ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಹಲವಾರು ಕೊಡುಗೆಗಳನ್ನು ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಮತ್ತೊಂದು ಕೊಡುಗೆ ನೀಡಿದ್ದು, ಶಿವಮೊಗ್ಗ-ಯಶವಂತಪುರ ನಡುವೆ ಇನ್ನೊಂದು ರೈಲು ಸಂಚಾರ ಆರಂಭವಾಗಲಿದೆ.
ಶಿವಮೊಗ್ಗ-ಯಶವಂತಪುರ ನಡುವೆ ತತ್ಕಾಲ್ ಎಕ್ಸ್‌ಪ್ರೆಸ್ ಹೊಸ ರೈಲು(06539-06540) ಜ.23ರಿಂದ ವಾರದಲ್ಲಿ ನಾಲ್ಕು ದಿನಗಳು ಸಂಚಾರ ಆರಂಭಿಸಲಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಂಸದರು, ಇದರಿಂದಾಗಿ ಶಿವಮೊಗ್ಗ-ಯಶವಂತಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇಂಟರ್’ಸಿಟಿ ರೈಲು ಮುಂದಿನ ದಿನಗಳಲ್ಲಿ ವಾರದ ಏಳು ದಿನಗಳು ಸಂಚಾರಕ್ಕೆ ಲಭ್ಯವಾದಂತಾಗಲಿದೆ. ಈ ಭಾಗದ ನಾಗರಿಕರು ತಮ್ಮ ಅಗತ್ಯತೆಗಳಿಗಾಗಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಇಲ್ಲಿನ ವಾಣಿಜ್ಯ ಚಟುವಟಿಕೆಗಳು, ವ್ಯವಹಾರ, ಪ್ರವಾಸೋದ್ಯಮ, ಉದ್ಯೋಗಾವಕಾಶಗಳ ಲಭ್ಯತೆ ಹಾಗೂ ಜಿಲ್ಲೆಯ ಸರ್ವಾಂಗೀಣ ವಿಕಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನಷ್ಟು ರೈಲ್ವೇ ಯೋಜನೆಗಳನ್ನು ಅನುಷ್ಠಾನಕ್ಕೆ ಯತ್ನಿಸಲಾಗುವುದು. ಅಲ್ಲದೇ ಜಿಲ್ಲೆಯ ನೆರೆಯ ಜಿಲ್ಲೆ ಹಾಗೂ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಅನುಷ್ಠಾನಗೊಳಿಸಲು ಈಗಾಗಲೇ ಯೋಜನೆಗಳನ್ನು ರೂಪಿಸಿ, ಸಂಬಂಧಿಸಿದ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಶಿವಮೊಗ್ಗ ಸಂಸದರಾಗಿದ್ದ ಸಂದರ್ಭದಲ್ಲಿ ಆರಂಭಿಸಲಾಗಿದ್ದ ರೈಲು ಗಾಡಿ ಸಂಖ್ಯೆ: 16579/16580 ಯಶವಂತಪುರ-ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿಗೆ ನೂತನವಾಗಿ ವಾರದಲ್ಲಿ ನಾಲ್ಕು ದಿನಗಳ ಯಶವಂತಪುರ-ಶಿವಮೊಗ್ಗ-ಯಶವಂತಪುರ ತತ್ಕಾಲ್ ವಿಶೇಷ ರೈಲು ಮಂಜೂರಾಗಿದ್ದು, ಇದರ ಸೇವೆಯನ್ನು ಜನವರಿ 23 ಗುರುವಾರದಂದು ಚಾಲನೆ ನೀಡಲಾಗುವುದು. ಇದರಿಂದ ಯಶವಂತಪುರ-ಶಿವಮೊಗ್ಗ-ಯಶವಂತಪುರ ಇಂಟರ್ ಸಿಟಿ ರೈಲು ಇನ್ನು ಮುಂದೆ ವಾರದ 7 ದಿನವು ಸಂಚರಿಸಲಿದೆ ಎಂದವರು ತಿಳಿಸಿದ್ದಾರೆ.
ವಾರದಲ್ಲಿ 3 ದಿನ ಅಂದರೆ ಶನಿವಾರ, ಭಾನುವಾರ ಮತ್ತು ಸೋಮವಾರ ಮಾತ್ರ ಸಂಚರಿಸುತ್ತಿದ್ದ ರೈಲು ಸಂಖ್ಯೆ: 16579/16580 ಒಂದು ಜನಪ್ರಿಯ ರೈಲು ಗಾಡಿಯಾಗಿದ್ದು ವಾರದ ಉಳಿದ ದಿನಗಳು ಸಹ ಈ ರೈಲುಗಳಿಗೆ ಬೇಡಿಕೆ ಇತ್ತು. ಆದಕಾರಣ ವಾರದ ಇನ್ನುಳಿದ ದಿನಗಳಲ್ಲಿಯು ರೈಲು ಸೇವೆಯನ್ನು ಆರಂಭಿಸಲು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಈಗ ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ರೈಲು ಸಂಖ್ಯೆ: 06539/06540 ಯಶವಂತಪುರ-ಶಿವಮೊಗ್ಗ-ಯಶವಂತಪುರ ತತ್ಕಾಲ್ ಸ್ಪೆಷಲ್ ಆಗಿ ಸಂಚರಿಸಲಿದೆ.
ಈ ರೈಲು ಬೆಳಿಗ್ಗೆ 9:00 ಗಂಟೆಗೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 02.45 ಗಂಟೆಗೆ ಶಿವಮೊಗ್ಗ ತಲುಪಿ ಶಿವಮೊಗ್ಗದಿಂದ ಮಧ್ಯಾಹ್ನ 3.30ಕ್ಕೆ ಹೊರಟು ರಾತ್ರಿ 9.00ಕ್ಕೆ ಗಂಟೆಗೆ ಯಶವಂತಪುರ ತಲುಪಲಿದೆ. ಮಾರ್ಗ ಮಧ್ಯೆ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬಿರೂರು, ತರೀಕೆರೆ ಹಾಗೂ ಭದ್ರಾವತಿಗಳಲ್ಲಿ ಈ ರೈಲು ನಿಲುಗಡೆಯನ್ನು ಹೊಂದಿರುತ್ತದೆ ಎಂದವರು ತಿಳಿಸಿದ್ದಾರೆ.
ಈ ರೈಲು ಸೇವೆಗೆ ಜನವರಿ 23ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಗ್ರಾಮೀಣಾಭಿವೃದ್ಧಿ, ಪಂಚಾಯತ್’ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದವರು ತಿಳಿಸಿದ್ದಾರೆ.
ಈ ನೂತನ ರೈಲು ಸೇವೆಗಳ ಆರಂಭಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ಪಿಯುಶ್ ಗೋಯಲ್, ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post