ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸದೃಢ ಆರೋಗ್ಯ ಕಲಿಸುವುದೇ ಯೋಗ. ಕುಳಿತುಕೊಳ್ಳಲು ಕಲಿತರೆ ಯೋಗಾಸನ ಎಂದು ಹೇಳುತ್ತಾರೆ. ಯೋಗವು ಮನುಷ್ಯನ ಯೋಗಾಯೋಗವನ್ನೇ ಬದಲಿಸುತ್ತದೆ ಎಂದು ಆದಿಚುಂಚನಗಿರಿ ಶಾಖಾಮಠದ ಶ್ರೀ ನಾದಮಯಾನಂದನಾಥ ಶ್ರೀಗಳು ಹೇಳಿದ್ದಾರೆ.
ಅವರು ಇಂದು ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಆಯುಷ್ ಸಚಿವಾಲಯ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥಾನ, ವೇದವ್ಯಾಸ ಯೋಗ #Yoga ಪ್ರತಿಷ್ಠಾನ ಮೈಸೂರು ಹಾಗೂ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಯೋಗೋತ್ಸವ ಸಮಿತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯೋಗೋತ್ಸವ-2026ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯೋಗದ ಅರ್ಥದಲ್ಲಿ ಎಲ್ಲಾ ರೋಗಕ್ಕೂ ಯೋಗವೇ ಮದ್ದಾಗಿ ಕೆಲಸ ಮಾಡುತ್ತದೆ. ಪ್ರಕೃತಿಯಿಂದ ನಾವು ಶುದ್ಧ ಆಮ್ಲಜನಕವನ್ನು ಸ್ವೀಕಾರ ಮಾಡುತ್ತೇವೆ. ಜೀವಾತ್ಮವನ್ನು ಪರಮಾತ್ಮನೊಂದಿಗೆ ಬೆರೆಸುವುದು ಮಿಥ್ಯೆ ಎನ್ನುತ್ತೇವೆ. ಗಾಳಿಯನ್ನು ಪ್ರತಿಯೊಬ್ಬರೂ ಸ್ವೀಕರಿಸುತ್ತೇವೆ. ಅದು ಕಣ್ಣಿಗೆ ಕಾಣುವುದಿಲ್ಲ. ಅದೇ ಚೈತನ್ಯವೇ ಪರಮಾತ್ಮ. ಅದು ನಿಂತರೆ ಭೌತಿಕ ದೇಹ ತೊರೆದು ಹೋದ ಹಾಗೆ. ವಾಯು ದೇಹದಲ್ಲಿ ಇರುವವರೆಗೆ ಮಾತ್ರ ಪ್ರಾಣಕ್ಕೆ ಬೆಲೆ. ಪ್ರಾಣದ ಉಸಿರುವ ಸ್ಥಿರವಾಗಿರುವುದೇ ಪ್ರಾಣಾಯಾಮ. ಈ ಕಾಯವನ್ನು ಸುಸ್ಥಿತಿಯಲ್ಲಿಡಬೇಕಾದರೆ ಅದು ಯೋಗದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳಲ್ಲಿ ಸ್ಮರಣಶಕ್ತಿಯನ್ನು ಯೋಗ ಹೆಚ್ಚಿಸುತ್ತದೆ. ದೇಹವನ್ನು ಪ್ರತಿನಿತ್ಯ ದಂಡಿಸಬೇಕು. ಆರೋಗ್ಯಯುತ ಆಹಾರ ಸೇವಿಸಬೇಕು. ಪ್ರತಿನಿತ್ಯ ಯೋಗಾಭ್ಯಾಸ ಮಾಡಬೇಕು. ಅಷ್ಠಾಂಗ ಯೋಗದ ಅಭ್ಯಾಸ ಮಾಡಬೇಕು. ಅನೇಕ ರೋಗಿಗಳಿಗೆ ಯೋಗಮುದ್ರೆಯಿಂದಲೇ ಪರಿಹಾರ ದೊರೆತ ಉದಾಹರಣೆಗಳಿವೆ. ಇವತ್ತು ಪ್ರತಿಯೊಬ್ಬರೂ ವಿಷಪೂರಿತ ಗಾಳಿ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿದೆ. ನಮ್ಮ ಆರೋಗ್ಯ ಕಾಪಾಡಲು ಮತ್ತು ಬಲಿಷ್ಟ ಭವ್ಯ ಭಾರತದ ನಿರ್ಮಾಣಕ್ಕೆ ಯೋಗಾಭ್ಯಾಸವನ್ನು ನಾವೆಲ್ಲರೂ ಮಾಡಲೇಬೇಕು ಎಂದರು.
ಪ್ರಾಸ್ತಾವಿಕವಾಗಿ ಯೋಗೋತ್ಸವದ ಸಂಚಾಲಕರಾದ ಕೆ. ರಾಘವೇಂದ್ರ ಪೈ ಮಾತನಾಡಿ, ವಿಕಸನ ಮತ್ತು ಸಾಮರಸ್ಯ ಯೋಗದಿಂದ ಮಾತ್ರ ಸಾಧ್ಯ. ಪ್ರಧಾನಿ ಮೋದಿಯವರು ವಿಶ್ವದ ಸ್ವಾಸ್ಥ್ಯಕ್ಕಾಗಿ ಭಾರತೀಯ ಪರಂಪರೆಯ ಯೋಗವನ್ನು ವಿಶ್ವದೆಲ್ಲೆಡೆ ಪರಿಚಯಿಸಲು ವಿಶ್ವ ಯೋಗದಿನವನ್ನಾಗಿ ಆಚರಿಸಬೇಕು ಎಂದು ಸಲಹೆ ನೀಡಿದಾಗ ವಿಶ್ವದ 177 ರಾಷ್ಟ್ರಗಳು ಅವಿರೋಧವಾಗಿ ಜೂನ್ 21ರಂದು ವಿಶ್ವ ಯೋಗ ದಿನ ಆಚರಿಸಲು ತೀರ್ಮಾನಿಸಿದರು. ಜೂನ್ 21 ಸೂರ್ಯ ಹೆಚ್ಚು ಹೊತ್ತು ಇರುತ್ತಾನೆ. ಅದು ವಿಶೇಷವಾದ ದಿನ. ಅದಕ್ಕೆ ಪೂರ್ವಭಾವಿಯಾಗಿ ದೇಶದ 100 ನಗರಗಳಲ್ಲಿ 100 ದಿನ 100 ಸಂಸ್ಥೆಗಳ ಸಹಯೋಗದಲ್ಲಿ ಯೋಗದ ಜಾಗೃತಿ ಮೂಡಿಸಲು ರಾಷ್ಟ್ರೀಯ ಯೋಗೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಯೋಗಬಂಧುಗಳಿಗೆ ಪ್ರಮಾಣಪತ್ರ ಮತ್ತು ಶಿಕ್ಷಕರಿಗೆ ಪ್ರಶಂಸನಾಪತ್ರ ನೀಡಲಾಯಿತು. ಯೋಗ ಶಿಬಿರಾರ್ಥಿಗಳಿಂದ ಯೋಗ ಗುಚ್ಚದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು. ಹಾಗೂ ಯೋಗದ ಬಗ್ಗೆ ವಿಶೇಷ ಕೃತಿ ರಚಿಸಿದ ಡಾ.ಮಣೂರು ಪ್ರಕಾಶ್‌ಪ್ರಭು ಹಾಗೂ ಹಿರಿಯ ಯೋಗ ಗುರುಗಳಾದ ಭ.ಮ. ಶ್ರೀಕಂಠ ಅವರನ್ನು ಸನ್ಮಾನಿಸಲಾಯಿತು. ವೇದವ್ಯಾಸ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಕೆ.ವಸಂತ್‌ಕುಮಾರ್, ಕಣಾದ ಯೋಗ ಕೇಂದ್ರ ಅನಿಲ್‌ಕುಮಾರ್ ಶೆಟ್ಟರ್ ಇದ್ದರು
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಕಾಲೇಜಿನ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಯೋಗ ಬಂಧುಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















