ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಗಾಂಧಿಬಜಾರ್‌ನ ಪಟೇಲ್ ನಾವೆಲ್ಟಿಸ್ ಅಂಗಡಿಯ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ, ತಮಿಳುನಾಡಿನ ಪವಳಂ (ಹೋಮ್‍ಗಾರ್ಡ್) ಇರುವೆ ನಾಶಕಪುಡಿಯನ್ನು ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದ ಸುಮಾರು 64,800 ರೂ. ಬೆಲೆಯ ಇರುವೆ ನಾಶಕಪುಡಿಯನ್ನು ವಶಕ್ಕೆ ಪಡೆದಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕರಾದ ರಮೇಶ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ಪಟೇಲ್ ನಾವೆಲ್ಟಿಸ್ ಮಾಲೀಕರಿಗೆ ಹಾಗೂ ಸರಬರಾಜು ಮಾಡಿದ ಕಂಪೆನಿಗೆ ನೋಟೀಸ್ ನೀಡಿದ್ದು, ಏಳು ದಿನಗಳೊಳಗೆ ಉತ್ತರ ನೀಡಲು ತಿಳಿಸಿದೆ. ನೋಟೀಸ್‍ಗೆ ಉತ್ತರಿಸದಿದ್ದಲ್ಲಿ ಅವರ ಮೇಲೇ ದಾವೆ ಹೂಡಲು ಅವಕಾಶವಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಅಂಗಡಿಯವರ ಬಳಿ ಈ ಸಂಬಂಧ ಯಾವುದೇ ದಾಖಲೆ ಇರಲಿಲ್ಲ. 18 ಬಾಕ್ಸ್‍ಗಳಲ್ಲಿ ಈ ಪುಡಿಯನ್ನು ಸಂಗ್ರಹಿಸಿದ್ದು, ಹೋಲ್‍ಸೇಲ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಯಾವುದೇ ಕೃಷಿ ರಾಸಾಯನಿಕಗಳನ್ನು ಪರವಾನಿಗೆ ಇಲ್ಲದ ಮಾರಾಟ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದ್ದು, ಅಂಗಡಿ ಮಾಲೀಕರ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಚೇತನ್ ಮತ್ತು ಸುನೀಲ್ ಭಾಗಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















