ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ #Cancer ಹೆಚ್ಚು ಪತ್ತೆಯಾಗುತ್ತಿದೆ ಇದನ್ನು ಶೀಘ್ರವೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ಡಾ. ತೇಜಲ್ ತಿಳಿಸಿದರು.
ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಎನ್. ಎಸ್.ಎಸ್ ಘಟಕ, ಐ.ಕ್ಯೂ.ಎ.ಸಿ ಘಟಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಾರನಹಳ್ಳಿ ಇವರು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ಹಾರನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಸ್ತನ ಕ್ಯಾನ್ಸರ್ ತಪಾಸಣೆ ಶಿಬಿರ (ಮ್ಯಾಮೊಗ್ರಫಿ ತಪಾಸಣೆ)ದಲ್ಲಿ ಮಾತನಾಡಿದ ಅವರು, ಸೂಕ್ತ ಸಂದರ್ಭದಲ್ಲಿ ಕ್ಯಾನ್ಸರ್ ಗುರುತಿಸಿ ಚಿಕಿತ್ಸೆ ನೀಡದಿದ್ದರೆ ಮಾರಣಾಂತಿಕವಾಗಬಹುದು. ಇದನ್ನು ಮನಗಂಡು ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಉಚಿತವಾಗಿ ಮ್ಯಾಮೊಗ್ರಫಿ #Mamography ತಪಾಸಣೆ ಮಾಡಿ ಕ್ಯಾನ್ಸರ್ ಪತ್ತೆ ಹಚ್ಚುತ್ತಿದೆ ಎಂದರು.
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಮಾತನಾಡಿ, ಕ್ಯಾನ್ಸರ್ ಒಂದು ಮುಖ್ಯವಾದ ಆರೋಗ್ಯ ಸಮಸ್ಯೆ. ಸೂಕ್ತ ಸಂದರ್ಭದಲ್ಲಿ ಅದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಗುಣಪಡಿಸಿಕೊಳ್ಳಬಹುದು. ಆದುದರಿಂದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಉಚಿತ ತಪಾಸಣಾ ಶಿಬಿರವನ್ನು ಗ್ರಾಮೀಣ ಮಹಿಳೆಯರಿಗೆ ನಡೆಸಿಕೊಡುತ್ತಿರುವುದು ಒಂದು ಮುಖ್ಯ ಸಾಮಾಜಿಕ ಸೇವೆ ಎಂದರು.
ಈ ಶಿಬಿರದಲ್ಲಿ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತವಾಗಿ ಸ್ತನ ಪರೀಕ್ಷೆ ಮ್ಯಾಮೊಗ್ರಫಿ ಸ್ಕ್ಯಾನಿಂಗ್ ನಡೆಸಲಾಗಿದೆ. ಇದಲ್ಲದೆ ವೈದ್ಯರು ಮಹಿಳೆಯರಿಗೆ ಈ ಕುರಿತು ಅರಿವು ಮೂಡಿಸಿರುತ್ತಾರೆ. ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಶ್ರಮವಹಿಸಿ ಭೈರನಕೊಪ್ಪ, ಹಾರನಹಳ್ಳಿ, ಎಡವಾಲ, ತ್ಯಾಜವಳ್ಳಿ, ರಾಮನಗರ, ಕೊನಗನವಳ್ಳಿ ಗ್ರಾಮಗಳಿಗೆ ತೆರಳಿ ಮನೆಗಳಲ್ಲಿ ಈ ಕುರಿತು ಪ್ರಚಾರವನ್ನು ಮಾಡಿರುತ್ತಾರೆ ಎಂದು ತಿಳಿಸಿದರು.
ಶಿಬಿರಕ್ಕೆ ಶಿವಮೊಗ್ಗ ಮಲ್ಟಿಪಲ್ ಸೋಷಿಯಲ್ ಸರ್ವೀಸ್ ಸೊಸೈಟಿಯ ಕಾರ್ಯಕರ್ತರು, ಹಾರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸತೀಶ್ ಹಾಗೂ ಹಾರನಹಳ್ಳಿಯ ಸುತ್ತಲಿನ ಗ್ರಾಮಗಳ ಆಶಾ ಕಾರ್ಯಕರ್ತರು ಸಹಕಾರವನ್ನು ನೀಡಿರುತ್ತಾರೆ. ಈ ಶಿಬಿರದಲ್ಲಿ ಸಮಸ್ಯೆ ಗುರುತಿಸಲ್ಪಟ್ಟ ಮಹಿಳೆಯರಿಗೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ರಿಯಾಯಿತಿಯಲ್ಲಿ ಆರೋಗ್ಯ ಸೇವೆಯನ್ನು ನೀಡಲಾಗುವುದೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿರುತ್ತಾರೆ. ಶಿಬಿರದ ನಿರ್ವಹಣೆಯನ್ನು ಉಪನ್ಯಾಸಕರಾದ ಮಂಜುನಾಥಸ್ವಾಮಿ ಮತ್ತು ನ್ಯಾನ್ಸಿ ಲವಿನ ಪಿಂಟೊ ವಹಿಸಿಕೊಂಡಿದ್ದರು. ಒಟ್ಟು 80 ಮಹಿಳೆಯರು ಉಚಿತ ಶಿಬಿರದ ಪ್ರಯೋಜನ ಪಡೆದುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post