ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಬಾರಿಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಜಿಲ್ಲೆಯ ಮೂರು ಪಾರಂಪರಿಕ ತಾಣಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ DC Selvamani ಅವರು ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಗ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಭದ್ರಾವತಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ, ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ಇಕ್ಕೇರಿಯ ಅಘೋರೇಶ್ವರ ದೇವಾಲಯದ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಸಲಾಗುವುದು. ದಿನಾಚರಣೆ ಅಂಗವಾಗಿ ಯೋಗ ಗೀತೆ, ಯೋಗ ಪ್ರದರ್ಶನ ಮತ್ತು ಸಭಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ಅವರು ಸೂಚನೆ ನೀಡಿದರು.
Also read: ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಹೊರಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ವ್ಯವಸ್ಥೆ ಮಾಡಬೇಕು. ಮಳೆ ಬರುವ ಸಾಧ್ಯತೆಯಿದ್ದರೆ ಪರ್ಯಾಯ ವ್ಯವಸ್ಥೆಯನ್ನು ಮೊದಲೇ ಸಿದ್ಧಗೊಳಿಸಬೇಕು. ಯೋಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಬೇಕು ಎಂದು ಅವರು ಹೇಳಿದರು.
ಯೋಗ ಸ್ಪರ್ಧೆ ಆಯೋಜನೆ:
ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಯೋಗ ಸ್ಪರ್ಧೆಗಳನ್ನು ಆಯೋಜಿಸಬೇಕು. ಇದೇ ರೀತಿ ಸಾರ್ವಜನಿಕರಿಗಾಗಿ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಯೋಗ ಸ್ಪರ್ಧೆಗಳನ್ನು ಆಯೋಜಿಸುವಂತೆ ಅವರು ತಿಳಿಸಿದರು. ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯವಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಆಯುರ್ವೇದಿಕ್ ಕಾಲೇಜು ವತಿಯಿಂದ ಸೂಕ್ತ ಸ್ಥಳದಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಬೇಕು ಎಂದು ಅವರು ಹೇಳಿದರು.
ಯೋಗ ದಿನಾಚರಣೆ ಅಂಗವಾಗಿ ಹೊರ ತರಲಾದ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post