ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವಜನತೆ ಸೇರಿದಂತೆ ನಾವೆಲ್ಲ ನಮ್ಮ ಸುತ್ತಲಿನ ಪರಿಸರವನ್ನು ಹಸಿರಾಗಿ, ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಇದೇ ನಾವು ಸಮಾಜಕ್ಕೆ ಕೊಡುವ ಅತ್ಯುತ್ತಮ ಕೊಡುಗೆ. ಯಾವಾಗಲೂ ಕೇವಲ ಪಡೆಯಲು ಇಚ್ಚಿಸುವ ನಾವು, ಉತ್ತಮ ಪರಿಸರ ಕೊಡುವ ಮೂಲಕ ಧನ್ಯರಾಗಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಜಿ. ಅನುರಾಧ ಕರೆ ನೀಡಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗ, ಸಹ್ಯಾದ್ರಿ ವಾಣಿಜ್ಯ ಕಾಲೇಜು ಹಾಗೂ ಎನ್‍ಎಸ್‍ಎಸ್ ಇವರ ಸಹಯೋಗದೊಂದಿಗೆ ಇಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಹವಾಮಾನ ಬದಲಾವಣೆ ಅರಿವು ನೀಡುವ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಹವಾಮಾನ ಬದಲಾವಣೆ ನಿಧಾನಗತಿಯಲ್ಲಿ ಆಗುತ್ತಿತ್ತು. ಅದರರ್ಥ ಪರಿಸರ ಮಾಲಿನ್ಯ ಕಡಿಮೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಬಹಳ ವೇಗವಾಗಿ ಹವಾಮಾನ ವೈಪರೀತ್ಯ ಆಗುತ್ತಿದೆ. ತಾಪಮಾನ ಯತೇಚ್ಚವಾಗಿ ಏರುತ್ತಿದೆ. ಇದು ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಅಭಿವೃದ್ದಿ ಮತ್ತು ನಗರೀಕರಣದ ಪರಿಣಾಮ. ಯುವಜನರಾದ ನೀವು ಪ್ರಾಕೃತಿಕ ವೈಪರೀತ್ಯಕ್ಕೆ ಕಾರಣಗಳೇನು, ಇದಕ್ಕೆ ಪರಿಹಾರೋಪಾಯಗಳೇನು ಎಂದು ವಿಮರ್ಶಿಸಬೇಕು ಎಂದರು.
ಬದಲಿ ಇಂಧನ, ಸೋಲಾರ್ ಬಳಕೆ, ಮಳೆಕೊಯ್ಲು ಸೇರಿದಂತೆ ಪರಿಸರ ಸಂರಕ್ಷಣೆಯ ನವನವೀನ ವಿಧಾನಗಳ ಬಗ್ಗೆ ಯುವಜನತೆ ಚಿಂತಿಸಿ, ಪರಿಹಾರ ಮಾರ್ಗಗಳತ್ತ ಕಾರ್ಯೋನ್ಮುಖರಾಗಬೇಕು. ಮನೆ ಸುತ್ತಮುತ್ತ ಸೇರಿದಂತೆ ನಮ್ಮ ಊರು, ನಗರವನ್ನು ಸ್ವಚ್ಚ ಮತ್ತು ಸುಂದರವಾಗಿಟ್ಟುಕೊಳ್ಳಬೇಕು. ನೀರಿನಲ್ಲಿ, ಮನೆ ಟೆರೇಸ್ ಹೀಗೆ ಎಲ್ಲೆಡೆ ಗಿಡ ಬೆಳೆಸಬಹುದಾಗಿದ್ದು ತಮ್ಮ ಸುತ್ತಮುತ್ತ ಗಿಡ ಮರ ಬೆಳೆಸುವ ಮೂಲಕ ಸಾಧ್ಯವಾದಷ್ಟು ಕೊಡುಗೆಯನ್ನು ನೀಡಬೇಕು ಎಂದು ಯುವಜನತೆಗೆ ತಿಳಿ ಹೇಳಿದರು.
ಸ್ಮಾರ್ಟ್‍ಸಿಟಿ ಲಿ. ಕಂಪನಿ ಸೆಕ್ರೆಟರಿ ಶರತ್‍ಬಾಬು ಮಾತನಾಡಿ, ಇದು ಭಾರತ ಸರ್ಕಾರದ ಕಾರ್ಯಕ್ರಮವಾಗಿದೆ. ಸ್ಮಾರ್ಟ್‍ಸಿಟಿ ಯೋಜನೆಯು ನಗರದ ಮೂಲಸೌಕರ್ಯವನ್ನು ಉತ್ತಮಪಡಿಸುವುದಾಗಿದ್ದು, ಪರಿಸರ ಸ್ನೇಹಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಸ್ಮಾರ್ಟ್‍ಸಿಟಿಯ ಎಲ್ಲ ಯೋಜನೆಗಳಲ್ಲಿ ಪರಿಸರಸ್ನೇಹಿ ಕಾಳಜಿ ಇದೆ. ಸುಮಾರು 1 ಸಾವಿರ ಕೋಟಿಯ ಈ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶೇ.25 ಭಾಗವನ್ನು ನಗರ ಹಸಿರೀಕರಣಕ್ಕೆ ವ್ಯಯ ಮಾಡಲಾಗುವುದು. ಹಸಿರು ಉದ್ಯಾನವನಗಳು, ಹಸಿರು ಪ್ರದೇಶಗಳು ಹೀಗೆ ಜವಾಬ್ದಾರಿಯುತವಾಗಿ ಕಾಲು ಭಾಗ ಅನುದಾನವನ್ನು ಬಳಸಲಾಗುವುದು.
ಪ್ರಸ್ತುತ ನಗರದಲ್ಲಿ ಪರಿಸರ ಸಂರಕ್ಷಣೆ ಕೇಂದ್ರೀಕೃತವಾದ 14 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 10 ಕಾಮಗಾರಿಗಳು ಪೂರ್ಣಗೊಂಡಿವೆ. 02 ಕಾಮಗಾರಿಗಳು ಪ್ರಗತಿಯಲ್ಲಿವೆ. ಹಾಗೂ ಹಸಿರು ನಗರೀಕರಣ ಯೋಜನೆಯಡಿ ನಗರದಾದ್ಯಂತ 8630 ಮರಗಳನ್ನು ಬೆಳೆಸಲು ಸಸಿಗಳನ್ನು ನೆಡಲಾಗುತ್ತಿದೆ. ಹಾಗೂ ಮೂರು ವರ್ಷಗಳ ಕಾಲ ಇವುಗಳನ್ನು ಸ್ಮಾರ್ಟ್‍ಸಿಟಿ ವತಿಯಿಂದ ನಿರ್ವಹಿಸಲಾಗುವುದು. ನಗರದ 19 ಕಡೆಗಳಲ್ಲಿ ಪಾರ್ಕ್‍ಗಳ ಅಭಿವೃದ್ದಿ ಮಾಡಲಾಗುತ್ತಿದ್ದು, 12428 ಮರಗಳನ್ನು ಸ್ಮಾರ್ಟ್‍ಸಿಟಿ ವತಿಯಿಂದ ನೋಡಿಕೊಳ್ಳಲಾಗುತ್ತಿದೆ. ಹೀಗೆ ನಗರದ ಹಸಿರೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದಲ್ಲಿ, ನಗರ ಸುಂದರವಾಗುವುದರೊಂದಿಗೆ ಹಸಿರಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.
ಸ್ಮಾರ್ಟ್‍ಸಿಟಿ ಲಿ. ಮುಖ್ಯ ದತ್ತಾಂಶಗಳ ಅಧಿಕಾರಿ ಬಿ.ವರ್ಗೀಸ್ ಪ್ರಾಸ್ತಾವಿಕವಾಗಿ ಮಾತನಾಡಿ, ವಸತಿ ಮತ್ತು ನಗರ ವ್ಯವಹಾರ ಮಂತ್ರಾಲಯದ ನಿರ್ದೇಶನದಂತೆ ಸ್ಮಾರ್ಟ್‍ಸಿಟಿ ಯೋಜನೆ ಜಾರಿಯಲ್ಲಿರುವ ಎಲ್ಲ 100 ಸ್ಮಾರ್ಟ್‍ಸಿಟಿಗಳಲ್ಲಿ ನಗರ ಹವಾಮಾನ ಬದಲಾವಣೆ ಬಗ್ಗೆ ಅರಿವು ಮತ್ತು ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ಸಹ ಅದರ ಒಂದು ಭಾಗವಾಗಿದೆ. ಪ್ರಾಕೃತಿಕ ವೈಪರೀತ್ಯದ ಪರಿಣಾಮ ಮನುಕುಲದ ಮೇಲೆ ಹೇಗೆಲ್ಲ ಆಗುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಹಾರೋಪಾಯ ಕುರಿತು ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡುವ ಉದ್ದೇಶ ಹೊಂದಲಾಗಿದೆ. ಪರಿಸರ ಸಂರಕ್ಷಣೆ ಮಾಡುವುದು ಅತ್ಯಂತ ಜರೂರಾದ ಕೆಲಸವಾಗಿದ್ದು ಸರ್ಕಾರದೊಂದಿಗೆ ಯುವಜನರಾದ ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರೀಕರು ಕೈಜೋಡಿಸಬೇಕು. ಬದಲಿ ಇಂಧನ, ಸೈಕಲ್ ಬಳಕೆ, ಸಾರ್ವಜನಿಕ ಸಾರಿಗೆ ಬಳಕೆ ಸೇರಿದಂತೆ ಯುವಜನತೆ ನವೀನ ಯೋಜನೆಗಳೊಂದಿಗೆ ಹಾಗೂ ಪರಿಸರ ನಾಶ ತಡೆಗಟ್ಟುವ ಪರಿಹಾರೋಪಾಯಗಳೊಂದಿಗೆ ಮುಂದೆ ಬರಬೇಕು ಎಂದರು.
ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈದೇಹಿ, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಹಾಗೂ ಸ್ಮಾರ್ಟ್‍ಸಿಟಿ ಲಿ. ಎಜಿಎಂ ರತ್ನಾಕರ್ ಮಾತನಾಡಿ, ತಾವುಗಳು ಸಮಕಾಲೀನರು ಹಾಗೂ ಮಲೆನಾಡಿನವರಾಗಿದ್ದು ಸುಮಾರು 40 ವರ್ಷಗಳ ಹಿಂದೆ ಮಲೆನಾಡಿನ ವಾತಾವರಣ ಅತ್ಯಂತ ತಂಪಾಗಿಯೂ, ಮಳೆಗಾಲ 6 ತಿಂಗಳು ಇರುತಿತ್ತು ಹಾಗೂ ಎಲ್ಲೆಡೆ ಹಸಿರು, ನೀರಿನ ಸೆಲೆ ಇರುತ್ತಿತ್ತು. ಕೇವಲ 40 ವರ್ಷಗಳಲ್ಲಿ ತಾಪಮಾನ ಯತೇಚ್ಚವಾಗಿ ಏರಿದೆ, ಪರಿಸರ ಹದಗೆಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಯುವ ವಿದ್ಯಾರ್ಥಿಗಳು ಪರಿಸರ ಸಂರಕ್ಷಿಸುವಲ್ಲಿ ಕೈಜೋಡಿಸಬೇಕೆಂದು ತಿಳಿಸಿದರು.
ಜೆಎನ್‍ಎನ್‍ಸಿಸಿ ವಿಶ್ರಾಂತ ಪ್ರಾಚಾರ್ಯರಾದ ಪ್ರೊ.ಶ್ರೀಪತಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಪಿಪಿಟಿ ಪ್ರದರ್ಶನದ ಮೂಲಕ ಹವಾಮಾನ ಬದಲಾವಣೆಯ ಕಾರಣಗಳು, ಇದರ ಪ್ರತಿಕೂಲ ಪರಿಣಾಮ ಮತ್ತು ಪರಿಹಾರೋಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಶುಭಾ ಮರವಂತೆ ನಿರೂಪಿಸಿದರು. ಕುವೆಂಪು ವಿವಿ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಪರಿಸರ ನಾಗರಾಜ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post