು ಎಲ್ಲವೂ ಮಳೆಗಾಲದಲ್ಲಿ ಮೇಲೆ ಉಕ್ಕಿ ಹರಿದು ಚಾನಲ್ ಪಾಲಾಗುತ್ತಿದೆ. ಆಟೋ ಕಾಂಪ್ಲೆಕ್ಸ್‍ನ್ ಎಲ್ಲಾ ತ್ಯಾಜ್ಯ ನೀರು ಚಾನಲ್‍ಗೆ ಸೇರುತ್ತಿದೆ ಎಂದರು.
ವಿಫಕ್ಷ ನಾಯಕ ಮೆಹಕ್ ಷರೀಪ್ ಮಾತನಾಡಿ, ನೀರಿನ ಗುಣಮಟ್ಟ ಪರೀಕ್ಷೆಗೆ ಲ್ಯಾಬ್ ನಿರ್ಮಾಣ ಮಾಡಲು ಪಾಲಿಕೆಯಲ್ಲಿ ಹಣ ಇಟ್ಟಿದ್ದೇವೆ. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.
ಜ್ಞಾನೇಶ್ವರ ಮಾತನಾಡಿ, 25 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನಗರ ವಿಪರೀತವಾಗಿ ಬೆಳೆದಿದೆ. ಸಮಸ್ಯೆಗಳು ಉಲ್ಭಣವಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿದ್ದರು, ಒಂದು ಒಳ್ಳೆ ಯೋಜನೆ ಮೂಲಕ ಶಾಶ್ವತ ಪರಿಹಾರ ಮಾಡಬೇಕು ಎಂದರು.
ಶಾಸಕ ಚೆನ್ನಬಸಪ್ಪನವರು ಸಮಸ್ಯೆ ಪರಿಹಾರಕ್ಕೆ ವ್ಯಾಪಾಕ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಶಾಶ್ವತವಾದ ಪರಿಹಾರ ಬೇಕಾಗಿದೆ. ಜನರಲ್ಲಿ ಜಾಗೃತಿ ಕೂಡ ಅವಶ್ಯ ಎಂದರು.
ಆಯುಕ್ತ ಮಾಯಣ್ಣಗೌಡ ಮಾತನಾಡಿ, ಈಗಾಗಲೇ ಹಲವಾರು ಸಭೆಗಳನ್ನು ಪರಿಸರ ಪ್ರೇಮಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಹಾಗು ಸಂಬಂದಪಟ್ಟ ಅನೇಕ ವಿಭಾಗಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ನಗರದಲ್ಲಿ 37 ಎಂಎಲ್‍ಡಿ ಕೊಳಚೆ ನೀರು ಬರುತ್ತಿದ್ದು, ಕೇವಲ 11 ಎಂಎಲ್‍ಡಿ ನೀರು ಮಾತ್ರ ಎಸ್‍ಟಿಪಿ ಶುದ್ಧೀಕರಣ ಘಟಕಕ್ಕೆ ಹೋಗುತ್ತಿದೆ. ಆದರೆ ಉಳಿದ ನೀರು ಎಲ್ಲಿಗೆ ಹೋಯಿತು. ನಗರ ಶುದ್ಧ ಕುಡಿಯುವ ನೀರು ಸರಬರಾಜು ಮಂಡಳಿ ಮತ್ತು ಒಳಚರಂಡಿ ಮಂಡಳಿ ಎರಡು ಬೇರೆ ಬೇರೆ ವಿಭಾಗಗಳಾಗಿದ್ದು, ತ್ಯಾಜ್ಯ ನೀರು, ಮಲೀನ ನೀರು, ಮತ್ತು ಮಳೆ ನೀರು ಹಾಗೂ ಮನೆಯ ಕೊಳಚೆ ನೀರು ಎಲ್ಲವೂ ಕೂಡ ಬೇರೆ ಬೇರೆ ಸಂಪರ್ಕ ವ್ಯವಸ್ಥೆ ಇದ್ದು, ಹೆಚ್ಚಿನ ಕಡೆ ಯುಜಿಡಿಗೆ ಬಿಡಲಾಗುತ್ತಿದೆ. ಇನ್ನೂ ಶೇ.30 ರಷ್ಟು ಜನ ಯುಜಿಡಿ ಸಂಪರ್ಕ ಹೊಂದಿಲ್ಲ. ಒಳಚರಂಡಿ ವಿಭಾಗ 5 ಹಂತದಲ್ಲಿ ಮಲೀನ ನೀರನ್ನು ಬೇರ್ಪಡಿಸಿ ಶುದ್ಧಿಕರಣಗೊಳಿಸಿ ಬಳಿಕ ತುಂಗೆಗೆ ಬಿಡುವ ಕಾರ್ಯ ಮಾಡಬೇಕು ಈ ಬಗ್ಗೆ ಅನೇಕ ಚರ್ಚೆಗಳಾಗಿದೆ. ಸೂಕ್ತ ಯೋಜನೆ ನಿರ್ಮಿಸಿ ಸಮಸ್ಯೆ ಬಗೆಹರಿಸಲು 15 ದಿನಗಳ ಗಡವುನ್ನು ಈಗಾಗಲೇ ಡಿಸಿಯವರು ನೀಡಿದ್ದಾರೆ. ಆದರೆ, ಅದು ಕಾರ್ಯರೂಪಕ್ಕೆ ಬರಲು ತಿಂಗಳುಗಳೇ ಹಿಡಿಯುತ್ತದೆ ಎಂದರು.
Also read: ಮಾನವೀಯತೆಯ ಪಾಠ ಸಾಲದು, ಅದನ್ನು ಪಾಲಿಸಿ: ಸಿದ್ದರಾಮಯ್ಯಗೆ ಯತ್ನಾಳ್ ಟಾಂಗ್
ಒಳಚರಂಡಿ ವಿಭಾಗದ ಮಿಥುನ್‍ಕುಮಾರ್ ಮಾತನಾಡಿ, ರಾಜಕಾಲುವೆಯ ಬಳಿ 9 ಕಡೆ ಮಲೀನ ನೀರು ಸಂಗ್ರಹಿಸಿ, ತ್ಯಾಜ್ಯವನ್ನು ಬೇರ್ಪಡಿಸಿ ರಾಜಕಾಲುವೆಗೆ ಬಿಡಲು 9 ವೆಟ್‍ವೆಲ್‍ಗಳ ನಿರ್ಮಾಣ ಮಾಡಲಾಗಿದೆ. ಈಗಾಗಲೇ 5 ಕಾರ್ಯಾರಂಭ ಮಾಡುತ್ತಿದೆ. ತುಂಗಾ ನದಿ ಬಲಭಾಗದ ಕೊಳಚೆ ನೀರು ಪುರಲೆಯ ಶುದ್ಧಿಕರಣ ಘಟಕಕ್ಕೆ ಬರುತ್ತಿದೆ. ಹಲವಾರು ಕಡೆ ಬೇಸಿಗೆ ಮತ್ತು ಚಳಿಗಾಲದಲ್ಲಿ ನೇರವಾಗಿ ಕಲುಷಿತ ನೀರು ರಾಜಕಾಲುವೆಗೆ ಬಿಡುತ್ತಿದ್ದಾರೆ. 3ನೇ ಹಂತದ ಒಳಚರಂಡಿ ಯೋಜನೆ ಪೈಪ್ ಅಳವಡಿಕೆ ಕೆಲವೊಂದು ಖಾಸಗಿ ಜಾಗದಲ್ಲಿ ಹೋಗಬೇಕಾಗಿರುವುದರಿಂದ ಅವರ ವಿರೋಧ ಮತ್ತು 2 ವರ್ಷದ ಕರೋನ ಅವಧಿಯಲ್ಲಿ ಕಾಮಗಾರಿಗೆ ಹಿನ್ನೆಡೆಯಾಗಿದೆ. ವೆಟ್‍ವೆಲ್‍ಗಳ ನಿರ್ವಾಹಣೆ 3 ವರ್ಷದ ಅವಧಿ ಮುಗಿದ್ದಿದ್ದು, ಇನ್ನೂ ಮುಂದೆ ಪಾವತಿ ಅವಧಿಯಿಂದಲೇ ಮ್ಯಾನ್ ಪವರ್ ನೀಡಿ ಮುಂದುವರಿಸಬೇಕು ಎಂದರು. ಅದಕ್ಕೆ ಪಾಲಿಕೆಯಲ್ಲಿ ಸರ್ವಾನುಮತದಿಂದ ನಿರ್ಣಯದಿಂದ ಒಪ್ಪಿಗೊಳ್ಳಲಾಯಿತು. ಒಂದು ಸಂಸ್ಕರಣ ಘಟಕಕ್ಕೆ ಕನಿಷ್ಠ 3 ಜನ ಮ್ಯಾನ್ ಪವರ್ ಬೇಕು ಎಂದರು.
ಒಳಚರಂಡಿ ವಿಭಾಗದ ಹಿರಿಯ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಎರಡನೇ ನಿರ್ಣಯದಂತೆ ವಿದ್ಯುತ್ ವ್ಯವಸ್ಥೆ ಇನ್ನಿತರ ಸಮಸ್ಯೆಗಳನ್ನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕಲುಷಿತ ನೀರು ಶುದ್ಧಿಕರಣ ಘಟಕಗಳು ಹೆಚ್ಚಳ ಮಾಡಲು ಮತ್ತು ಒಳಚರಂಡಿ ವ್ಯವಸ್ಥೆ ಪೂರ್ಣವಾಗಿ ಮುಗಿಸಲು ಸರ್ಕಾರದ ಗಮನಕ್ಕೆ ಈಗಾಗಲೇ ತರಲಾಗಿದೆ ಎಂದರು.
ಆಯುಕ್ತ ಮಾಯಣ್ಣಗೌಡ ಮಾತನಾಡಿ, ಅಲ್ಯೂಮಿನಿಯಂ ಅಂಶ ನೀರಿನಲ್ಲಿ ಇದೆ ಎಂದು ಗಮನಕ್ಕೆ ಬಂದಾಗ, ಎಲ್ಲಾ ವಿಭಾಗಗಳೊಂದಿಗೆ ಚರ್ಚೆ ಮಾಡಿ, ಎಲ್ಲಿಂದ ಬಂತು, ಹೇಗೆ ಬಂತು, ಕಲುಷಿತ ನೀರಿಗೆ ಈ ಅಂಶ ಸೇರ್ಪಡೆಯಾದ ಬಗ್ಗೆ ಅಧ್ಯಯನಕ್ಕೆ ಪ್ರಾರಂಭ ಮಾಡಿದ್ದೇವೆ. 9 ಕಡೆ ನೀರಿನ ಸ್ಯಾಪಲ್ ಸಂಗ್ರಹಿಸಿ ಕೊನೆಗೆ ಗಾಜನೂರು ಡ್ಯಾಮ್‍ನಿಂದಲೂ ಸಂಗ್ರಹಿಸಿದಾಗ ಎಲ್ಲಾ ಕಡೆಯೂ ಅಲ್ಯೂಮಿನಿಯಂ ಅಂಶ ಇರುವುದು ಕಾತರಿಯಾಗಿದೆ. ಈಗ ನೀರಿನ ಮೂಲದಲ್ಲಿ ಶೃಂಗೇರಿಯವರೆಗೆ ಮತ್ತು ಭದ್ರಾ ನದಿಯ ಮೂಲದಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ತಜ್ಞರಿಂದ ಮೂಲವನ್ನು ಪರೀಕ್ಷಿಸಲು ಕ್ರಮಕೈಗೊಳ್ಳಲಾಗಿದ್ದು, ಪರಿಣಿತರು ನೀರಿನ ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ 3 ತಿಂಗಳಿನಲ್ಲಿ ಸಂಪೂರ್ಣ ವರದಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ 30 ಲಕ್ಷ ರು. ವೆಚ್ಚವಾಗಲಿದ್ದು, ಪಾಲಿಕೆ ಅದನ್ನು ಬರಿಸಲಿದೆ. ಬರುವ ದಿನಗಳಲ್ಲಿ ತುಂಗೆಯ ಮಲೀನಕ್ಕೆ ಕಾರಣವಾದ ನಿರ್ದಿಷ್ಟ ಅಂಶಗಳು ಬೆಳಕಿಗೆ ಬರಲಿದೆ ಎಂದರು.
ಒಟ್ಟಾರೆಯಾಗಿ ಶುದ್ಧ ತುಂಗೆಯ ನೀರಿಗೆ ವ್ಯಾಪಾಕವಾದ ಚರ್ಚೆಯೊಂದಿಗೆ ಈ ಸಾಲಿನ ಪಾಲಿಕೆಯ ಸಭೆ ಕೆಲವು ನಿರ್ಣಯಗಳೊಂದಿಗೆ ಅಂತ್ಯಗೊಂಡಿದ್ದು, ಪಾಲಿಕೆಯ ಪಾರಂಪರಿಕ ಕಟ್ಟಡದ ಮುಂದೆ ಆಯುಕ್ತ ಮಾಯಣ್ಣ ಗೌಡ ಹಾಗೂ ಎಲ್ಲಾ ಸದಸ್ಯರು ಸೇರಿ ಛಾಯಾಚಿತ್ರವನ್ನು ಪಡೆದರು. ಇಂದಿನ ಸಭೆಯಲ್ಲಿ ಪಾಲಿಕೆ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ್ ನಾಯಕ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post