ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭೂಮಿ ಸಂಸ್ಥೆ, ಶ್ರೇಯಸ್ ಮೆಡಿಕಲ್ ಲ್ಯಾಬೋರೇಟರಿ ಹಾಗೂ ಮೆಗ್ಗಾನ್ ರಕ್ತನಿಧಿ ಆಶ್ರಯದಲ್ಲಿ ಭಾನುವಾರ ಇಲ್ಲಿನ ಛೇಂಬರ್‍ಸ್ ಆಫ್ ಕಾಮರ್ಸ್‌ನ ಆವರಣದಲ್ಲಿ ರಕ್ತದಾನ ಶಿಬಿರ ಮತ್ತು ಕೊರೋನಾ ವಾರಿಯರ್‍ಸ್‌ಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.
ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಲ್ಫೋನ್ಸ್ ರಾಕೇಶ್ ಡಿಸೋಜಾ ಮಾತನಾಡಿ, ರಕ್ತದಾನ ಶ್ರೇಷ್ಠದಾನ. ಕೊರೋನಾದಂತಹ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಬಹುತೇಕರು ಹೆದರಿಕೆಯಿಂದ ರಕ್ತದಾನ ಮಾಡಲು ಮುಂದಾಗುತ್ತಿಲ್ಲ. ಪ್ರತಿಯೊಬ್ಬ ಆರೋಗ್ಯವಂತರೂ ರಕ್ತದಾನ ಮಾಡುವ ಮೂಲಕ ರೋಗಿಗಳ ಜೀವರಕ್ಷಣೆಗೆ ಮುಂದಾಗಬೇಕು ಎಂದರು.
ಭೂಮಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಮತ್ತು ಸಿ.ಟಿ. ಮೀನಾಕ್ಷಿ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ರಕ್ತದಾನ ಶಿಬಿರ ಮತ್ತು ಕೊರೋನಾ ವಾರಿಯರ್‍ಸ್‌ಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಮೆಗ್ಗಾನ್ ರಕ್ತನಿಧಿಯ ವೈದ್ಯಾಧಿಕಾರಿ ಡಾ. ಅಶೋಕ್ ಮಾತನಾಡಿ, ರಕ್ತದಾನದ ಮಹತ್ವ, ರಕ್ತದ ತುರ್ತು ಅವಶ್ಯಕತೆ ಮುಂತಾದ ಮಹತ್ವದ ವಿಷಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್‍ಸ್‌ಗಳನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೆಗ್ಗಾನ್ ಆಸ್ಪತ್ರೆಯ ಶುಶ್ರೂಷಕಿ ಸಿ.ಎನ್. ಚಂದ್ರಿಕಾ, ಕೊರೋನಾ ಸಂದರ್ಭದಲ್ಲಿ ರೋಗಿಗಳನ್ನು ಆರೈಕೆ ಮಾಡುವಲ್ಲಿ ವೈದ್ಯಕೀಯ ಸಿಬ್ಬಂದಿಗಳ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೂಮಿ ಸಂಸ್ಥೆ ಅಧ್ಯಕ್ಷ ಎನ್. ವೆಂಕಟೇಶ್ ವಹಿಸಿದ್ದರು. ವೇದಿಕೆಯಲ್ಲಿ ಸಿ.ಟಿ. ಮೀನಾಕ್ಷಿ ಉಪಸ್ಥಿತರಿದ್ದರು. ನವೀನ್ ತಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್.ಸಿ. ಮುರಳೀಧರ್ ಪ್ರಾರ್ಥಿಸಿದರು. ಮೊಹಮ್ಮದ್ ಶಾಬುದ್ದೀನ್ ನಿರೂಪಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post