ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ 151 ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ವಿಗ್ರಹದ ಶಿಲಾನ್ಯಾಸ ಕಾರ್ಯಕ್ರಮವು ಜು.9ರಂದು ಬೆಳಿಗ್ಗೆ 10-30ಕ್ಕೆ ನಗರದ ಗುಡ್ಡೇಕಲ್ಲಿನ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಶ್ರೀ ಬಾಲಸುಬ್ರಹ್ಮಣ್ಯ ಟ್ರಸ್ಟ್ ಅಧ್ಯಕ್ಷ ಡಿ. ರಾಜಶೇಖರಪ್ಪಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುಡ್ಡೇಕಲ್ಲಿನ ಬಾಲಸುಬ್ರಹ್ಮಣ್ಯ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ನಡೆಯುವ ಜಾತ್ರೆ ಇಡೀ ನಾಡಿನಲ್ಲಿಯೇ ಹೆಸರಾಗಿದೆ. ಪವಿತ್ರ ಕ್ಷೇತ್ರವೂ ಆಗಿದೆ. ಈ ಕ್ಷೇತ್ರವನ್ನುಮತ್ತಷ್ಟು ಅಭಿವೃದ್ಧಿಪಡಿಸಬೇಕು. ಪ್ರವಾಸೀ ತಾಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಇಲ್ಲಿ ಅತೀ ಎತ್ತರದ ಮತ್ತು ವಿಶೇಷವಾದ ಜಗತ್ತಿನ ಗಮನ ಸೆಳೆಯುವಂತೆ ಮಾಡಲು ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.
ಜು.9ರಂದು ಬೆಳಿಗ್ಗೆ 10-30ಕ್ಕೆ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಕ್ಕೂಮುನ್ನ ಅಂದರೆ ಜು.7ರಂದು ಮಹಾಗಣಪತಿ ಹೋಮ, ಜು.8ರಂದು ದೀಪಾರಾಧನೆ, ಯಾಗಶಾಲೆ ಪ್ರವೇಶ ಕಾರ್ಯಕ್ರಗಳು ನಡೆಯಲಿವೆ ಎಂದರು.
ಈಗಾಗಲೇ ದೇವಸ್ಥಾನದಲ್ಲಿ ಮೂರು ಸಮುದಾಯಭವನಗಳಿದ್ದು, ಅತ್ಯಂತ ಬಡವರಿಗೆ ಕಡಿಮೆ ದರದಲ್ಲಿ ಮದುವೆ ಮತ್ತಿತರ ಕಾರ್ಯಗಳಿಗೆ ನೀಡುತ್ತಿದ್ದೇವೆ. ಪ್ರತಿ ಮಂಗಳವಾರ ಷಷ್ಠಿ, ಕೃತಿಕೆ ಮತ್ತು ವಿಶೇಷ ದಿನಗಳಂದು ಅನ್ನದಾಸೋಹ ಇರುತ್ತದೆ. ಈ ಅನ್ನ ದಾಸೋಹವನ್ನು ಪ್ರತಿ ದಿನವೂ ಏರ್ಪಡಿಸಬೇಕು ಎಂಬ ಇಚ್ಛೆ ನಮಗಿದೆ. ಹಾಗೆಯೇ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಇಲ್ಲಿ ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ನಿರಂತರವಾಗಿ ಏರ್ಪಡಿಸುವ ಉದ್ದೇಶ ಹೊಂದಿದ್ದೇವೆ. ಜೊತೆಗೆ ವೃದ್ಧಾಶ್ರಮ, ಅನಾಥ ಮಕ್ಕಳಿಗೆ ವಸತಿಶಾಲೆ, ವೇದ ಪಾಠಶಾಲೆ ಪ್ರಾರಂಭಿಸಲಾಗುವುದು ಎಂದರು.
ಈ ಎಲ್ಲಾ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದಲೇ 151 ಅಡಿ ಎತ್ತರದ ಬಾಲಸುಬ್ರಹ್ಮಣ್ಯ ವಿಗ್ರಹದ ಪ್ರತಿಷ್ಠಾಪನೆಯೂ ಸೇರಿದಂತೆ ಸುಮಾರು 12 ಕೋಟಿ ರೂ. ವೆಚ್ಚದಲ್ಲಿಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು.ಒಂದು ಸುಂದರ ಪ್ರವಾಸೀ ತಾಣವನ್ನಾಗಿ ಮಾಡಲಾಗುವುದು ಎಂದ ಅವರು ಈ ವಿಗ್ರಹವನ್ನು ಮಲೇಶಿಯಾದ ಖ್ಯಾತ ಶಿಲ್ಪಿ ಆರ್. ತ್ಯಾಗರಾಜನ್ ನಿರ್ಮಿಸಿಕೊಡುವರು ಎಂದರು.
Also read: ನಿವೃತ್ತಿಗೊಂಡ ಸೊರಬದ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮನದುಂಬಿ ವಿದಾಯ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಟ್ರಸ್ಟಿಗೆ 3 ಎಕರೆ ಜಾಗ ಕೊಟ್ಟಿದ್ದಾರೆ.ಈ ಜಾಗದಲ್ಲಿಯೇ ನಾವೀಗ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಶಾರದಾ ಎಸ್. ಪೂರ್ಯಾ ನಾಯ್ಕ, ಬಿ.ಕೆ.ಸಂಗಮೇಶ್, ಎಸ್. ರುದ್ರೇಗೌಡ, ಡಿ.ಎಸ್ ಅರುಣ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಇವರೊಂದಿಗೆ ಮೇಯರ್ ಶಿವಕುಮಾರ್, ಯಮುನಾ ರಂಗೇಗೌಡ, ಎಂ. ಶ್ರೀಕಾಂತ್, ಮೋಹನ್ ರೆಡ್ಡಿ,ಎನ್. ರಮೇಶ್, ಸಿ.ಎಸ್ ಷಡಾಕ್ಷರಿ, ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‍ಕುಮಾರ್ ಮುಂತಾದವರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಎಂ.ಪಿ. ಸಂಪತ್, ಟಿ.ರಘುಕುಮಾರ್, ಎಂ.ಪಿ.ಗಣೇಶ್, ಪಿ. ಸುಬ್ರಮಣಿ, ಎಂ. ಸುಬ್ರಮಣಿ, ಎ. ವಿಜಯನ್, ಕೆ. ಸುಬ್ರಮಣಿ, ಲೋಕೇಶ್ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post