ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ ಶಾಸಕರ ಮಗನ ವರ್ತನೆ ಹದ್ದು ಮೀರಿದ್ದು, ಮಹಿಳಾ ಅಧಿಕಾರಿಗೆ ಅಪಮಾನವಾಗಿದ್ದು, #Insult to Women Officer ಕೂಡಲೇ ಪೊಲೀಸರು ಸುಮೊಟೋ ಕೇಸ್ ದಾಖಲಿಸಿ ಶಾಸಕರ ಪುತ್ರನನ್ನು ಹಾಗೂ ಮರಳು ದಂಧೆಕೋರರನ್ನು ಬಂಧಿಸಬೇಕೆಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಆಗ್ರಹಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ನಿನ್ನೆ ರಾತ್ರಿ ಅಕ್ರಮ ಮರಳು ದಂಧೆಯ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿದಾಗ ದಂಧೆಕೋರರು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಸವೇಶ್ ಫೋನ್ ಮಾಡಿ ವಿಷಯ ತಿಳಿಸಿದಾಗ ಅಲ್ಲಿಂದಲೇ ದೂರವಾಣಿಯಲ್ಲಿ ಬಸವೇಶ್ ಅವರು ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿ ಜೀವಭಯದಿಂದ ಇನ್ನೂ ದೂರು ನೀಡಿಲ್ಲ. ಇದರಿಂದ ಭದ್ರಾವತಿ ರಿಪಬ್ಲಿಕ್ ಮಾಡಲು ಶಾಸಕರು ಮತ್ತು ಪುತ್ರನ ತಂಡ ಹೊರಟಿದೆ. ಇದಕ್ಕೆ ಭದ್ರಾವತಿ ನಾಗರಿಕರು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಾಗರಿಕ ಸಮಾಜ ಇನ್ನೂ ಭದ್ರಾವತಿಯಲ್ಲಿ ಬದುಕಿದೆ. ಬೀದಿ ಬಸವನನ್ನು ಬಡಿದು ಹಾಕಲು ಏನೂ ಕಷ್ಟವಿಲ್ಲ ಎಂದರು.
Also read: ಪ್ರತಿ ಬಾಲ್ಯ ವಿವಾಹ ಪ್ರಕರಣವನ್ನು ‘ಹಾಟ್‌ಸ್ಟಾಟ್’ ಎಂದು ಪರಿಗಣಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಮುಖ್ಯಮಂತ್ರಿ ಸಿದ್ಧರಾಮಯ್ಯ #CM Siddaramaiah ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ #Home Minister Parameshwar ಅವರೇ ನೀವು ಏನು ಮಾಡುತ್ತಿದ್ದೀರಿ? ಬೀದಿ ಬಸವನನ್ನು ಯಾಕಿನ್ನೂ ಬಂಧಿಸಿಲ್ಲ? ನಿಮ್ಮ ಸರ್ಕಾರದ ಅವಧಿಯಲ್ಲಿ ಹಲವಾರು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಹತ್ಯೆಗೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ? ಶಿವಮೊಗ್ಗಕ್ಕೆ ಬನ್ನಿ, ಗಾಂಜಾ ಮತ್ತು ಮರಳು ದಂಧೆ ನಿಯಂತ್ರಿಸಿ ಎಂದು ಹಲವು ಬಾರಿ ಗೃಹ ಸಚಿವರಿಗೆ ವಿನಂತಿಸಿದ್ದೇನೆ. ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೇನೆ. ಆದರೂ ನೀವು ಬಂದಿಲ್ಲ. ಆ ಹೆಣ್ಣುಮಗಳಿಗೆ ನ್ಯಾಯ ಕೊಡಿಸಿ ಎಂದರು.
ಅಪಮಾನ ಮಾಡಿಸಿಕೊಂಡು ಮನೆಗೆ ಹಿಂದಿರುಗಿದ ಆ ಮಹಿಳಾ ಅಧಿಕಾರಿಗೆ ರಕ್ಷಣೆ ಕೊಡಿ. ಯಾರಾದರೂ ಅವರ ಹಿರಿಯ ಅಧಿಕಾರಿಗಳು ದೂರು ನೀಡಲು ಅಡ್ಡಿಪಡಿಸಿದರೆ ಸಾರ್ವಜನಿಕರು ಸುಮ್ಮನಿರುವುದಿಲ್ಲ. ಪೊಲೀಸ್ ಇಲಾಖೆಯವರು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಸುಮೊಟೋ ಕೇಸ್ ದಾಖಲಿಸದಿದ್ದರೆ ಇಂದು ಭದ್ರಾವತಿಯಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ. ನಾಳೆಯಿಂದ ಎಲ್ಲೆಡೆ ಹೋರಾಟ ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಜ್ಞಾನೇಶ್ವರ್, ವಿನಯ್ ಬಿದರೆ, ಮೋಹನ್ ರೆಡ್ಡಿ, ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post