ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯೆಂದರೆ ಕೇಳಿದವರು ಯಾರಾದರೂ ಹೆಮ್ಮೆ ಪಡುತ್ತಾರೆ. ಐತಿಹಾಸಿಕ ಮತ್ತು ರಾಜಕೀಯವಾಗಿ ಪ್ರಸಿದ್ಧಿ ಪಡೆದ ಜಿಲ್ಲೆ. ಇಲ್ಲಿನ ಪ್ರವಾಸಿ ತಾಣಗಳೆಂದರೆ ರಾಜ್ಯದ ಇತರೆಡೆಯ ಜನತೆ ಆಸಕ್ತಿಯಿಂದ ವಿಚಾರಿಸುತ್ತಾರೆ. ಅಂತಹ ಪ್ರವಾಸಿತಾಣಗಳ ಬಗ್ಗೆ ನಾವು ಇನ್ನೂ ಹೆಚ್ಚು ಮಾಹಿತಿ ಪಡೆದುಕೊಳ್ಳಬೇಕು. ಪ್ರವಾಸಿಗರಿಗೆ ನಮ್ಮ ಜಿಲ್ಲೆ ಕುರಿತು ಮಾಹಿತಿ ನೀಡುವ ಹೊಣೆ ನಮ್ಮ ಮೇಲಿದೆ ಈ ದಿಸೆಯಲ್ಲಿ ವೇದಿಕೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದು ಶಿವಮೊಗ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಪಿ.ಸುಮಂಗಲ ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಮತ್ತು ನಗರದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವೇದಿಕೆ ಕಾರ್ಯದರ್ಶಿ ಎನ್. ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲ ಸ್ಥಳಗಳೂ ಪ್ರವಾಸಿ ಭೂಪಟದಲ್ಲಿ ಸ್ಥಾನಗಳಿಸಿಕೊಂಡಿಲ್ಲ. ನಮ್ಮ ಜಿಲ್ಲೆಯಲ್ಲಿ ಅಂತಹ ನೂರಾರು ಅಜ್ಞಾತ ಪ್ರವಾಸಿ ತಾಣಗಳಿವೆ. ಈಗ ಪ್ರಸ್ತುತ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಧ್ಯೇಯದಂತೆ ಎಲ್ಲ ತಾಣಗಳೂ ಡಿಜಿಟಲೀಕರಣವಾಗಿ ನಮ್ಮ ಮುಂದಿನ ಯುವ ಪೀಳಿಗೆಗೆ ಲಭ್ಯವಾಗುವಂತೆ ಮಾಡಬೇಕಿದೆ. ಅದಕ್ಕೆ ಯುವಜನರು ಪ್ರವಾಸಿ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಅಂತಹ ತಾಣಗಳಿಗೆ ಭೇಟಿ ನೀಡಿದಾಗ ಅವರು ಕಂಡಂತಹ ಕೊರತೆ ಮತ್ತು ಅಲ್ಲಿ ಅಭಿವೃದ್ಧಿಗೆ ಬೇಕಾದ ಸಲಹೆಗಳನ್ನು ಕೊಡುವಂತಾದರೆ ನಮ್ಮ ಶ್ರಮ ಸಾರ್ಥಕ ಅಭಿಪ್ರಾಯಪಟ್ಟರು.
ನಮ್ಮ ಜಿಲ್ಲೆಯಲ್ಲಿ ಪವಿತ್ರ ಸ್ಥಳಗಳೇ ಪ್ರಸಿದ್ಧ ಪ್ರವಾಸೀತಾಣಗಳಾಗಿವೆ. ಅವುಗಳನ್ನು ಪಾರಂಪರಿಕವಾಗಿ ನಮ್ಮ ಸಾಂಸ್ಕೃತಿಕ ಆಸ್ತಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ವ್ರವಾಸೋದ್ಯಮದ ಅಭಿವೃದ್ಧಿಗೆ ನಮ್ಮ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿವೆ ಎಂದ ಉಪನ್ಯಾಸಕ ಮಂಜುನಾಥ್, ತಮ್ಮ ಭಾಷಣದಲ್ಲಿ ಜಿಲ್ಲೆಯೇ ಅಲ್ಲದೇ ರಾಜ್ಯದ ಇತರ ಹಲವು ಪ್ರವಾಸಿ ತಾಣಗಳನ್ನು ಉದಾಹರಿಸಿದರು. ಕೇರಳದಂತಹ ರಾಜ್ಯ ಪರಿಸರಕ್ಕೆ ಹಾನಿಬಾರದಂತೆ ಪ್ರವಾಸೋದ್ಯಮವನ್ನ ಆರ್ಥಿಕವಾಗಿ ಬಲಗೊಳಿಸಿದೆ ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥರಾವ್ ಮಾತನಾಡಿ, ಪ್ರವಾಸೀ ತಾಣಗಳಲ್ಲಿ ಹೋಟೆಲ್ ವಸತಿ ಸೌಲಭ್ಯಗಳನ್ನು ನಾವು ಮಾಡಿದರೂ ಸರ್ಕಾರದ ಪ್ರೋತ್ಸಾಹವಿಲ್ಲದೇ ಹೋಟೆಲ್ ಉದ್ಯಮಿಗಳು ತಾವು ಹಾಕಿದ ಬಂಡವಾಳಕ್ಕೆ ನಷ್ಟ ಅನುಭವಿಸುವ ಸ್ಥಿತಿ ಒದಗುತ್ತಿದೆ. ಸರ್ಕಾರದ ಬೆಂಬಲ ಬೇಕು ಎಂದರು.
ಸಮಾರಂಭದ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಮಾತನಾಡಿ, ಪ್ರೇಕ್ಷಣೀಯ ಸ್ಥಳಗಳು ಆಕರ್ಷಣೀಯವಾಗಬೇಕಾದರೆ ಅಲ್ಲಿ ಸ್ಥಳೀಯ ಸಂಪನ್ಮೂಲಗಳ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕ ಪಾಲ್ಗೊಳ್ಳುವಿಕೆಯೂ ಅವಶ್ಯ. ಇಂದಿನ ವಿದ್ಯಾರ್ಥಿ ಸಮುದಾಯ ಡಿಜಿಟಲೀಕರಣಕ್ಕೆ ತಕ್ಕನಾಗಿ ತಮ್ಮ ಮನೋಭಾವ ರೂಪಿಸಿಕೊಳ್ಳಬೇಕಿದೆ ಎಂದರು.
ನಿರ್ಮಲಾ ಕಾಶಿ ಕಾರ್ಯಕ್ರಮ ನಿರೂಪಿಸಿದರು. ನಂತರ ಪ್ರವಾಸೋದ್ಯಮ, ಸಂಸ್ಕೃತಿ ರಕ್ಷಣೆ ಮತ್ತ ಡಿಜಿಟಲೀಕರಣ ರೂಪಾಂತರ ವಿಷಯ ಕುರಿತು ವಿಚಾರ ಸಂಕಿರಣ ನಡೆಯಿತು.
ವಿಶ್ವವೇ ಗ್ರಾಮವಾಗಿರುವ ಇಂದಿನ ಮಾಹಿತಿಯುಗದಲ್ಲಿ ಪ್ರವಾಸೀ ಮಾಹಿತಿಗಳನ್ನ ಪ್ರಸ್ತುತ ಡಿಜಿಟಲ್ ತಂತ್ರಜ್ಞಾನಕ್ಕೆ ವರ್ಗಾಯಿಸಿ ಯುವ ಜನಾಂಗಕ್ಕೆ ಮೊಬೈಲ್ ಸಾಧನಗಳ ಮೂಲಕ ಒದಗಿಸುವಲ್ಲಿ ಅಪಾರ ಕೆಲಸವಾಗಬೇಕಿದೆ. ಅಂತಹ ಪ್ರವಾಸೋದ್ಯಮಕ್ಕೆ ಪೂರಕವಾಗಿ ನಮ್ಮ ಯುವಜನತೆ ಈ ದಿಸೆಯಲ್ಲಿ ಮನಸ್ಸು ಮಾಡಬೇಕಿದೆ.
-ಡಾ.ಎನ್. ಸುಧೀಂದ್ರ, ವೇದಿಕೆ ನಿರ್ದೇಶಕ
ಶಿಕ್ಷಕ ಹಾಗೂ ಸಾಹಿತಿ ಪ್ರಕಾಶ್ ಆರ್ ಕಮ್ಮಾರ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಶಿಲ್ಪಕಲಾವೈಭವದ ಬಗ್ಗೆ ಭಾಷಣ ಮಾಡಿದರು. ಐತಿಹಾಸಿಕವಾಗಿ ಆಗಿನ ಅರಸರು ಕೃಷಿಕರ ಮೇಲಿಟ್ಟ ಪ್ರೀತಿಯನ್ನು ವಿವರಿಸಿದರು. ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ಬಗ್ಗೆ ಅಪಾರ್ಥಬರಿಸುವ ಮಾಹಿತಿಗಳಿರುವ ಬಗ್ಗೆ ಗಮನಸೆಳೆದರು.
ಇತಿಹಾಸ ಸಂಶೋಧಕ ಡಾಎಸ್.ಜಿ. ಸಾಮಗ ಮಾತನಾಡಿ, ಪ್ರವಾಸದ ಪರಿಭಾಷೆಯನ್ನು ವಿವರಿಸಿ ಮಾಹಿತಿಗಳೆಲ್ಲವೂ ಡಿಜಿಟಲೀಕರಣಗೊಂಡರೆ ಪ್ರವಾಸಿಗರಿಗೆ ಸಿಗುವ ಸವಲತ್ತುಗಳನ್ನು ಮನವರಿಕೆಮಾಡಿಕೊಟ್ಟರು.
ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಧ್ಯಪಕ ಡಾ. ಬಾಲಕೃಷ್ಣ ಹೆಗಡೆ ಮಾತನಾಡಿ, ಈಗ ಪದವಿ ಮುಗಿಸುವ ವಿದ್ಯಾರ್ಥಿ ಸಮುದಾಯ ನಿರುದ್ಯೋಗಿಗಳಾಗ ಬೇಕಿಲ್ಲ. ಡಿಜಿಟಲೀಕರಣದಿಂದ ಪ್ರವಾಸಿ ಸಂಸ್ಥೆಗಳ ಮಾಲೀಕರಾಗಿ ಕೈತುಂಬಾ ಹಣ ಸಂಪಾದನೆ ಮಾಡಬಹುದು. ಭಾರತದಲ್ಲಿ ತಮಿಳುನಾಡು ಪ್ರವಾಸಿ ಭೂಪಟದಲ್ಲಿ ಪ್ರಥಮವೆನ್ನಿಸಿದೆ. ಬೇರೆ ರಾಜ್ಯಗಳಲ್ಲಿಲ್ಲದ ಪ್ರವಾಸೀ ಆಕರ್ಷಣೆಗಳು ಕರ್ನಾಟಕದಲ್ಲಿ ಹೇರಳವಾಗಿವೆ. ಆದರೂ ನಮ್ಮ ರಾಜ್ಯ ಮೊದಲ ಹತ್ತು ಸ್ಥಾನಗಳಲ್ಲಿ ಇಲ್ಲದಿರುವುದು ಖೇದಕರ. ನಾವೆಲ್ಲರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದರು.
ಸಂಕಿರಣದ ಅಧ್ಯಕ್ಷತೆಯನ್ನು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಹಾಗೂ ವೇದಿಕೆ ಉಪಾಧ್ಯಕ್ಷ ಡಿ.ಎಂ. ಶಂಕರಪ್ಪ ಮಾತನಾಡಿ, ನಿಮ್ಮೆಲ್ಲರ ಧ್ವನಿಯಾಗಿ ವೇದಿಕೆ ಕೆಲಸಮಾಡಲಿದೆ. ನಮ್ಮ ಎಲ್ಲ ಮುಂದಿನ ಕಾರ್ಯಕ್ರಮಗಳಿಗೆ ಬೆಂಬಲ ನೀಡಬೇಕೆಂದು ಪ್ರವಾಸಪ್ರಿಯರನ್ನು ಕೋರಿದರು.
ಸಮಾರೋಪ ಭಾಷಣಕಾರರಾಗಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಅವರು ಮಾತನಾಡಿ ಮುಖ್ಯವಾಗಿ ನಮ್ಮ ವಿದ್ಯಾರ್ಥಿಗಳು ಸ್ಥಳೀಯವಾಗಿರುವ ಪ್ರವಾಸಿ ತಾಣಗಳನ್ನ ವೀಕ್ಷಿಸಬೇಕು. ಮೊದಲ ಆದ್ತೆ ಜಿಲ್ಲೆಯ ಪ್ರವಾಸಿ ತಾಣಗಳಾಗಿರಲಿ.ಅಲ್ಲಿಗೆ ನಿಮ್ಮ ಕುಟುಂಬದ ಹಿರಿಯರನ್ನೂ ಕರೆದೊಯ್ಯಿರಿ ಎಂದು ಕರೆಕೊಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್ ಮಾತನಾಡಿ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೇವಲ ಸರ್ಕಾರವನ್ನವಲಂಬಿಸದೇ ಸಾರ್ವಜನಿಕರೂ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ಅಲ್ಲಿನ ಕೊರತೆ ಮತ್ತು ಅಭಿವೃದ್ಧಿಗೆ ಸಲಹೆಗಳು ವಿಷಯದ ಬಗ್ಗೆ ಮುಕ್ತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮುಖ್ಯ ಅತಿಥಿ ಶಿವಕುಮಾರ್ ಬಹುಮಾನ ವಿತರಿಸಿದರು. ವೇದಿಕೆ ಸಹಕಾರ್ಯದರ್ಶಿ ಅ.ನ. ವಿಜೇಂದ್ರರಾವ್ ಕಾರ್ಯಕ್ರಮ ನಿರೂಪಿಸಿದರು.
ವರದಿ: ಡಾ.ಎನ್. ಸುಧೀಂದ್ರ
Discussion about this post