ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ವಿರುದ್ಧ ಕಾಂಗ್ರೆಸ್‍ನಲ್ಲಿಯೇ ಯುದ್ಧ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #B Y Vijayendra ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂಡಾ ಹಗರಣದಿಂದ ಅಧಿಕಾರ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔತಣ ಕೂಟದ ನೆಪದಲ್ಲಿ ಕೆಲವು ಶಾಸಕರುಗಳನ್ನು ಮೆಚ್ಚಿಸಲು ಹೊರಟಿದ್ದಾರೆ. ಈ ಔತಣ ಕೂಟ ಕೂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿದೇಶಿ ಪ್ರವಾಸದಲ್ಲಿರುವಾಗ ನಡೆಯುತ್ತಿದೆ. ಈ ಔತಣ ಕೂಟ ಸಿದ್ದರಾಮಯ್ಯ ಅವರ ಕೃಪಾಪೋಷಿತವಾಗಿದ್ದು, ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದು ಜಗ್ದಜ್ಜಾಹೀರವಾಗಿದೆ. ಮುಖ್ಯಮಂತ್ರಿ ರಾಜಕೀಯ ದಾಳ ಉರುಳಿಸಲು ಮುನ್ನುಡಿಯಾಗಿ ಈ ಔತಣ ಕೂಟ ಆಯೋಜಿಸಿದ್ದಾರೆ. ಅವರಿಗೆ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡಲು ಇಷ್ಟವಿಲ್ಲ. ಅವರದೇ ಪಕ್ಷದವರಿಗೆ ಅವರು ಮುಂದುವರೆಯಲು ಇಷ್ಟವಿಲ್ಲ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ವಿರುದ್ಧವೇ ಯುದ್ಧ ಆರಂಭವಾಗಿದೆ ಎಂದರು.
ಕಾಂಗ್ರೆಸ್‍ನಲ್ಲಿ ಮಾತ್ರ ಒಳಜಗಳ ಇಲ್ಲ. ಬಿಜೆಪಿಯಲ್ಲೂ ನಿಮ್ಮ ವಿರುದ್ಧವೇ ಪ್ರತಿಧ್ವನಿ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ರಾಜಕೀಯ ಪಕ್ಷಗಳಲ್ಲಿ ಷಡ್ಯಂತ್ರ, ಪಿತೂರಿಗಳೆಲ್ಲವೂ ಸಹಜ, ಎಲ್ಲವನ್ನು ಜೀರ್ಣಿಸಿಕೊಂಡು ಪಕ್ಷ ಸಂಘಟನೆ ಮಾಡುವ ಶಕ್ತಿಯನ್ನು ಭಗವಂತ ನನಗೆ ಕೊಟ್ಟಿದ್ದಾನೆ. ಅದನ್ನು ಮಾಡುತ್ತೇನೆ ಎಂದರು.
ನನಗೆ ರಾಜ್ಯಾಧ್ಯಕ್ಷ ಸ್ಥಾನ ಅನಿರೀಕ್ಷಿತವಾಗಿ ಸಿಕ್ಕಿದೆ. ಪಕ್ಷದ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ಕೊಟ್ಟಿದೆ. ಆಡಳಿತ ಪಕ್ಷ ತುದಿಗಾಲಲ್ಲಿ ನಿಲ್ಲುವಂತೆ ಅದರ ಭ್ರಷ್ಟಾಚಾರ, ದುರಾಡಳಿತದ ವಿರುದ್ದ ಹೋರಾಟ ಮಾಡುತ್ತಿದ್ದೇನೆ. ಮುಂದೆಯೂ ಕೂಡ ಅಧ್ಯಕ್ಷನಾಗಿ ಪಕ್ಷವನ್ನು ಸದೃಢಗೊಳಿಸಿ ಅಧಿಕಾರಕ್ಕೆ ತಂದೇ ತರುತ್ತೇನೆ ಎಂದರು.
Also read: ಕಹಿಯಾದ ಸ್ವೀಟ್ ರವಾನೆ ಪ್ರಕರಣ | ತನಿಖೆ ಚುರುಕಿಗೆ ಬಿಜೆಪಿ ಮನವಿ | ಯಾರು ಏನು ಹೇಳಿದರು?
ಬಿಜೆಪಿಯಲ್ಲಿ ಒಂದಿಬ್ಬರ ಸಮಸ್ಯೆ ಇದೆ. ನಾನು ಹೈಕಮಾಂಡ್ ಗೆ ಚಾಡಿ ಹೇಳಲು ಹೋಗಿರಲಿಲ್ಲ. ಪಕ್ಷದ ಅಧ್ಯಕ್ಷನಾಗಿ ಪಕ್ಷದೊಳಗಿನ ವಿದ್ಯಾಮಾನಗಳನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಎಲ್ಲವನ್ನೂ ಅವರು ಗಮನಿಸುತ್ತಿದ್ದಾರೆ. ಸದ್ಯದಲ್ಲೆ ಎಲ್ಲವೂ ಸರಿ ಹೋಗಲಿದೆ ಎಂದು ಯತ್ನಾಳ್ ಅವರ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದರು.
ರಾಜ್ಯಸರ್ಕಾರ ಬಸ್ ದರ ಏರಿಕೆ ಮಾಡಿ ಗ್ಯಾರಂಟೀ ಯೋಜನೆಗಳ ಹೊರೆಯನ್ನು ಸರಿದೂಗಿಸಲು ಹೊರಟಿದೆ. ಜನರಿಗೆ ಅನ್ಯಾಯ ಮಾಡುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ ಎಂದ ಬಿ.ವಿ. ವಿಜಯೇಂದ್ರ ಅವರು ಸಚಿನ್ ಪಾಂಚಾಲ್ ಆತ್ನಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸಚಿವ ಪ್ರಿಯಾಂಕ ಖರ್ಗೆ ಹೆದರಿದ್ದಾರೆ. ಅವರದ್ದೇ ನೇರ ಪಾತ್ರವಿದೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು, ಬಾಣಂತಿ , ಹಸುಗೂಸು ಸಾವಿನ ಪ್ರಕರಣಗಳಿಗೆ ನೈತಿಕ ಹೊಣೆ ಹೊತ್ತು ಸಚಿವ ದಿನೇಶ್ ಗುಂಡೂರಾವ್ ಮತ್ತು ಸಚಿವೆ ಲಕ್ಷ್ಮೀ ಹೆಬಾಳ್ಕರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು 2ವರ್ಷವಾಗಿದೆ. ಅವರ ಸಾಧನೆ ಏನು ಎಂದು ಕೇಳಿದರೆ ಶೂನ್ಯವಷ್ಟೇ ಎಲ್ಲಿಯೂ ಅಭಿವೃದ್ಧಿ ನಡೆದಿಲ್ಲ. ಬಿಜೆಪಿ ಶಾಸಕರುಗಳಿಗೆ ಇರಲಿ ಕಾಂಗ್ರೆಸ್ ಶಾಸಕರಿಗೂ ಅನುದಾನವಿಲ್ಲ, ಅದರಲ್ಲೂ ಹೊಸದಾಗಿ ಆಯ್ಕೆಯಾದವರು ಜನರ ಹತ್ತಿರ ಹೋಗುವುದೇ ಕಷ್ಟವಾಗಿದೆ. ಆ ಪಕ್ಷದಿಂದಲೇ ಬೇಸರದ ಮಾತುಗಳು ಕೇಳಿಬರುತ್ತಿವೆ . ಇದಕ್ಕೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯಸರ್ಜಿ, ಡಿ.ಎಸ್.ಅರುಣ್,ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್,ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಎಸ್. ದತ್ತಾತ್ರಿ, ಕೆ.ಬಿ.ಅಶೋಕ್‍ನಾಯ್ಕ್, ಮಾಲತೇಶ್, ಮೋಹನ್‍ರೆಡ್ಡಿ, ಗಾಯಿತ್ರಿ ಮಲ್ಲಪ್ಪ, ಮಧುರಾ ಶಿವಾನಂದ್, ಕೆ.ವಿ.ಅಣ್ಣಪ್ಪ, ಶಿವರಾಜ್, ಹರಿಕೃಷ್ಣ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post