ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾರ್ಚ್ 27ರಿಂದ ಮೂರು ದಿನಗಳ ಕಾಲ ಎಸ್.ಮಾಲತಿ ರಂಗೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ತಿಳಿಸಿದರು.
ಅವರು ಇಂದು ಶಿವಮೊಗ್ಗ ರಂಗಾಯಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಂಗೋತ್ಸವದ ಅಂಗವಾಗಿ ಕಲಾವಿದರ ಕಾಲ್ನಡಿಗೆ ಜಾಥಾ, ನಾಟಕ ಪ್ರದರ್ಶನ, ರಂಗ ಕಲಾವಿದರ ಸಮ್ಮಿಲನ, ರಂಗಭೂಮಿ ಕುರಿತಂತೆ ಸಂವಾದ ಮತ್ತು ವಿಚಾರಗೋಷ್ಟಿ, ರಂಗಗೀತೆಗಳ ಗಾಯನ ಸೇರಿದಂತೆ ವೈವಿಧ್ಯಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮಾರ್ಚ್ 27ರಂದು ಸಂಜೆ 4:30ಕ್ಕೆ ವೇಷಭೂಷಣಗಳೊಂದಿಗೆ ಶಿವಪ್ಪನಾಯಕ ವೃತ್ತದಿಂದ ಶಿವಮೊಗ್ಗ ರಂಗಾಯಣದವರೆಗೆ ಜಿಲ್ಲೆಯ ಕಲಾವಿದರ ಜಾಥಾ ನಡೆಯಲಿದೆ. ಸಂಜೆ ೬ಗಂಟೆಗೆ ಮಾಜಿ ಶಾಸಕ ಆರ್.ಕೆ.ಸಿದ್ದರಾಮಣ್ಣ ಅವರು ರಂಗೋತ್ಸವಕ್ಕೆ ಚಾಲನೆ ನೀಡುವರು.
ಮಾಲತಿಯವರ ವ್ಯಕ್ತಿತ್ವದ ಕುರಿತಾಗಿ ಡಾ.ಜಯಪ್ರಕಾಶ ಮಾವಿನಕುಳಿ ಅವರು ಸಂಪಾದಿಸಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಬಳಿಕ ಪರಿವರ್ತನ ರಂಗಸಮಾಜ ಮೈಸೂರು ತಂಡದಿಂದ `ಬೆಟ್ಟದ ಜೀವ? ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಮಾರ್ಚ್ 28ರಂದು ಬೆಳಿಗ್ಗೆ 10:30ರಿಂದ ರಂಗಕಲಾವಿದರ ಸಮ್ಮಿಲನ, ರಂಗಭೂಮಿ ಕುರಿತು ಸಂವಾದ, ವಿಚಾರಗೋಷ್ಟಿಗಳು ನಡೆಯಲಿವೆ. ರಂಗಸಂಸ್ಕೃತಿಯ ಭವಿತವ್ಯ ಕುರಿತು ಶ್ರೀಪಾದ ಭಟ್ ಅವರು ವಿಷಯ ಮಂಡನೆ ಮಾಡುವರು. ಬಳಿಕ ಯುವ ರಂಗಕರ್ಮಿಗಳು ಮತ್ತು ರಂಗಭೂಮಿ ಸಾಂಗತ್ಯ ಮತ್ತು ಯುವ ರಂಗನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದರು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಯುವ ರಂಗ ನಿರ್ದೇಶಕರು ಸಂವಾದದಲ್ಲಿ ಭಾಗವಹಿಸುವರು. ಸಂಜೆ 6ಗಂಟೆಗೆ ಪೂರ್ವರಂಗದಲ್ಲಿ ಶಿವಮೊಗ್ಗ ರೆಪರ್ಟರಿ ಕಲಾವಿದರಿಂದ ರಂಗಗೀತೆ ಗಾಯನ ನಡೆಯಲಿದೆ. 6:30ಕ್ಕೆ ರಂಗನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ವಿನ್ಯಾಸ ಮತ್ತು ನಿರ್ದೇಶನದ ಹಗ್ಗದ ಕೊನೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಮಾರ್ಚ್ 29ರಂದು ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 6:30ಕ್ಕೆ ಯಶವಂತ ಚಿತ್ತಾಲರ ಅಬೋಲಿನ್ ಕಥೆಯಾಧಾರಿತ ಕೆ.ಜಿ.ಕೃಷ್ಣಮೂರ್ತಿ ಅವರ ನಿರ್ದೇಶನದ ಅಬ್ಬಲಿಗೆ ನಾಟಕ ಪ್ರದರ್ಶನ ನಡೆಯಲಿದೆ. ಎಲ್ಲಾ ಪ್ರದರ್ಶನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ರಂಗಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ, ಶಿವಮೊಗ್ಗ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ, ಪ್ರಧಾನ ಕಾರ್ಯದರ್ಶಿ ಲವ ಜಿ.ಆರ್, ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post