ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಳಿದವರೆಷ್ಟೋ ಉಳಿದವರೆಷ್ಟೋ. ಆದರೆ ಅವರು ಹಾದು ಹೋಗಿರುವ ದಾರಿಯನ್ನು ನೆನೆಸಿಕೊಂಡರೆ ಇಂದು ನಾವೆಲ್ಲ ಸ್ವರ್ಗದಲ್ಲಿ ನೆಲೆಸಿದ್ದೇವಲ್ಲಾ ಎಂಬ ಭಾವನೆ ಸಾಮಾನ್ಯನಿಗೂ ಬರದೇ ಇರದು ಎಂದು ವನವಾಸಿ ಕಲ್ಯಾಣದ ನಗರ ಸಮಿತಿ ಟೋಳಿಯ ಸದಸ್ಯರಾದ ಸಹನಾ ಚೇತನ್ ಹೇಳಿದರು.
ರಾಣಿ ಗೈಡಿನ್ಯೂರವರ ಜನ್ಮ ದಿನದ ಅಂಗವಾಗಿ ವನವಾಸಿ ಕಲ್ಯಾಣ ಕರ್ನಾಟಕದ ಅಡಿಯಲ್ಲಿ ನಗರದ ನವ್ಯಶ್ರೀ ಸಭಾಂಗಣದಲ್ಲಿ ಅನ್ನಪೂರ್ಣೇಶ್ವರಿ ಮುಷ್ಟಿ ಅಕ್ಕಿ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ನಾರಿಶಕ್ತಿ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾತಂತ್ರ್ಯ ಸೇನಾನಿಗಳು ಎಂದಾಗ ನಮ್ಮ ಮಕ್ಕಳಿನಿಂದ ಹಿರಿಯರವರೆಗೂ ಮುಂಚೂಣಿಯಲ್ಲಿ ಉದ್ಗರಿಸುವುದು ಅದೇ ನೆಹರೂ, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್ ಹಾಗೂ ಬಾಲಗಂಗಾಧರ ತಿಲಕರ ಹೆಸರನ್ನು. ಮಹಿಳೆಯರ ಹೆಸರು ಅತೀ ವಿರಳವೆಂದೇ ಹೇಳುವ ಈ ಸಂದರ್ಭದಲ್ಲಿ ಈಶಾನ್ಯ ರಾಜ್ಯದ ಹೆಣ್ಣು ಮಗಳೊಬ್ಬಳ ಸ್ವಾತಂತ್ರ್ಯ ಸಂಗ್ರಾಮದ ಕಥಾನಕವನ್ನು ನೆನೆಸಿಕೊಂಡರೆ ಮೈಮನ ನಡುಗದೆ ಇರಲಾರದು ಎಂದರು.
Also read: ಗಾಂಜಾ ಮಾರಾಟ: ಆರು ಜನರ ಬಂಧನ
ಅಂದಿನ ಸ್ವಾತಂತ್ರ್ಯ ವೀರರು ಇಂದು ನಮಗೆ ಉಳಿಸಿರುವ ಸಂಪದ್ಭರಿತ ಭಾರತವನ್ನು,ಯುವ ಸಮೂಹವನ್ನು ಹಾಗೂ ಅವರು ಕೆಚ್ಚೆದೆಯಿಂದ ಹೋರಾಡಿದ ರೀತಿನೀತಿಗಳನ್ನು ವಿವರಿಸಿದರು. ಸಾವಿರ ಬಾರಿ ಸೋತರೂ ಮತ್ತೆ ಛಲ ಬಿಡದ ತ್ರಿವಿಕ್ರಮನಂತೆ ಮೇಲೆದ್ದ ರೀತಿಯನ್ನು ನಾವೂ ಬೆಳೆಸಿಕೊಳ್ಳಬೇಕು, ತಾಯ್ನಾಡಿನ ಪ್ರತಿ ಆ ಹೆಮ್ಮೆ ಗೌರವವನ್ನು ಉಳಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ನುಡಿದ ಕಾರ್ಯದರ್ಶಿ ಪ್ರೇಮಾ ವಿಜಯ್ ಕುಮಾರ್, ರಾಜ್ಯದಲ್ಲಿ ನಡೆಯುತ್ತಿರುವ ನಗರ ಸಮಿತಿಯ ಚಟುವಟಿಕೆಯ ಬಗ್ಗೆ ಪರಿಚಯ ಮಾಡಿಕೊಟ್ಟರು.
ಈ ಬಾರಿಯ ದಾನಿಗಳಲ್ಲಿ ಒಬ್ಬರಾದ ಶ್ಯಾಮಲಾ ಮಾತನಾಡಿ, ಇದ್ದರೂ ಕೊಡುವ ಮನಸ್ಸು ಹಲವರಿಗೆ ಇರುವುದಿಲ್ಲ, ಕೊಡುವ ಮನಸ್ಥಿತಿ ಬೆಳೆಸಿಕೊಂಡಲ್ಲಿ ಅದರಿಂದ ಸಿಗುವ ಸಂತೋಷ, ಸಾಂತ್ವನ ಅಪರಂಪಾರ ಎಂದರು.
ಸಂಚಾಲಕರಾದ ರುಕ್ಮಿಣಿ ನಾಯಕ್ ಮಾತನಾಡಿ, ವನವಾಸಿ ಕಲ್ಯಾಣ ಬೆಳೆದು ಬಂದ ರೀತಿ ಅದರ ಪರಂಪರೆ ಹಾಗೂ ವನವಾಸಿಗಳ ಸಂಸ್ಕ್ರತಿಯ ಬಗ್ಗೆ ಮನನ ಮಾಡಿಕೊಟ್ಟರು.
ಸುಮಾ ಮೂರ್ತಿ ಮಾತನಾಡಿ, ವನಯಾತ್ರೆಯಿಂದ ಆದ ಸ್ವ- ಅನುಭವವನ್ನು ನವಿರಾಗಿ ತೆರೆದಿಟ್ಟರು. ಗಾಯತ್ರಿ ಸುಮತೀಂದ್ರಾಚಾರ್ ವಂದಿಸಿದರು, ಅನ್ನಪೂರ್ಣ ರಂಗರಾಜನ್ ಸ್ವಾಗತಿಸಿದರು, ಗೀತಾಪಂಡಿತ್ ಪ್ರಾರ್ಥಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post