ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾವಿನ್ಯ ಪ್ರಯೋಗಾಲಯಗಳು ಶಾಲಾ ಹಂತದಲ್ಲಿಯೇ ಸ್ಥಾಪಿಸುವುದರ ಮೂಲಕ ಅದ್ಭುತವಾದ ಯುವ ವಿಜ್ಞಾನಿಗಳು ರೂಪಗೊಳ್ಳಲು ಸಾಧ್ಯವಾಗಲಿದೆ ಎಂದು ಸಂಸದರಾದ ಬಿ.ವೈ ರಾಘವೇಂದ್ರ ಅಭಿಪ್ರಾಯಪಟ್ಟರು
ಇಂದು ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಭಾರತ ಸರ್ಕಾರದ ನೀತಿ ಅಯೋಗ ಮತ್ತು ಅಟಲ್ ಇನೊವೇಷನ್ ಮಿಷನ್ ಸಹಯೋಗದಲ್ಲಿ ನೂತನವಾಗಿ ಸ್ಥಾಪಿಸಿರುವ ‘ಅಟಲ್ ಟಿಂಕರಿಂಗ್ ಲ್ಯಾಬ್’ ಅನಾವರಣಗೊಳಿಸಿ ಮಾತನಾಡಿದ ಅವರು ನಮ್ಮ ದೇಶದ ಯುವ ಶಕ್ತಿ ಪ್ರಾಯೋಗಿಕ ಚಿಂತನೆಗಳಿಂದ ಹೊರಹೊಮ್ಮುವ ಸಲುವಾಗಿ ಭಾರತ ಸರ್ಕಾರ ಇಂತಹ ಪೂರಕ ವೇದಿಕೆಗಳನ್ನು ನೀಡುತ್ತಿದೆ. ಹೊಸ ಶಿಕ್ಷಣ ನೀತಿಯನ್ನು ಅನುಷ್ಟಾನಗೊಳಿಸುವುದರ ಮೂಲಕ ಮೌಲ್ಯಾಧಾರಿತ ಮತ್ತು ಕೌಶಲ್ಯಯುತ ಶೈಕ್ಷಣಿಕ ವ್ಯವಸ್ಥೆ ರೂಪಗೊಳ್ಳಲಿದೆ. ಒಂದು ಮಗುವಿನ ನಿಜವಾದ ಪ್ರೇರಣಾ ಶಕ್ತಿಯೆಂದರೇ ಅದು ಅವರ ತಂದೆ ತಾಯಿಗಳು. ಉತ್ತಮ ನಡವಳಿಕೆ, ಮೌಲ್ಯಾಧಾರಿತ ಜೀವನದ ಪ್ರಾರಂಭಿಕ ಹಂತಕ್ಕೆ ಮನೆಯೇ ಮೊದಲ ಪಾಠ ಶಾಲೆ. ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಬೆಳೆಯಲು ಪೋಷಕರ ಮತ್ತು ವಿದ್ಯಾ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಇಂದು ಶಿವಮೊಗ್ಗ ಜಿಲ್ಲೆ ಎಜುಕೇಷನ್ ಹಬ್ ಆಗಿ ನಿರ್ಮಾಣವಾಗುತ್ತಿದ್ದು ಮುಂದಿನ ದಿನಗಳಲ್ಲಿ ನಮ್ಮ ಮಲೆನಾಡಿನ ಯುವ ಸಮೂಹ ಯಾವುದೇ ವಿಷಯಗಳ ಕುರಿತು ವಿದ್ಯಾಭ್ಯಾಸ ನಡೆಸಲು ಇತರೇ ಸ್ಥಳಗಳಿಗೆ ತೆರಳದೆ ನಮ್ಮ ಜಿಲ್ಲೆಯಲ್ಲಿಯೇ ಓದಿ ಪ್ರಾದೇಶಿಕ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವಂತಾಗುತ್ತದೆ ಎಂದು ಹೇಳಿದರು.
ಎನ್.ಇ.ಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಶಿಕ್ಷಣದ ವ್ಯವಸ್ಥೆಯಲ್ಲಿ ಕಲಿಕೆ ಮತ್ತು ಅನುಷ್ಠಾನ ಎರಡು ಪ್ರಮುಖ ಭಾಗಗಳಾಗಿವೆ. ಕಲಿಕೆ ತರಗತಿಯ ಮೂಲಕ ಸಾಧ್ಯವಾದರೇ ಕೌಶಲ್ಯಯುತ ಆವಿಷ್ಕಾರಿ ಚಿಂತನೆಗಳನ್ನು ಅನುಷ್ಟಾನಗೊಳಿಸಲು ಇಂತಹ ಅಟಲ್ ಲ್ಯಾಬ್ ಗಳಿಂದ ಸಾಧ್ಯ. ಅಂತಹ ನಾವಿನ್ಯಯುತ ಪ್ರಯೋಗಾಲಯ ನಮ್ಮ ಶಾಲೆಯಲ್ಲಿ ರೂಪಗೊಂಡಿರುವುದು ಸಂತೋಷದ ವಿಚಾರವಾಗಿದೆ. ಸುಮಾರು ಹನ್ನೆರಡು ಲಕ್ಷ ರೂಪಾಯಿ ವೆಚ್ಚದ ಪ್ರಯೋಗಾಲಯದಲ್ಲಿ ಆವಿಷ್ಕಾರಿ ವಿಷಯಗಳಾದ ರೊಬೊಟಿಕ್ಸ್, ತ್ರಿಡಿ ತಂತ್ರಜ್ಞಾನ, ಡ್ರೋಣ್, ಲೆಗೊಬೊಟ್, ಕೃತಕ ಬುದ್ದಿಮತ್ತೆಯಂತಹ ನಾವಿನ್ಯ ವಿಷಯಗಳ ಕುರಿತು ವಿದ್ಯಾರ್ಥಿಗಳು ಅಧ್ಯಯನ ನಡೆಸಲಿದ್ದಾರೆ.
ವೇದಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಆರ್ಯವೈಶ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಡಿ.ಎಸ್.ಅರುಣ್, ಪಾಲಿಕೆ ಸದಸ್ಯರಾದ ಎಚ್.ಸಿ. ಯೊಗೀಶ್, ಡಿಡಿಪಿಐ ಎಂ.ಎನ್.ರಮೇಶ್, ಡಯಟ್ ಪ್ರಾಂಶುಪಾಲರಾದ ಬಸವರಾಜಪ್ಪ, ಬಿಇಒ ನಾಗರಾಜ.ಪಿ, ಅಬಕಾರಿ ಡಿವೈಎಸ್ಪಿ ಅಜಿತ್ ಕುಮಾರ್, ಎನ್.ಇ.ಎಸ್ ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ , ಸಹ ಕಾರ್ಯದರ್ಶಿ ಅಮರೇಂದ್ರ ಕಿರೀಟಿ, ಖಜಾಂಚಿ ಸಿ.ಆರ್.ನಾಗರಾಜ, ಪ್ರಾಂಶುಪಾಲರಾದ ನವೀನ.ಎಂ.ಪಾಯಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post