ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಸೇನೆಯಲ್ಲಿ (Indian Army) ಸುದೀರ್ಘ 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಸೇವಾ ನಿವೃತ್ತಿ (Army Veterans) ಪಡೆದು ತವರಿಗೆ ಮರಳಿದ ಇಬ್ಬರು ಯೋಧರಿಗೆ (Shivamogga) ಶಿವಮೊಗ್ಗದಲ್ಲಿ ಕುಟುಂಬಸ್ಥರು, ಸ್ನೇಹಿತರು, ಮಾಜಿ ಯೋಧರು ಹಾಗೂ ರಾಷ್ಟ್ರಭಕ್ತರು ಅದ್ಧೂರಿ ಹಾಗೂ ಭಾವನಾತ್ಮಕ ಸ್ವಾಗತ ನೀಡಿದರು.
ಬೆಂಗಳೂರು–ತಾಳಗುಪ್ಪ ರೈಲಿನಲ್ಲಿ ಇಬ್ಬರು ಯೋಧರು ಇಂದು ರಾತ್ರಿ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಆಗಮಿಸಿದರು. ರೈಲಿನಿಂದ ಕೆಳಗಿಳಿಯುತ್ತಿದ್ದಂತೆಯೇ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಅವರನ್ನು ಹೂಮಾಲೆ ಹಾಕಿ ಬರಮಾಡಿಕೊಂಡರು. ದೇಶ ಸೇವೆ ಸಲ್ಲಿಸಿ ತವರಿಗೆ ಮರಳಿದ ಯೋಧರನ್ನು ಕಂಡು ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿತ್ತು.
ಯೋಧರು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಸೇರಿದಂತೆ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ಡೊಳ್ಳು ಬಾರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಯೋಧರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ವೇಳೆ ರೈಲು ನಿಲ್ದಾಣದ ವಾತಾವರಣವೇ ದೇಶಭಕ್ತಿಯ ಸಂಭ್ರಮದಿಂದ ಕೂಡಿತ್ತು.
24 ವರ್ಷಗಳ ಸೇನಾ ಸೇವೆಯ ನೆನಪು ಹಂಚಿಕೊಂಡ ವಿಜಯ್ ಕುಮಾರ್
ಸೇವಾ ನಿವೃತ್ತಿ ಹೊಂದಿರುವ ಹವಾಲ್ದಾರ್ ವಿಜಯ್ ಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ 24 ವರ್ಷಗಳ ಸೇನಾ ಸೇವೆಯ ಅನುಭವಗಳನ್ನು ಹಂಚಿಕೊಂಡರು.
ಸೇನೆಗೆ ಆಯ್ಕೆಯಾದ ಬಳಿಕ ಭೂಪಾಲ್‌ನಲ್ಲಿ ತರಬೇತಿ ಪೂರ್ಣಗೊಳಿಸಿದ ಅವರು, ಬಳಿಕ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪಂಜಾಬ್, ಅಸ್ಸಾಂನ ಗುವಾಹಟಿ, ಉತ್ತರ ಪ್ರದೇಶದ ಬಬೀನಾ, ಜಮ್ಮುವಿನ ಮೆಂಧರ್ ಸೆಕ್ಟರ್ ಹಾಗೂ ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರು.
ನಂತರ ಅರುಣಾಚಲ ಪ್ರದೇಶ, ಜಾನ್ಸಿ ಹಾಗೂ ಜಮ್ಮುವಿನ ವಿವಿಧ ಭಾಗಗಳಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾಗಿ ಅವರು ಹೇಳಿದರು. ಸೇನೆಯಲ್ಲಿ ಒಟ್ಟು 24 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ ಇದೀಗ ಸೇವಾ ನಿವೃತ್ತಿ ಪಡೆದು ತವರಿಗೆ ಮರಳಿರುವುದಾಗಿ ತಿಳಿಸಿದರು.
ತಮ್ಮ ಸೇನಾ ಸೇವೆಯ ಅವಧಿಯಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿರುವ ವಿಜಯ್ ಕುಮಾರ್, ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಜಮ್ಮುವಿನ ಕಥುವಾ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದಾಗಿ ಹೇಳಿದರು. ಆ ಸಂದರ್ಭದಲ್ಲಿ ಡ್ರೋನ್ ಕಾರ್ಯಾಚರಣೆಗೆ ಸಂಬಂಧಿಸಿದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಗಿ ಅವರು ತಿಳಿಸಿದರು.
ಹವಾಲ್ದಾರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಅವರು, ಸೇನೆಯಲ್ಲಿ ಕಳೆದ 24 ವರ್ಷಗಳ ಅನುಭವವನ್ನು ಸ್ಮರಿಸಿಕೊಂಡರು.
ವಿವಿಧ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಶಿವಾಜಿನಾಯ್ಕ್
ಇನ್ನೋರ್ವ ಯೋಧರಾದ ಶಿವಾಜಿನಾಯ್ಕ್ ಅವರು ತಮ್ಮ ಸೇನಾ ಪಯಣದ ಕುರಿತು ಮಾಹಿತಿ ಹಂಚಿಕೊಂಡರು. ಮೂಲತಃ ಶಿವಮೊಗ್ಗ ಜಿಲ್ಲೆಯ ನ್ಯಾಮತಿ ತಾಲೂಕಿನವರಾದ ಅವರು ಶಿವಮೊಗ್ಗದಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ್ದರು.
2002ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಯ್ಕೆಯಾದ ಅವರು, ಮಂಗಳೂರಿನಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಸಿಕಂದರಾಬಾದ್‌ನಲ್ಲಿ ಎರಡು ವರ್ಷಗಳ ತರಬೇತಿ ಪಡೆದರು.
ತರಬೇತಿ ಪೂರ್ಣಗೊಂಡ ನಂತರ ಪಂಜಾಬ್ ಹಾಗೂ ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದರು. ಜಮ್ಮು-ಕಾಶ್ಮೀರದಲ್ಲಿ ಆರ್‌ಆರ್ (ರಾಷ್ಟ್ರೀಯ ರೈಫಲ್ಸ್) ಕಾರ್ಯಾಚರಣೆಗಳಲ್ಲಿಯೂ ಪಾಲ್ಗೊಂಡಿದ್ದಾಗಿ ಅವರು ತಿಳಿಸಿದರು.
Also Read>> ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಬೇಟೆ: ದ. ಕೊರಿಯಾವನ್ನು ಬಗ್ಗುಬಡಿದು ಇತಿಹಾಸ ಬರೆದ ಬಿಲ್ಲುಗಾರ್ತಿಯರು!
ಬಳಿಕ ಬಾಂಬೆ, ರಾಜಸ್ಥಾನ, ಉತ್ತರ ಪ್ರದೇಶ, ಪಠಾಣ್‌ಕೋಟ್ ಹಾಗೂ ವಿವಿಧ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜಸ್ಥಾನದಲ್ಲಿ ನಡೆದ ರಷ್ಯನ್ ಸಮರಾಭ್ಯಾಸದಲ್ಲಿಯೂ ಭಾಗವಹಿಸಿದ್ದಾಗಿ ಅವರು ಹೇಳಿದರು.
ತಮ್ಮ ಸೇನಾ ಸೇವೆಯ ಕೊನೆಯ ಹಂತದಲ್ಲಿ ಗುವಾಹಟಿ ಹಾಗೂ ಅಸ್ಸಾಂ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ನಾನ್-ಕಮಿಷನ್ಡ್ ಆಫೀಸರ್ ಆಗಿ ಒಟ್ಟು 24 ವರ್ಷಗಳ ಸೇವೆ ಪೂರ್ಣಗೊಳಿಸಿ ಇದೀಗ ತವರಿಗೆ ಮರಳಿರುವುದಾಗಿ ಶಿವಾಜಿನಾಯ್ಕ್ ಹೇಳಿದರು.
‘ಯೋಧರು ನಮ್ಮ ಹೆಮ್ಮೆ’
ಇಬ್ಬರು ಯೋಧರನ್ನು ಸ್ವಾಗತಿಸಿ ಮಾತನಾಡಿದ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ. ಮಧುಸೂದನ್, ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ತವರಿಗೆ ಮರಳಿರುವ ಯೋಧರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.
“ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ಇಬ್ಬರು ಯೋಧರು ತವರಿಗೆ ಮರಳಿದ್ದಾರೆ. ಯೋಧರು ನಮ್ಮ ಹೆಮ್ಮೆ. ಇವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ,” ಎಂದು ಅವರು ಹೇಳಿದರು.
ದೇಶದ ಗಡಿ ಹಾಗೂ ವಿವಿಧ ಭಾಗಗಳಲ್ಲಿ ವರ್ಷಗಳ ಕಾಲ ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸಿದ ಯೋಧರು ಸೇವಾ ನಿವೃತ್ತಿಯ ಬಳಿಕ ತವರಿಗೆ ಮರಳಿರುವ ಸಂದರ್ಭದಲ್ಲಿ ಅವರನ್ನು ಗೌರವದಿಂದ ಬರಮಾಡಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
Shivamogga : ಗಣ್ಯರು, ರಾಷ್ಟ್ರಭಕ್ತರ ಬಳಗದ ಸದಸ್ಯರು ಭಾಗಿ
ಯೋಧರಿಗೆ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ. ಮಧುಸೂದನ್, ರಾಷ್ಟ್ರಭಕ್ತರ ಬಳಗದ ಕಾಂತೇಶ್ ಈಶ್ವರಪ್ಪ, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವಕುಮಾರ್ ಡಿ.ಎಸ್., ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತರಾದ ಜೇಸುದಾಸ್, ಗಣೇಶ್ ನಾವುಡ, ಗಂಗಾಧರ್ ಎ., ಶಿವಮೊಗ್ಗ ನಾಗರಾಜ್, ರಘು, ನವೀನ್ ಪುರದಾಳ್, ಸಾವಂತ್, ಕೊಟ್ರೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಧರಿಗೆ ಶುಭ ಹಾರೈಸಿದರು.
24 ವರ್ಷಗಳ ಸುದೀರ್ಘ ಸೇನಾ ಸೇವೆ ಪೂರ್ಣಗೊಳಿಸಿ ತವರಿಗೆ ಮರಳಿದ ಇಬ್ಬರು ಯೋಧರನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಗೌರವದಿಂದ ಬರಮಾಡಿಕೊಂಡಿದ್ದು, ಶಿವಮೊಗ್ಗ ರೈಲು ನಿಲ್ದಾಣದಲ್ಲಿ ನಡೆದ ಈ ಸ್ವಾಗತ ಕಾರ್ಯಕ್ರಮ ದೇಶ ಸೇವೆ ಸಲ್ಲಿಸಿದ ಯೋಧರ ತ್ಯಾಗ ಮತ್ತು ಸೇವೆಗೆ ಸಮಾಜ ನೀಡಿದ ಗೌರವದ ಪ್ರತೀಕವಾಗಿ ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






