ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ‘ವೋಟ್ ಚೋರ್ ಗದ್ದಿ ಚೋಡ್’ ಅಭಿಯಾನಕ್ಕೆ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿ ಸ್ಕೀಂ ಅನ್ನು ನಕಲು ಮಾಡಿದೆ. ಜಿ.ಎಸ್.ಟಿ. ಅನ್ನು ಮೊದಲು ಪ್ರಸ್ತಾಪ ಮಾಡಿದ್ದು ಯುಪಿಎ ಸರ್ಕಾರ. ಆಧಾರ್ ಕಾರ್ಡ್ ಅನ್ನು ಮೊದಲು ತರಲು ನಿರ್ಧರಿಸಿದ್ದು ಕೂಡ ಕಾಂಗ್ರೆಸ್ ಸರ್ಕಾರ. ಆದರೆ ಆಗ ವಿರೋಧಿಸಿದ್ದ ಬಿಜೆಪಿ ತಾನು ಅಧಿಕಾರಕ್ಕೆ ಬಂದ ಮೇಲೆ ಅದನ್ನೇ ನಕಲು ಮಾಡುತ್ತಿದೆ. ದೇಶದಾದ್ಯಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಗೆ ಸಿಂಹಸ್ವಪ್ನವಾಗಿದ್ದಾರೆ ಎಂದರು.
ಮತಗಳ್ಳತನ ಮಾಡಿ ಪ್ರಜಾಪ್ರಭುತ್ವದ ಕೊಲೆ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲಾ ತಾಲೂಕು ಮಟ್ಟದಲ್ಲೂ ಮತಗಳ್ಳತನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತೇವೆ. ಇಡೀ ಭಾರತ ಒಂದಾಗಲು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದಾರೆ. ಅದೇ ರೀತಿ ಈಗ ಮತಗಳ್ಳತನ ಅಭಿಯಾನ ಪ್ರಾರಂಭವಾಗಿದೆ. ಕಾಂಗ್ರೆಸ್ ಯಾವಾಗಲು ಜನ ಸಾಮಾನ್ಯರ ಪಕ್ಷವಾಗಿದ್ದು ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡುತ್ತಾ ಬಂದಿದೆ. ಬಿಜೆಪಿ ಜಾತಿ ಧರ್ಮದ ಹೆಸರಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದೆ. ನಾವು ಜಾತಿಗಣತಿ ಮಾಡುತ್ತಿಲ್ಲ. ಸಿಎಂ ಎಲ್ಲೂ ಕೂಡ ಜಾತಿ ಗಣತಿ ಎಂದು ಹೇಳಿಲ್ಲ. ಇವತ್ತಿನಿಂದ ಪ್ರಾರಂಭವಾದ ಸಮೀಕ್ಷೆ ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದೆ. ಜಾತಿಗಣತಿ ಹೆಸರಲ್ಲಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.
ನಮಗೆ ಹಿರಿಯರು ಕೊಟ್ಟ ಮತದಾನ ಹಕ್ಕನ್ನು ಉಳಿಸುವುದು ಪ್ರತಿ ನಾಗರಿಕರ ಕೆಲಸವಾಗಿದೆ. ನಮ್ಮ ವೋಟು ನಮ್ಮ ಹಕ್ಕು ನಮ್ಮ ಅಧಿಕಾರ ನಮ್ಮ ಕೈಯಲ್ಲೇ ಇರಬೇಕು. ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಆಧಾರ್ ಕಾರ್ಡ್, ಜಿ.ಎಸ್.ಟಿ. ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹುಟ್ಟು ಹಾಕಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಂದೆ ಬಿಜೆಪಿ ಅಪಪ್ರಚಾರ ಮಾಡಿತ್ತು. ಈಗ ಜಾರಿಗೆ ತಂದಿದೆ. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮಹದೇವಪುರ ಕ್ಷೇತ್ರವೊಂದರಲ್ಲೇ ಒಂದು ಲಕ್ಷ ಮತಗಳು ಮಾಯವಾಗಿದ್ದು, ಆಳಂದ ಕ್ಷೇತ್ರದಲ್ಲಿ 6 ಸಾವಿರ ಮತಗಳು ಮಾಯವಾಗಿದ್ದು ಎಲ್ಲವೂ ಬಿಜೆಪಿಯವರ ಮತಗಳ್ಳತನಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದರು.
ಬಿಜೆಪಿ ನಾಯಕರ ವಿರುದ್ಧ ಮಾತನಾಡಿದರೆ ಕೇಂದ್ರ ಸರ್ಕಾರ ಐಟಿ, ಇಡಿ ಬಳಸಿ ಬಾಯಿ ಮುಚ್ಚುವ ಕೆಲಸ ಮಾಡುತ್ತಿದೆ. ವಿಪರ್ಯಾಸವೆಂದರೆ ಶೇ. 80ರಷ್ಟು ಮಾಧ್ಯಮದವರು ಕೇಂದ್ರ ಸರ್ಕಾರದ ವಿರುದ್ಧ ಸುದ್ದಿ ಮಾಡುವುದಿಲ್ಲ. ಮಾಧ್ಯಮ ಕ್ಷೇತ್ರ ಕೆಲವೇ ವ್ಯಕ್ತಿಗಳ ಕೈಯಲ್ಲಿದೆ. ಕೆಲವೊಂದು ಮಾಧ್ಯಮಗಳು ಮಾತ್ರ ಸರ್ಕಾರದ ವಿರುದ್ಧ ಬರೆಯುತ್ತದೆ. ಜನತೆಗೆ ಕೊಟ್ಟ ಹಕ್ಕನ್ನು ಕೇಂದ್ರ ಸರ್ಕಾರ ಕಸಿದಿದೆ. ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಮತಗಳ ಕಾಂಗ್ರೆಸ್ ತಿಜೋರಿಗೆ ಕನ್ನ ಹಾಕಿದೆ. ಮತಗಳ್ಳತನ ಮಾಡಿದ ದಾಖಲೆಯನ್ನು ರಾಹುಲ್ ಗಾಂಧಿ ಹಲವು ಬಾರಿ ಬಹಿರಂಗಪಡಿಸಿ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ. ಆದರೆ ಮತ್ತೆ ಮತ್ತೆ ಚುನಾವಣಾ ಆಯೋಗ ಸಾಕ್ಷಿ ಕೇಳುತ್ತದೆ ಎಂದರು.
ಚುನಾವಣಾ ಆಯೋಗವೇ ಈ ಮತಗಳ್ಳತನದ ಸಂಪೂರ್ಣ ಹೊಣೆ ಹೊತ್ತು ತನಿಖೆ ಮಾಡಬೇಕಾಗಿದೆ. ದೇಶದ ಜನರ ಮುಂದೆ ಸತ್ಯ ಎತ್ತಿಹಿಡಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬೃಹತ್ ಬ್ಯಾನರ್ ಗೆ ಸಹಿ ಹಾಕುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಶಾಸಕಿ ಬಲ್ಕೀಶ್ ಬಾನು, ಪ್ರಮುಖರಾದ ಆಯನೂರು ಮಂಜುನಾಥ್, ಧರ್ಮಸೇನಾ, ತಿಪ್ಪೇಸ್ವಾಮಿ, ಎನ್. ರಮೇಶ್, ಹೆಚ್.ಎಸ್. ಸುಂದರೇಶ್, ರಮೇಶ್ ಶಂಕರಘಟ್ಟ, ಶ್ವೇತಾ ಬಂಡಿ, ಜಿ.ಡಿ. ಮಂಜುನಾಥ್, ಹೆಚ್.ಸಿ. ಯೋಗೀಶ್, ಎಸ್.ಕೆ. ಮರಿಯಪ್ಪ, ಶರತ್ ಮರಿಯಪ್ಪ, ಪಿ.ಒ. ಶಿವಕುಮಾರ್, ಕಲಗೋಡು ರತ್ನಾಕರ್, ಪಿ.ಎಸ್. ಗಿರೀಶ್ ರಾವ್, ಇಸ್ಮಾಯಿಲ್ ಖಾನ್, ಇಕ್ಕೇರಿ ರಮೇಶ್, ಹರ್ಷಿತ್ ಗೌಡ, ರಮೇಶ್ ಹೆಗ್ಡೆ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post